ಭಾರೀ ಮಳೆಯಿಂದಾಗಿ 2018ರಲ್ಲಿ ಭೀಕರ ಭೂಕುಸಿತ ಕಂಡಿದ್ದ ಕೊಡಗು ಜಿಲ್ಲೆಗೆ ಈಗ ಮತ್ತೆ ಭೂಕುಸಿತದ ಆತಂಕ ಎದುರಾಗಿದೆ. ಕೊಡುಗು ಜಿಲ್ಲೆಯಲ್ಲಿ ಎರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದೆ.
ಕೊಡಗು ಜಿಲ್ಲೆ ಆಗ್ಗಾಗ್ಗೆ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗುತ್ತಿದೆ. ಈ ಬಾರಿಯೂ ಮುಂಗಾರು ಪೂರ್ವ ಮಳೆಗೆ ಕೊಡಗು ನಲುಗಿಹೋಗಿದೆ. ಮುಂಗಾರಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭಾರತೀಯ ಭೂಗರ್ಭ ಶಾಸ್ತ್ರಜ್ಞರು, “2018ರಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದ್ದ ಪ್ರದೇಶದಲ್ಲಿಯೇ ಈ ವರ್ಷವೂ ಭೂಕುಸಿತಗಳು ಸಂಭವಿಸುವ ಸಾಧ್ಯತೆಗಳಿವೆ. ಜಿಲ್ಲೆಯಲ್ಲಿ 43 ಸ್ಥಳಗಳನ್ನು ಅಪಾಯದ ವಲಯಗಳಾಗಿ ಗುರುತಿಸಲಾಗಿದೆ. ಹಟ್ಟಿಹೊಳೆ, ಕಾವೇರಿ ಹಾಗೂ ಲಕ್ಷ್ಮಣ ತೀರ್ಥ ನದಿ ತಟದ ನಿವಾಸಿಗಳು ಎಚ್ಚರಿಕೆಯಿಂದ ಇರಬೇಕು” ಎಂದು ವರದಿ ಸಲ್ಲಿಸಿದ್ದಾರೆ.
ವರದಿ ಬಂದ ಬೆನ್ನಲ್ಲೇ, ಪ್ರಾಕೃತಿಕ ವಿಕೋಪಗಳನ್ನು ಎದುರಿಸಲು ಮತ್ತು ನಿಭಾಯಿಸಲು ಕೊಡಗು ಜಿಲ್ಲಾಡಳಿತ ಸಿದ್ಧತೆ ನಡೆಸುತ್ತಿದೆ. ವರದಿಯಲ್ಲಿ ಸೂಚಿಸಲಾದ 43 ಸ್ಥಳಗಳ ಮೇಲೆ ನಿಗಾ ಇಡಲಾಗಿದೆ. ಆ ಪ್ರದೇಶಗಳಿಗೆ ಅಗತ್ಯ ತುರ್ತು ಸೇವೆ ಲಭ್ಯವಾಗುಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ.
ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ, ಅಗ್ನಿಶಾಮಕ ಸಿಬ್ಬಂದಿ, ನೋಡಲ್ ಅಧಿಕಾರಿಗಳು ಹಾಗೂ ಸ್ವಯಂ ಸೇವಕರ ತಂಡಗಳನ್ನು ರಚಿಸಲಾಗುತ್ತಿದೆ. ಪ್ರವಾಹ ಭೀತಿ ಇರುವ ಪ್ರದೇಶಗಳ ಬಳಿ ಆಶ್ರಯ ಕೇಂದ್ರಗಳನ್ನು ತೆರೆಯಲು ಸಿದ್ಧತೆಗಳು ನಡೆದಿವೆ ಎಂದು ವರದಿಯಾಗಿದೆ.
ಮೇ 27ರಂದು ಮುಂಗಾರು ನೈರುತ್ಯ ಮಾರುತಗಳು ಕೇರಳ ಪ್ರವೇಶಿಸಲಿವೆ. ಜೂನ್ 1ರ ವೇಳಗೆ ಮಾರುತಗಳು ಕರ್ನಾಟಕವನ್ನು ಪ್ರವೇಶಿಸಲಿವೆ. ಮುಂಗಾರಿನಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಇಲಾಖೆ ತಿಳಿಸಿದೆ.