- ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ
- ಉತ್ತರ ಒಳನಾಡಿನಲ್ಲಿ ಗಾಳಿಯ ವೇಗ ಗಂಟೆಗೆ 30-40ಕಿ.ಮೀ ತಲುಪುವ ಸಾಧ್ಯತೆ
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇನ್ನೂ ಐದು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕಳೆದ ಎರಡು ದಿನದಿಂದ ಬೆಂಗಳೂರಿನಲ್ಲಿ ಮಳೆಯಾಗುತ್ತಿದ್ದು, ಮಂಗಳವಾರ ಬೆಳಗ್ಗೆಯಿಂದಲೇ ಮಳೆ ಶುರುವಾಗಿದ್ದು, 1 ಸೆಂಟಿ ಮೀಟರ್‌ನಷ್ಟು ಮಳೆಯಾಗಿದೆ.
ರಾಜ್ಯದಲ್ಲಿ ಇನ್ನೂ ಐದು ದಿನ ಭಾರೀ ಮಳೆಯಾಗುವ ಹಿನ್ನೆಲೆ, ಹವಾಮಾನ ಇಲಾಖೆ ಕರಾವಳಿ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಯಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಎಚ್ಚರಿಕೆ ನೀಡಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಚಾಮರಾಜನಗರ, ಮೈಸೂರು, ದಾವಣಗೆರೆ, ತುಮಕೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಮಂಡ್ಯದಲ್ಲಿ ವ್ಯಾಪಕ ಮಳೆಯಾಗಲಿದ್ದು, ಈ ಹಿನ್ನೆಲೆ, ಹವಾಮಾನ ಇಲಾಖೆ ‘ಯೆಲ್ಲೋ ಅಲರ್ಟ್’ ಘೋಷಿಸಿದೆ.
ಧಾರವಾಡ, ಬೆಳಗಾವಿ, ಹಾವೇರಿ, ಬಾಗಲಕೋಟ, ವಿಜಯನಗರ ಹಾವೇರಿ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಜೋರು ಮಳೆಯಾಗಲಿದೆ. ಮಲೆನಾಡಿನ ಜಿಲ್ಲೆಗಳಾದ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಕೊಡಗಿನಲ್ಲಿ ಸಾಧಾರಣ ಮಳೆಯಾಗಿದೆ ಎಂದು ಹೇಳಿದೆ.
ಉತ್ತರ ಒಳನಾಡಿನಲ್ಲಿ ಗಾಳಿಯ ವೇಗವು ಗಂಟೆಗೆ 30-40 ಕಿ.ಮೀ ತಲುಪುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಬಿರುಗಾಳಿ ವೇಗವು 40-45 ಕಿ.ಮೀನಿಂದ 55 ಕಿ.ಮೀ ವೇಗದಲ್ಲಿ ಬೀಸಲಿದೆ ಹಾಗೂ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸೂಚಿಸಿದೆ.
ಬುಧವಾರ ಬೆಂಗಳೂರಿನಲ್ಲಿ ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇದ್ದರೆ, ಗರಿಷ್ಠ ಉಷ್ಣಾಂಶ 24 ಸೆಲ್ಸಿಯಸ್ ಇರಲಿದೆ ಎಂದು ಹೇಳಿದೆ.
“ಮುಂಗಾರು ಜೂನ್ 10 ರಂದು ಕರ್ನಾಟಕವನ್ನು ಪ್ರವೇಶಿಸಿದೆ. ಬಿಪೊರ್‌ಜಾಯ್ ಚಂಡಮಾರುತದ ಕಾರಣದಿಂದಾಗಿ, ಮಾನ್ಸೂನ್ ಚಲನೆಯು ಬದಲಾಗಿದೆ. ತಮಿಳುನಾಡು ಕರಾವಳಿಯಲ್ಲಿ ಚಂಡಮಾರುತದ ತೀವ್ರತೆಯ ಪರಿಣಾಮವಾಗಿ ಬೆಂಗಳೂರು ಮಾತ್ರವಲ್ಲದೆ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲೂ ಭಾರಿ ಮಳೆಯಾಗಿದೆ. ಮುಂದಿನ ವಾರಗಳಲ್ಲಿ ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ” ಎಂದು ಹವಾಮಾನ ಇಲಾಖೆ ತಜ್ಞ ಪ್ರಸಾದ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ನಾಲ್ಕು ವರ್ಷಗಳ ಬಳಿಕ ಬೀದಿನಾಯಿ ಗಣತಿ ಮಾಡಲು ಮುಂದಾದ ಪಾಲಿಕೆ
“ಮುಂದಿನ ಐದು ದಿನಗಳಲ್ಲಿ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಜೊತೆಗೆ ಎರಡು ದಿನಗಳ ಕಾಲ ಮೋಡ ಕವಿದ ವಾತಾವರಣ ಇರುತ್ತದೆ. ಮುಂದಿನ ಎರಡು ವಾರಗಳಲ್ಲಿ ನಗರವು ಸರಾಸರಿಗಿಂತ ಹೆಚ್ಚಿನ ಮಳೆಯನ್ನು ಪಡೆಯಬಹುದು” ಎಂದು ಹೇಳಿದ್ದಾರೆ.