ಕಳೆದ ವರ್ಷ ಭಾರೀ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗ್ರಾಮದಲ್ಲಿ ಗುಡ್ಡಕುಸಿದು, 9 ಮಂದಿ ಸಾವನ್ನಪ್ಪಿದ್ದರು. ಇಬ್ಬರೂ ನಾಪತ್ತೆಯಾಗಿದ್ದರು. ಆ ಘಟನೆ ರಾಷ್ಟ್ರಾದ್ಯಂತ ಸುದ್ದಿಯಾಗಿತ್ತು. ಸ್ಥಳೀಯರಲ್ಲಿ ಆತಂಕ, ಭಯ ಆವರಿಸಿತ್ತು. ಆ ಘಟನೆಯ ಆತಂಕ ಇನ್ನೂ ಮಾಸಿಲ್ಲ. ಇದೀಗ, ಮುಂಗಾರು ಪೂರ್ವ ಮಳೆಗೆ ಉತ್ತರ ಕನ್ನಡ ಜಿಲ್ಲೆಯಲ್ಲೇ ಮತ್ತೊಂದು ಗುಡ್ಡಕುಸಿತ ಸಂಭವಿಸಿದೆ. ಜಿಲ್ಲೆಯನ್ನು ಮತ್ತೆ ಆತಂಕಕ್ಕೆ ದೂಡಿದೆ.
ಭಾನುವಾರದಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ, ಉತ್ತರ ಕನ್ನಡ ಜಿಲ್ಲೆಯ ದೇವಿಮನೆ ಪ್ರದೇಶದಲ್ಲಿ ಹಾದುಹೋಗಿರುವ ಶಿರಶಿ-ಕುಮಟಾ ರಾಷ್ಟ್ರೀಯ ಹೆದ್ದಾರಿ 766Eಯಲ್ಲಿ ಗುಡ್ಡ ಕುಸಿದುಬಿದ್ದಿದೆ ರಸ್ತೆ ಮೇಲೆ ಬಂಡೆಕಲ್ಲುಗಳು, ಮಣ್ಣಿನ ರಾಶಿ ಬಿದ್ದಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ ಅದೃಷ್ಟವಷಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ರಾಷ್ಟ್ರೀಯ ಹೆದ್ದಾರಿ 766Eಯಲ್ಲಿ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಈ ಕಾಮಗಾರಿಗಾಗಿ ರಸ್ತೆ ಬದಿಯ ಗುಡ್ಡವನ್ನು ಕೊರೆಯಲಾಗಿತ್ತು. ಆದರೆ, ಅವೈಜ್ಞಾನಿಕವಾಗಿ ಗುಡ್ಡ ಕೊರೆದಿದ್ದ ಪರಿಣಾಮ, ಭಾರೀ ಮಳೆಗೆ ಗುಡ್ಡ ಕುಸಿದಿದೆ ಎಂದು ಆರೋಪಿಸಲಾಗಿದೆ.