ರಾಜ್ಯದ ಹಲವು ಭಾಗಗಳಲ್ಲಿ ಮುಂಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕರಾವಳಿ-ಮಲೆನಾಡು ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.
ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಲಿದೆ. ಉತ್ತರ ಒಳನಾಡು ಜಿಲ್ಲೆಗಳಾದ ಕಲಬುರಗಿ, ಬೆಳಗಾವಿ, ಬೀದರ್ನಲ್ಲಿಯೂ ಮಳೆ ಸುರಿಯಲಿದೆ ಎಂದು ಹೇಳಿದೆ.
ಬೆಂಗಳೂರು, ಮಂಡ್ಯ, ರಾಮನಗರ, ತುಮಕೂರು, ಮೈಸೂರು ಜಿಲ್ಲೆಗಳಲ್ಲಿಯೂ ಮೋಡ ಕವಿದ ವಾತಾವರಣವಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಕಳೆದ 15ಕ್ಕೂ ಹೆಚ್ಚು ದಿನಗಳಿಂದ ಮಲೆನಾಡು-ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಗುಡ್ಡಗಳು ಕುಸಿದಿವೆ. ಶಿರೂರಿನಲ್ಲಿ 12 ದಿನಗಳ ಹಿಂದೆ ಗುಡ್ಡ ಕುಸಿದ್ದು, 8 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ, ಮೂವರ ಮೃತದೇಹಗಳು ಪತ್ತೆಯಾಗಿಲ್ಲ. ಬೆಂಗಳೂರು-ಮಂಗಳೂರು ಹೆದ್ದಾರಿಯ ಶಿರಾಡಿ ಘಾಟ್‌ನಲ್ಲಿಯೂ ಗುಡ್ಡ ಕುಸಿದಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಸಕಲೇಶಪುರದ ಬಳಿ ರೈಲ್ವೇ ಹಳಿಯ ಮೇಲೂ ಗುಡ್ಡ ಕುಸಿದಿದ್ದು, ಬೆಂಗಳೂರು-ಮಂಗಳೂರು ರೈಲುಗಳ ಸಂಚಾರ ರದ್ದಾಗಿದೆ.