- ಎರಡು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಠಾಣೆಗೆ ನುಗ್ಗಿದ ನೀರು.
- ಅಗ್ನಿಶಾಮಕ, ಠಾಣೆಯ ಪೊಲೀಸರು ಹರಸಾಹಸಪಟ್ಟು ಸಂಗ್ರಹವಾದ ನೀರು ಹೊರತೆಗೆದಿದ್ದಾರೆ.
ಕಳೆದ ಎರಡು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದ ಪೊಲೀಸ್ ಠಾಣೆಗೆ ನೀರು ನುಗ್ಗಿ ಸಂಪೂರ್ಣ ಜಲವೃತಗೊಂಡಿದ್ದು, ಪೊಲೀಸರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.
ಈ ಕುರಿತು ಸಾಮಾಜಿಕ ಕಾರ್ಯಕರ್ತ ಶೇಖರ್ ಸೇಡಂ ಈದಿನ.ಕಾಮ್ ದೊಂದಿಗೆ ಮಾತನಾಡಿ, “ಮೂರು ವರ್ಷಗಳ ಹಿಂದೆ ಇದೇ ರೀತಿ ಮಳೆ ಸುರಿದಾಗ ಠಾಣೆಯಲ್ಲಿ ನೀರು ನುಗ್ಗಿತ್ತು, ನಾನು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಾಕಿದ್ದೇನೆ, ಅಷ್ಟೇ ಅಲ್ಲದೆ ಎಲ್ಲಾ ಅಧಿಕಾರಗಳ ಗಮನಕ್ಕೂ ತಂದು ಪೊಲೀಸ್ ಠಾಣೆ ಬೇರೆಯೆಡೆಗೆ ಸ್ಥಳಾಂತರಿಸಿ ಎಂದು ಮನವಿ ಮಾಡಿದ್ದೇನೆ. ಆದರೆ ಯಾರೂ ಗಂಭೀರವಾಗಿ ತೆಗೆದುಕೊಂಡಿಲ್ಲ. ಈಗಲಾದರೂ ಸಂಬಂಧಪಟ್ಟ ಮೇಲಾಧಿಕಾರಿಗಳು ಠಾಣೆಯನ್ನು ಬೇರೆ ಕಡೆಗೆ ಸ್ಥಳಾಂತರಿಸಬೇಕು” ಎಂದು ಒತ್ತಾಯಿಸಿದರು.
ಈ ಸಂಬಂಧ ಠಾಣೆಯ ಪಿಎಸ್ ಐ ಮಂಜುನಾಥ ರೆಡ್ಡಿ ಈದಿನ.ಕಾಮ್ ದೊಂದಿಗೆ ಮಾತನಾಡಿ, ” ಹೆಚ್ಚು ಮಳೆಯಾದರೆ ಸಾಕು ಠಾಣೆ ಪಕ್ಕದ ಗಟಾರ್ ನೀರು ಠಾಣೆಯೊಳಗೆ ನುಗ್ಗುತ್ತವೆ, ನಿನ್ನೆ ಠಾಣೆಯೊಳಗೆ ನೀರು ಸಂಗ್ರಹವಾಗಿತ್ತು. ಕಚೇರಿಯ ಟೇಬಲ್, ಕುರ್ಚಿ ಹಾಳಾಗಿವೆ, ಯಾವುದೇ ಕಾಗದ ಪತ್ರ ದಾಖಲೆಗಳಿಗೆ ಹಾನಿಯಾಗಿಲ್ಲ. ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಬೇರೆ ಕಡೆಗೆ ಸ್ಥಳಾಂತರ ಮಾಡುವ ಬಗ್ಗೆ ಭರವಸೆ ನೀಡಿದ್ದಾರೆ. ಆದರೆ ಇನ್ನೂ ಆಗಿಲ್ಲ. ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಠಾಣೆಯ ಪೊಲೀಸರು ಹರಸಾಹಸಪಟ್ಟು ಸಂಗ್ರಹವಾದ ನೀರು ಹೊರತೆಗೆದಿದ್ದಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಂದ ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆ
ಸಾರ್ವಜನಿಕರಿಗೆ ರಕ್ಷಣೆ ಒದಗಿಸುವ ಪೊಲೀಸ ಸಿಬ್ಬಂದಿ ತಮ್ಮ ಠಾಣೆಗೆ ನೀರು ನುಗ್ಗಿದ ಪರಿಣಾಮ ಹೈರಾಣಾಗುತ್ತಿರುವುದು ಪ್ರತಿವರ್ಷ ಮರುಕಳಿಸಿದರೂ ಮೇಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸದೇ ಇರುವುದು ವಿಪರ್ಸಯಾಸ ವಿಪರ್ಯಾಸವೇ ಸರಿ ಎನ್ನುವುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯ.