ಬೀದರ್ ನಗರ ಸೇರಿದಂತೆ ಜಿಲ್ಲೆಯ ಕೆಲವೆಡೆ ಗುಡುಗು, ಮಿಂಚು ಸಹಿತ ಗುರುವಾರ ಸಂಜೆ ಭಾರಿ ಮಳೆಯಾಗಿದೆ.
ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಪ್ರಖರವಾದ ಬಿಸಿಲಿತ್ತು. ಮಧ್ಯಾಹ್ನ 2 ಗಂಟೆಯಿಂದ ದಟ್ಟ ಕಾರ್ಮೋಡ ಕವಿದು 3 ಗಂಟೆಗೆ ಶುರುವಾದ ಬಿರುಗಾಳಿ ಸಹಿತ ಮಳೆ 1 ಗಂಟೆಗೂ ಹೆಚ್ಚು ಕಾಲ ಎಡೆಬಿಡದೆ ಧಾರಾಕಾರ ಮಳೆ ಸುರಿಯಿತು.
ಕಾದ ಹೆಂಚಿನಂತಾಗಿದ್ದ ಭೂಮಿಗೆ ಭರ್ಜರಿ ಮಳೆಯಿಂದ ಜನರಿಗೆ ತುಸು ತಂಪೆರೆಯಿತು. ಔರಾದ್, ಕಮಲನಗರ ತಾಲೂಕಿನ ಹಲವೆಡೆ ಗುಡುಗು ಸಹಿತ ಜೋರು ಮಳೆಯಾಗಿದೆ.
ಬೀದರ್ ನಗರದ ಪ್ರಮುಖ ರಸ್ತೆಗಳು, ಚರಂಡಿಗಳಲ್ಲಿ ಮಳೆ ನೀರು ಉಕ್ಕಿ ಹರಿದ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡಿತ್ತು.