ಮೃತದೇಹಗಳ ಮೇಲಿನ ವಿಕೃತ ಅತ್ಯಾಚಾರಗಳನ್ನು ತಡೆಯಲು ಮತ್ತು ಆರೋಪಿಗಳನ್ನು ಶಿಕ್ಷೆಗೆ ಒಳಪಡಿಸಲು ಅತ್ಯಾಚಾರ ತಡೆ ಕಾನೂನಿಗೆ ತಿದ್ದುಪಡಿ ತರಬೇಕು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 377ಕ್ಕೆ ತಿದ್ದುಪಡಿ ತಂದು, ಮೃತದೇಹಗಳ ಮೇಲೆ ಅತ್ಯಾಚಾರ ಎಸಗುವವರಿಗೂ ಶಿಕ್ಷೆ ನೀಡುವಂತೆ ಕಾನೂನು ರೂಪಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ತುಮಕೂರಿನ ಯುವತಿಯೊಬ್ಬರನ್ನು ಕಾಮುಕನೊಬ್ಬ ಕೊಲೆ ಮಾಡಿ, ಮೃತದೇಹದ ಮೇಲೆ ಅತ್ಯಾಚಾರ ಎಸಗಿದ್ದ. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಬಿ ವೀರಪ್ಪ ಹಾಗೂ ವೆಂಕಟೇಶ ನಾಯಕ್ ಟಿ ಅವರಿದ್ದ ವಿಭಾಗೀಯ ಪೀಠವು ಬುಧವಾರ ತೀರ್ಪು ಪ್ರಕಟಿಸಿದೆ. ಮೃತದೇಹದ ಮೇಲಿನ ಅತ್ಯಾಚಾರಕ್ಕೆ ಶಿಕ್ಷೆ ನೀಡಲು ಕಾನೂನಿನಲ್ಲಿ ಅವಕಾಶ ಇಲ್ಲದ ಕಾರಣ, ಕೊಲೆ ಅಪರಾಧಕ್ಕೆ ಮಾತ್ರ ಜೀವಾವಧಿ ಶಿಕ್ಷೆ ವಿಧಿಸಿದೆ.
ತೀರ್ಪು ನೀಡುವ ವೇಳೆ, ಮೃತದೇಹಗಳ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿಯೂ ಶಿಕ್ಷೆ ನೀಡುವ ರೀತಿಯಲ್ಲಿ ಕಾನೂನು ರೂಪಿಸಬೇಕು ಎಂದು ಹೇಳಿದೆ. ಈಗಾಗಲೇ, ಇಂಗ್ಲೆಂಡ್, ಕೆನಡಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾದಂತಹ ರಾಷ್ಟ್ರಗಳಲ್ಲಿ ಮೃತದೇಹಗಳ ಮೇಲೆ ವಿಕೃತಿ ಮೆರೆಯುವವರಿಗೆ ಶಿಕ್ಷೆ ನೀಡುವ ಕಾನೂನುಗಳಿವೆ ಎಂಬುದನ್ನು ಪೀಠವು ಗಮನಿಸಿದೆ.
ಆಸ್ಪತ್ರೆಗಳ ಶವಾಗಾರಗಳಲ್ಲಿಯೂ ಮಹಿಳೆಯರ ಮೃತ ದೇಹದ ಮೇಲೆ ಅತ್ಯಾಚಾರ ಎಸಗಿರುವ ಘಟನೆಗಳು ನಡೆದಿವೆ. ಇಂಥ ಕೃತ್ಯಗಳ ತಡೆಗಾಗಿ ಶವಾಗಾರಗಳಲ್ಲಿ ಸಿಸಿಟಿವಿ ಅಳವಡಿಸಲು ನ್ಯಾಯಪೀಠ ಶಿಫಾರಸು ಮಾಡಿದೆ.