ರಾಜ್ಯದಲ್ಲಿ ಮ್ಯಾನುಯಲ್ ಸ್ಕ್ಯಾವೆಂಜಿಂಗ್‌ಗೆ (ಮಲ ಹೊರುವ ಪದ್ದತಿ) ಸಂಬಂಧಿಸಿದ ಪ್ರಕರಣಗಳಲ್ಲಿ ಒಂದೇ ಒಂದು ಪ್ರಕರಣದಲ್ಲಿಯೂ ಶಿಕ್ಷೆಯಾಗುತ್ತಿಲ್ಲ. ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಏಕೆ ಸರ್ಕಾರ ವಿಫಲವಾಗಿದೆ ಎಂದು ರಾಜ್ಯ ಸರ್ಕಾರವನ್ನು ಕರ್ನಾಟಕ ಹೈಕೋರ್ಟ್ ಪ್ರಶ್ನಿಸಿದೆ.
ಕರ್ನಾಟಕದಲ್ಲಿ ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಕುರಿತು ಸುದ್ದಿ ವರದಿಗಳ ಆಧಾರದ ಮೇಲೆ ದಾಖಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆಯನ್ನು ಹೈಕೋರ್ಟ್ ನಡೆಸುತ್ತಿದೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರ ಪೀಠವು ಸೋಮವಾರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
“ಮಲ ಹೊರುವ ಪದ್ದತಿ ಮತ್ತು ಮ್ಯಾನುಯಲ್ ಸ್ಕ್ಯಾವೆಂಜರ್‌ಗಳನ್ನು ನೇಮಿಸಿಕೊಳ್ಳುವುದನ್ನು ನಿಷೇಧಿಸುವ ಉದ್ದೇಶದಿಂದ ಉದ್ಯೋಗ ನಿಷೇಧ ಮತ್ತು ಅವರ ಪುನರ್ವಸತಿ ಕಾಯಿದೆ-2013ಅನ್ನು ಜಾರಿಗೆ ತರಲಾಗಿದೆ. ಇದರ ಹೊರತಾಗಿಯೂ, ಆರೋಪಿಗಳು ಸುಲಭವಾಗಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ” ಎಂದು ನ್ಯಾಯಾಲಯವು ಗಮನಿಸಿದೆ.
“ಪ್ರಾಸಿಕ್ಯೂಷನ್ ಮತ್ತು ಸರ್ಕಾರಿ ವಕೀಲರು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದ ಕಾರಣ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುತ್ತಿಲ್ಲ. ಆರೋಪಿಗಳು ಬಜಾವಾಗುತ್ತಿದ್ದಾರೆ” ಎಂದು ನ್ಯಾಯಾಲಯ ತಿಳಿದುಕೊಂಡಿದೆ.
“ಪ್ರಕರಣಗಳಲ್ಲಿ ಸಂಬಂಧಪಟ್ಟ ಕೆಳದರ್ಜೆಯ ಸರ್ಕಾರಿ ಅಭಿಯೋಜಕರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ? ಅದು ಹೇಗೆ ಶೂನ್ಯ ಶಿಕ್ಷೆ ಆಗಿದೆ? ಇದಕ್ಕೆ ಪರಿಹಾರವೇನು” ಎಂದು ಸರ್ಕಾರವನ್ನು ನ್ಯಾಯಾಲಯ ಪ್ರಶ್ನಿಸಿದೆ.
“ಒಂದೇ ಒಂದು ಶಿಕ್ಷೆ ಆಗಿಲ್ಲ ಯಾಕೆ? ನಿಮ್ಮ ಚೌಕಟ್ಟು ಏನು?’’ ಎಂದು ಸರಕಾರವನ್ನು ಪ್ರಶ್ನಿಸಿದೆ.
“ನಾವು ಮಾಡುತ್ತಿರುವ ಕೆಲಸಗಳಿಂದ ಸಂವಿಧಾನ ರಚಿಸಿದವರು ತಮ್ಮ ಸಮಾಧಿಯಲ್ಲಿ ನಡುಗುತ್ತಾರೆ” ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಇಂತಹ ಪ್ರಕರಣಗಳಲ್ಲಿ ಸರ್ಕಾರದ ನಿಷ್ಕ್ರಿಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಹೈಕೋರ್ಟ್, “ಕೆಲವು ಕಾರ್ಯದರ್ಶಿಗಳನ್ನು ಜೈಲಿಗೆ ಹಾಕದ ಹೊರತು, ರಾಜ್ಯದಲ್ಲಿ ಏನೂ ಸುಧಾರಿಸುವುದಿಲ್ಲ” ಎಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ?: ನನ್ನ ಅಜ್ಜಂದಿರ ಕತೆ ಹೋಲುವ ʼಕಾಟೇರʼ, ಕಣ್ಣೀರು ಜಿನುಗಿಸಿತು
ಮ್ಯಾನುಯಲ್ ಸ್ಕ್ಯಾವೆಂಜರ್‌ಗಳನ್ನು ನೇಮಿಸಿಕೊಳ್ಳುವವರ ವಿರುದ್ಧ ದಾಖಲಾದ ಪ್ರಕರಣಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆಯ ನಿಬಂಧನೆಯನ್ನು ಒಳಗೊಳ್ಳಬಹುದು ಎಂಬ ಅಂಶವನ್ನು ಪೀಠ ಗಮನಿಸಿದೆ.
ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಸಹಾಯ ಮಾಡಲು ಅಮಿಕಸ್ ಕ್ಯೂರಿಯಾಗಿ ನೇಮಕಗೊಂಡಿರುವ ವಕೀಲ ಶ್ರೀಧರ್ ಪ್ರಭು, “ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯನ್ನು ಕಡ್ಡಾಯವಾಗಿ ಅನ್ವಯಿಸಬೇಕು” ಎಂದು ವರದಿಯಲ್ಲಿ ಹೇಳಿದ್ದಾರೆ.
“ಮಲ ಬಾಚುವ ಮತ್ತು ಹೊರುವ ಕೆಲಸ ಮಾಡುತ್ತಿದ್ದವರಿಗೆ ಪುನರ್ವಸತಿ ನೀಡುವುದರ ಜೊತೆಗೆ, ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಪದ್ದತಿಯನ್ನು ಬದಲಾಯಿಸುವ ತಂತ್ರಜ್ಞಾನವನ್ನು ಪರಿಚಯಿಸಬೇಕು” ಎಂದು ಅಮಿಕಸ್ ಕ್ಯೂರಿ ತಮ್ಮ ವರದಿಯಲ್ಲಿ ಹೇಳಿದ್ದಾರೆ.
ರಾಜ್ಯದ ಪರವಾಗಿ ಹಾಜರಾದ ಅಡ್ವೊಕೇಟ್ ಜನರಲ್, ”ಸರ್ಕಾರವು ತಂತ್ರಜ್ಞಾನವನ್ನು ಪರಿಚಯಿಸುವ ಉದ್ದೇಶಕ್ಕಾಗಿ ಯಂತ್ರೋಪಕರಣಗಳನ್ನು ಭದ್ರಪಡಿಸುವ ಪ್ರಕ್ರಿಯೆಯಲ್ಲಿದೆ” ಎಂದು ಹೇಳಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅರ್ಜಿಗೆ ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸಬೆಕೆಂದು ಹೇಳಿರುವ ಹೈಕೋರ್ಟ್ ವಿಚಾರಣೆಯನ್ನು ಜನವರಿ 30ಕ್ಕೆ ಮುಂದೂಡಿದೆ.
ಶಾಲಾ ಮಕ್ಕಳನ್ನು ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಬಳಸುವುದನ್ನು ಪ್ರಶ್ನಿಸಿ ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕೂಡ ನ್ಯಾಯಾಲಯದ ಮುಂದೆ ಇದೆ.