ರಾಷ್ಟ್ರೀಯ ಹೆದ್ದಾರಿ 169ಎ (ಎನ್‌ಎಚ್-169ಎ) ರಲ್ಲಿ ದಿನದಿಂದು ಹೆಚ್ಚುತ್ತಿರುವ ವಾಹನ ಸಂಚಾರದಿಂದಾಗಿ ನಿರಂತರವಾಗಿ ಟ್ರಾಫಿಕ್ ಜಾಮ್‌ಗಳ ಸಮಸ್ಯೆ ಉಂಟಾಗುತ್ತಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಹಿರಿಯಡಕ ಪೇಟೆ, ಹೆಬ್ರಿ, ಪರ್ಕಳ ಹಾಗೂ ಮಣಿಪಾಲದ ನಡುವೆ ಸಾಗುವ ಈ ಹೆದ್ದಾರಿ, ಉಡುಪಿ ಜಿಲ್ಲೆಗೆ ಅತ್ಯಂತ ಪ್ರಮುಖ ಸಂಪರ್ಕ ಮಾರ್ಗವಾಗಿದ್ದು, ಶಿರಸಿ, ಅಗುಂಬೆ ಹಾಗೂ ಶಿವಮೊಗ್ಗ, ಬೆಂಗಳೂರು ಕಡೆಗೆ ಸಾಗುವ ಜನರು, ವಿದ್ಯಾರ್ಥಿಗಳು, ಉದ್ಯೋಗಿಗಳು, ಹಾಗೂ ಮಾರುಕಟ್ಟೆಗೆ ಸಾಗುವ ವಾಹನಗಳಿಗಾಗಿ ಇದು ಮುಖ್ಯ ರಸ್ತೆಯಾಗಿದೆ,
ಆದರೆ ಈ ರಸ್ತೆಯು ಈಗ ಬಹುಪಾಲು ಕಡೆ ಎರಡು ಲೇನ್ ಗೆ ಸೀಮಿತವಾಗಿರುವುದರಿಂದ ಮತ್ತು ರಸ್ತೆ ವಿಸ್ತರಣಾ ಕಾಮಗಾರಿ ಬಹುತೇಕ ಸ್ಥಳಗಳಲ್ಲಿ ನಿಧಾನವಾಗಿ ಸಾಗುತ್ತಿರುವುದರಿಂದ, ನಿತ್ಯದ ಟ್ರಾಫಿಕ್ ಜಾಮ್‌ಗಳು ಸಾಮಾನ್ಯವಾಗಿವೆ. ಮುಂಜಾನೆ ಮತ್ತು ಸಂಜೆ ಸಮಯದಲ್ಲಿ ಅನೇಕ ಬಾರಿ ಗಂಟೆಗಳಗೂ ಹೆಚ್ಚು ವಾಹನಗಳು ಸ್ತಬ್ಧವಾಗಿ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗುತ್ತಿದೆ. ಉಡುಪಿಯಿಂದ ಹೆಬ್ರಿ, ಆಗುಂಬೆ, ಶಿವಮೊಗ್ಗಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ ಹಾಗೂ ಬ್ರಹ್ಮಾವರ, ಕಾರ್ಕಳವನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿ ಒಂದಕ್ಕೊಂದು ಸಂಧಿಸುವ ಜಾಗವಾದ ಮುಖ್ಯಪೇಟೆಯ ಸರ್ಕಲ್ ಬಳಿ ದಿನದ ಮೂರೂ ಹೊತ್ತು ವಾಹನ ದಟ್ಟನೆ ಉಂಟಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಲವಾರು ವರ್ಷಗಳಿಂದಲೇ ಇರುವ ಈ ಸಮಸ್ಯೆ ಬಗ್ಗೆ ಆಡಳಿತ ಸ್ಪಂದಿಸದೆ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಹಿರಿಯಡಕ ಸರ್ಕಲ್ ಮೇಲ್ಭಾಗದಲ್ಲಿ ಬಸ್ಸು ನಿಲ್ದಾಣವಿದ್ದರೂ ಕಾರ್ಕಳ ಭಾಗದಿಂದ ಬರುವ ಬಸ್‌ಗಳು ನಿಲ್ದಾಣಕ್ಕೆ ಹೋಗದೆ ರಸ್ತೆ ಮಧ್ಯದಲ್ಲಿಯೇ ನಿಲ್ಲಿಸುವುದರಿಂದ ಈ ಭಾಗದಲ್ಲಿ ಟ್ರಾಫಿಕ್ ಜಾಮ್ ಆಗಲು ಪ್ರಮುಖ ಕಾರಣವಾಗಿದೆ. ಹಲವಾರು ಬಾರಿ ಈ ಬಗ್ಗೆ ಅಕ್ಷೇಪ ವ್ಯಕ್ತಪಡಿಸಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಶಿವಮೊಗ್ಗ ಭಾಗದಿಂದ ಮಣಿಪಾಲ-ಉಡುಪಿ ಭಾಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳನ್ನು ಕರೆತರುವ ತುರ್ತು ವಾಹನಗಳು ಇಲ್ಲಿನ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಹಾಕಿಕೊಂಡಿರುವ ನಿದರ್ಶನಗಳಿವೆ.
ಕೆಲವು ವರ್ಷಗಳ ಹಿಂದೆ ಸರ್ಕಲ್ ಬಳಿ ಸಿಸಿ ಕೆಮರಾವನ್ನು ಅಳವಡಿಸಿ ಪೊಲೀಸ್ ಠಾಣೆಯಲ್ಲಿ ಪರಿಶೀಲಿಸುವ ಕ್ರಮ ನಡೆದಿತ್ತು. ಆದರೆ ಇದೀಗ ಆ ಸಿಸಿ ಕ್ಯಾಮೆರ ನಾಪತ್ತೆಯಾಗಿದೆ. ಸ್ವಲ್ಪ ದಿನವಾದರೂ ಪೊಲೀಸ್ ಇಲಾಖೆ ಸಿಬ್ಬಂದಿ ಒಬ್ಬರನ್ನು ನೇಮಿಸಿ ಸುಗಮ ಸಂಚಾರ ನಿಮಯಗಳನ್ನು ಖಾತ್ರಿಗೊಳಿಸಿದಲ್ಲಿ ಮತ್ತು ರಸ್ತೆ ಮಧ್ಯದಲ್ಲಿ ವಾಹನ ನಿಲ್ಲಿಸಿ ಟ್ರಾಫಿಕ್ ಜಾಮ್‌ಗೆ ಕಾರಣವಾಗುವವರಿಗೆ ದಂಡ ವಿಧಿಸಿದರೆ ಸಮಸ್ಯೆ ಸುಧಾರಿಸಬಹುದು ಎನ್ನುವುದು ಜನರ ಅಭಿಪ್ರಾಯ.
ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಸ್ಥಳಿಯರಾದ ಗಣೇಶ್, ಸ್ಥಳೀಯರು ಹೆದ್ದಾರಿ ಅಭಿವೃದ್ಧಿ ಕಾಮಗಾರಿಯನ್ನು ವೇಗವಾಗಿ ಮುಗಿಸಲು ಹಾಗೂ ಸೇವಾ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡುವಂತೆ ಆಗ್ರಹಿಸುತ್ತಿದ್ದಾರೆ. ಜೊತೆಗೆ ಟ್ರಾಫಿಕ್ ಪೊಲೀಸ್ ಇಲಾಖೆಯಿಂದ ಸಮರ್ಪಕ ನಿಯಂತ್ರಣ ವ್ಯವಸ್ಥೆ, ಸಿಗ್ನಲ್‌ಗಳು ಮತ್ತು ಸೂಚನೆ ಫಲಕಗಳ ಸ್ಥಾಪನೆಯ ಅಗತ್ಯವಿದೆ ಎಂಬ ಮಾತುಗಳು ಕೇಳಿಬರುತ್ತಿವೆ ಎಂದು ಹೇಳಿದ್ದಾರೆ.
ಸಮಸ್ಯೆಗೆ ಪರಿಹಾರವೇನು?
- ಕಾರ್ಕಳ ಭಾಗದಿಂದ ಉಡುಪಿಗೆ ಹೋಗುವ ಬಸ್ಸುಗಳು ಕಡ್ಡಾಯ ವಾಗಿ ಬಸ್ಸು ನಿಲ್ದಾಣಕ್ಕೆ ಬಂದು ಪ್ರಯಾಣಿಕರನ್ನು ಹತ್ತಿಳಿಸುವ ನಿಯಮ ಮಾಡಬೇಕು.
- ಹೆಬ್ರಿಯಿಂದ ಉಡುಪಿಗೆ ಹೋಗುವ ಬಸ್ಸುಗಳು ಸರ್ಕಲ್ ಮಧ್ಯದಲ್ಲಿ ನಿಲ್ಲಿಸುವ ಪ್ರಕ್ರಿಯೆಯನ್ನು ನಿಲ್ಲಿಸಬೇಕು.
- ಮುಖ್ಯ ಸರ್ಕಲ್‌ನಿಂದ ಕೆನರಾ ಬ್ಯಾಂಕಿನವರೆಗೆ ಯಾವುದೇ ವಾಹನಗಳನ್ನು ನಿಲ್ಲಿಸಲು ಅವಕಾಶ ನೀಡಬಾರದು.
- ಬ್ರಹ್ಮಾವರ ಭಾಗದಿಂದ ಬಜೆ ರಸ್ತೆಯಾಗಿ ಬರುವ ವಾಹನಗಳು ಬಸ್ ಸ್ಟ್ಯಾಂಡ್ ಪಕ್ಕದಲ್ಲಿಯೇ ಎಡಕ್ಕೆ ತಿರುಗಿ ರಾಷ್ಟ್ರೀಯ ಹೆದ್ದಾರಿಯನ್ನು ಸೇರಬೇಕು.
ಟ್ರಾಫಿಕ್ ಜಾಮ್‌ಗೆ ಕಾರಣಗಳು
- ಕಾರ್ಕಳದಿಂದ ಉಡುಪಿ ಕಡೆಗೆ ಹೋಗುವ ಬಸ್ಸುಗಳು ಹಿರಿಯಡಕ ಸರ್ಕಲ್ ಬಳಿ ರಸ್ತೆ ಮಧ್ಯದಲ್ಲೇ ಜನರನ್ನು ಇಳಿಸಿ ಹತ್ತಿಸುವುದು.
- ಹೆಬ್ರಿಭಾಗದಿಂದ ಉಡುಪಿಗೆ ಹೋಗುವ ಬಸ್‌ಗಳು ಸರ್ಕಲ್ ಬಳಿ ಇಡೀ ರಸ್ತೆಗೆ ಅಡ್ಡವಾಗಿ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸುವುದು.
- ಸರ್ಕಲ್ ಬಳಿ ಮನಸೋ ಇಚ್ಛೆ ವಾಹನಗಳನ್ನು ಪಾರ್ಕ್ ಮಾಡುವುದು.
- ನಾಲ್ಕು ರಸ್ತೆ ಸೇರುವ ಸರ್ಕಲ್ ಬಳಿ ಅಜಾಗರೂಕತೆಯಿಂದ ವಾಹನ ಚಲಾಯಿಸುವುದು.
ಒಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ 169ಎ ಜನರ ದಿನಚರಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿರುವರೂ, ನಿರಂತರ ಟ್ರಾಫಿಕ್ ಜಾಮ್‌ಗಳಿಂದಾಗಿ ಈ ರಸ್ತೆ ಈಗ ಸಾರ್ವಜನಿಕರಿಗೆ ತಲೆನೋವಿನ ಕಾರಣವಾಗಿದೆ. ಪ್ರಸ್ತುತ ಪರಿಸ್ಥಿತಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ಸಂಬಂಧಿತ ಇಲಾಖೆ ಶೀಘ್ರದಲ್ಲೇ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.
