ಒಂಬತ್ತು ಶತಮಾನಗಳ ಇತಿಹಾಸ ಹೊಂದಿರುವ ಬೀದರ್ ಜಿಲ್ಲೆ ಹುಮನಾಬಾದ್ ತಾಲ್ಲೂಕಿನ ಜಲಸಂಗವಿ ಗ್ರಾಮದ ಪುರಾತನ ದೇವಾಲಯದ ಅಭಿವೃದ್ಧಿಗೆ ಸಮರ್ಪಕ ಯೋಜನೆ ರೂಪಿಸದ ಪರಿಣಾಮ ಐತಿಹಾಸಿಕ ತಾಣವೊಂದು ಪಾಳು ಬೀಳುವ ಹಂತ ತಲುಪಿದೆ.
ಕಲ್ಯಾಣ ಚಾಲುಕ್ಯರ ಪ್ರಸಿದ್ಧ ಅರಸ ಆರನೇ ವಿಕ್ರಮಾದಿತ್ಯನು ಈ ದೇವಾಲಯ ನಿರ್ಮಿಸಿದ್ದಾನೆ ಎಂಬುದು ಇತಿಹಾಸದ ಪುಟಗಳಲ್ಲಿ ಉಲ್ಲೇಖವಾಗಿದೆ. ದೊಡ್ಡ ಗಾತ್ರದ ಚಪ್ಪಟೆ ಕಲ್ಲುಗಳಿಂದ ನಿರ್ಮಿಸಲಾದ ದೇವಾಲಯದ ಸುತ್ತು ಗೋಡೆಯ ಮೇಲೆ 30ಕ್ಕೂ ಅಧಿಕ ಮದನಿಕೆಯರ ಚಿತ್ರಗಳನ್ನು ಕೆತ್ತಲಾಗಿದೆ. ನಕ್ಷತ್ರದ ಆಕಾರದಲ್ಲಿರುವ ಈ ದೇವಾಲಯವನ್ನು ಕಲ್ಮೇಶ್ವರ ದೇವಾಲಯ, ಈಶ್ವರ ದೇವಾಲಯ, ಮಹಾದೇವ ದೇವಾಲಯ ಎಂದು ಕರೆಯುತ್ತಾರೆ.
ಗ್ರಾಮದ ಪೂರ್ವಾಭಿಮುಖವಾಗಿರುವ ಐತಿಹಾಸಿಕ ದೇವಾಲಯ ಮುಖದ್ವಾರವಿದ್ದು, ಕಲ್ಯಾಣಿ ಚಾಲುಕ್ಯ ಶೈಲಿಯ ವಾಸ್ತುಶಿಲ್ಪ ಪ್ರದರ್ಶಿಸುವ ಈ ದೇವಾಲಯ ಬೃಹದಾಕಾರದ ಒಂಬತ್ತು ಕಂಬಗಳಿಂದ ಕೂಡಿದ ಮಂಟಪವಿದೆ. ಗರ್ಭಗೃಹ, ಅಂತರಾಳ ಹಾಗೂ ನವಗ್ರಹ ಹೊಂದಿದ್ದು, ಗರ್ಭಗ್ರಹದಲ್ಲಿ ಶಿವಲಿಂಗವಿದ್ದು, ಹೊರಗಡೆ ನಂದಿ ಮೂರ್ತಿಯಿದೆ. ಚಪ್ಪಟೆ ಕಲ್ಲಿನ ಗೋಡೆಯ ಮೇಲೆ ಅಲ್ಲಲ್ಲಿ ವಿವಿಧ ಭಂಗಿಯಲ್ಲಿ ಕೆತ್ತಲಾದ ನಾಟ್ಯ ರಾಣಿಯರ, ಗಣಪತಿ ಶಿಲ್ಪಕಲೆ ನಾಡಿನ ಐತಿಹಾಸಿಕ ಗತ ವೈಭವ ಸಾರಿ ಹೇಳುವಂತಿದೆ.
ಕರ್ನಾಟಕದ ಗತ ವೈಭವ ಸಾರುವ ಈ ಪುರಾತನ ದೇವಾಲಯ ಪುರಾತತ್ವ ಇಲಾಖೆಯ ಸುಪರ್ದಿಗೆ ಒಳಪಟ್ಟಿದೆ. ಆದರೆ ಅಗತ್ಯವಾಗಿ ನಡೆಯಬೇಕಾದ ಜೀರ್ಣೋದ್ಧಾರ ಕಾರ್ಯ ಮಾತ್ರ ಇನ್ನೂ ನಡೆದಿಲ್ಲ. ಇದರಿಂದ ಕಟ್ಟಡದ ಅವಶೇಷಗಳು ಉರುಳಿ ಬೀಳುವ ಹಂತದಲ್ಲಿವೆ. ಪೂರ್ಣ ಸುತ್ತುಗೋಡೆ ಇರದ ಕಾರಣ ಕಟ್ಟಡದ ಸುತ್ತಲೂ ಜಾನುವಾರು ನೆಲೆಸುವಂತಾಗಿದೆ. ಸೂಕ್ತ ರಕ್ಷಣೆ ಇಲ್ಲದ ಕಾರಣ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ ಎಂದು ಇತಿಹಾಸಕಾರರು ಬೇಸರ ವ್ಯಕ್ತಪಡಿಸುತ್ತಾರೆ.
ಗಮನ ಸೆಳೆಯುವ ಸುಂದರಿ ಶಾಸನ:
ಈ ದೇವಾಲಯದ ಶಿಲ್ಪಗಳ ಪ್ರಮುಖ ಆಕರ್ಷಣೆಯೆಂದರೆ ʼಶಾಸನ ಸುಂದರಿʼ (ಶಿಲಾಬಾಲಿಕಾ) ಎಂಬ ಮಹಿಳೆಯ ಶಿಲ್ಪ ಹಾಗೂ ಕನ್ನಡ ಅಕ್ಷರಗಳಲ್ಲಿ ಸಂಸ್ಕೃತ ಶಾಸನವನ್ನು ಕಟ್ಟಡದ ಒಂದು ಗೋಡೆಯ ಮೇಲೆ ಕೆತ್ತಲಾಗಿದೆ. ನರ್ತಿಸುವ ಭಂಗಿಯಲ್ಲಿರುವ ಆಕೃತಿಯು ಶಿಲಾಶಾಸನವನ್ನು ಕೆತ್ತಿರುವಂತೆ ಕಂಡುಬರುತ್ತದೆ. ಸುಂದರಿ ಶಾಸನವು ಚಾಲುಕ್ಯ ರಾಜವಂಶದ ಆರನೇ ವಿಕ್ರಮಾದಿತ್ಯನ ವರ್ಣನೆ ಕುರಿತು ತಿಳಿಸುತ್ತದೆ. ಈ ದೇವಾಲಯದ ಶಿಲ್ಪಕಲೆಯು ಬೇಲೂರು, ಹಳೇಬೀಡು ಮತ್ತು ಸೋಮನಾಥಪುರಕ್ಕೆ ಸ್ಪೂರ್ತಿಯಾಗಿವೆ ಎನ್ನುವುದು ಪ್ರವಾಸಿಗರ ಅಭಿಮತ.

ನಾಡಿನ ಗತ ವೈಭವ ಸಾರುವ ಕಲಾಕೃತಿಗಳು, ನೋಡುಗರ ಕಣ್ಮನ ಸೆಳೆಯುವ ಸುಂದರ ಕೆತ್ತನೆಯ ಕಟ್ಟಡ ಇಂದಿಗೂ ಉಳಿದಿರುವುದೇ ಒಂದು ಅಪರೂಪ, ಐತಿಹಾಸಿಕ ಸ್ಥಳವೊಂದು ಪ್ರವಾಸಿ ತಾಣವಾಗಿ ರೂಪುಗೊಳ್ಳಬೇಕಾದರೆ ಅಧಿಕಾರಿಗಳ, ಜನಪ್ರತಿನಿಧಿಗಳ ಇಚ್ಚಾಶಕ್ತಿ ಮುಖ್ಯ. ಆದರೆ ಎಲ್ಲರೂ ನಿರ್ಲಕ್ಷ್ಯವಹಿಸಿದ ಪರಿಣಾಮ ಇಂದು ಗಡಿ ಜಿಲ್ಲೆಯ ಅಪರೂಪದ ದೇವಾಲಯ ಅನಾಥವಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಗ್ರಾಮಸ್ಥರು.
“ನಮ್ಮೂರಲ್ಲಿರುವ ಪುರಾತನ ಕಲ್ಮೇಶ್ವರ ದೇವಾಲಯ ಕರ್ನಾಟಕ ಅಷ್ಟೇ ಅಲ್ಲದೇ ದೇಶದಲ್ಲೇ ವೈಶಿಷ್ಟ್ಯತೆಯಿಂದ ನಿರ್ಮಿಸಿದ ದೇವಾಲಯವಾಗಿದೆ. ಇಲ್ಲಿಯ ವಾಸ್ತಶಿಲ್ಪ, ಶಿಲಾಶಾಸನ ವೀಕ್ಷಿಸಲು ದೇಶ-ವಿದೇಶದ ಪ್ರವಾಸಿಗರು ಆಗಮಿಸುತ್ತಿದ್ದರು. ಆದರೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಐತಿಹಾಸಿಕ ತಾಣವೊಂದು ಪಾಳು ಬಿದ್ದ ಪರಿಣಾಮ ಪ್ರವಾಸಿಗರ ಸಂಖ್ಯೆಯೂ ಗಣನೀಯವಾಗಿ ಇಳಿಕೆಯಾಗಿದೆ. ಕೂಡಲೇ ಪುರಾತತ್ವ ಇಲಾಖೆ, ಜಿಲ್ಲಾಡಳಿತ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಪ್ರಾಚೀನ ಕಟ್ಟಡದ ಜೀರ್ಣೋದ್ಧಾರಕ್ಕೆ ಮುಂದಾಗಿ ಪ್ರವಾಸಿತಾಣವಾಗಿ ರೂಪಿಸಬೇಕೆಂದು” ಗ್ರಾಮಸ್ಥ ಭೀಮರೆಡ್ಡಿ ಜಲಸಂಗವಿ ಈದಿನ.ಕಾಮ್ ದೊಂದಿಗೆ ಮಾತನಾಡಿ ಆಗ್ರಹಿಸಿದ್ದಾರೆ.

ಈ ಬಗ್ಗೆ ಜಲಸಂಗವಿ ಗ್ರಾಮ ಪಂಚಾಯಿತಿ ಪಿಡಿಒ ಮಲ್ಲಪ್ಪ ಈದಿನ.ಕಾಮ್ ದೊಂದಿಗೆ ಮಾತನಾಡಿ, “ಕಲ್ಯಾಣ ಚಾಲುಕ್ಯರ ಅರಸ ನಿರ್ಮಿಸಿದ ಮಹಾದೇವ ದೇವಾಲಯ ಅಥವಾ ಈಶ್ವರ ದೇವಾಲಯ ಅತ್ಯಂತ ಸುಂದರ ರಚನೆಯಿಂದ ಕೂಡಿದೆ, ಕರ್ನಾಟಕ ಐತಿಹಾಸಿಕ ಪರಂಪರೆ ಸಾರುವ ಈ ಕಟ್ಟಡ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿಯಿಂದ ಐದು ಲಕ್ಷ ಅನುದಾನದಲ್ಲಿ ಉದ್ಯಾನವನ ನಿರ್ಮಿಸಲು ಯೋಜನೆ ರೂಪಿಸಲಾಗಿದೆ, ಸದ್ಯದಲ್ಲೇ ಕಾಮಗಾರಿ ಪ್ರಾರಂಭಿಸಲಾಗುವುದು. ಅಲ್ಲದೇ ಪ್ರವಾಸಿಗರಿಗೆ ಅನುಕೂಲತೆಗಾಗಿ ಮೂಲಭೂತ ಸೌಕರ್ಯ, ಸಾರಿಗೆ ವ್ಯವಸ್ಥೆ ಸೇರಿದಂತೆ ಇತರೆ ಸೌಕರ್ಯ ಒದಗಿಸಲು ಸಂಬಂಧಪಟ್ಟ ಮೇಲಾಧಿಕಾರಿಗಳ ಜೊತೆಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಐತಿಹಾಸಿಕ ತಾಣವಾಗಿ ರೂಪಿಸುವ ಭರವಸೆ:
ಪುರಾತತ್ವ ಇಲಾಖೆಯ ಅಧಿಕಾರಿ ರಾಜರಾಮ ಈದಿನ.ಕಾಮ್ ದೊಂದಿಗೆ ಮಾತನಾಡಿ, ಹುಮನಾಬಾದ್ ತಾಲೂಕಿನ ಜಲಸಂಗವಿ ಗ್ರಾಮದ ಪುರಾತನ ದೇವಾಲಯ ಸಂರಕ್ಷಣೆಗೆ ಇಲಾಖೆಯಿಂದ ಸುತ್ತುಗೋಡೆ ನಿರ್ಮಿಸುವ ಯೋಜನೆಯಿದೆ. ಆದರೆ ದೇವಾಲಯ ಮುಂಭಾಗ ಜಾಗದ ತಕರಾರು ಹಿನ್ನಲೆಯಲ್ಲಿ ಗೋಡೆ ಕಾಮಗಾರಿ ಮುಂದುವರೆಸಲು ಸಾಧ್ಯವಾಗುತ್ತಿಲ್ಲ. ಸುತ್ತಗೋಡೆ ನಿರ್ಮಿಸಿ, ಪ್ರವಾಸಿಗರಿಗೆ ಅನುಕೂಲತೆಗಾಗಿ ಅಗತ್ಯವಿರುವ ಶುದ್ಧ ಕುಡಿಯುವ ನೀರು, ಉದ್ಯಾನ ಸೇರಿದಂತೆ ಎಲ್ಲಾ ರೀತಿಯ ಅಭಿವೃದ್ಧಿಗೊಳಿಸಿ ಪ್ರವಾಸಿ ತಾಣವಾಗಿ ಮಾಡಬಹುದು, ಕಂದಾಯ ಇಲಾಖೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಹಕಾರದೊಂದಿಗೆ ಜೀರ್ಣೋದ್ಧಾರ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.
ಹುಮನಾಬಾದ್ ತಹಸೀಲ್ದಾರ್ ಅಂಜುಮ್ ತಬಸುಮ್ ಈದಿನ.ಕಾಮ್ ದೊಂದಿಗೆ ಮಾತನಾಡಿ, “ಈ ಬಗ್ಗೆ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವೆ, ಐತಿಹಾಸಿಕ ಕಟ್ಟಡ ಸಂರಕ್ಷಣೆಗೆ ಬೇಕಾದ ಅಗತ್ಯ ನೆರವು ಒದಗಿಸಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲಾಗುವುದು” ಎಂದು ಹೇಳಿದರು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.