ಮೃತಪಟ್ಟ ಪಿಎಸ್ಐ ಪರಶುರಾಮ ಛಲವಾದಿ ಮನೆಗೆ ಗೃಹ ಸಚಿವ ಜಿ.ಪರಮೇಶ್ವರ ಭೇಟಿ ನೀಡಿ ಗೃಹ ಇಲಾಖೆ ಹಾಗೂ ಸರಕಾರದಿಂದ 50 ಲಕ್ಷ ವಿಶೇಷ ನೆರವು ನೀಡಲಾಗುವುದು ಎಂದು ಘೋಷಿಸಿದರು.
ಯಾದಗಿರಿ ಪಿಎಸ್ಐ ಪರಶುರಾಮ ಛಲವಾದಿ ಸಂಶಯಾಸ್ಪದವಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮಕ್ಕೆ ಜಿ ಪರಮೇಶ್ವರ್ ಭೇಟಿ ನೀಡಿ, ಕುಟುಂಬಸ್ಥರಿಗೆ ಧೈರ್ಯ ತುಂಬುವ ಮೂಲಕ ಸಾಂತ್ವನ ತಿಳಿಸಿದರು.
ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ತುಂಬಾ ಕಷ್ಟಪಟ್ಟು ವಿದ್ಯಾಬ್ಯಾಸ ಮಾಡಿ ಹಲವು ಬಾರಿ ಪೊಲೀಸ್ ಪರೀಕ್ಷೆ ಬರೆದು ಉತ್ತೀರ್ಣರಾಗಿ ಕಾನೂನು ರಕ್ಷಣೆ ಹಾಗೂ ಜನರ ಸೇವೆಗಾಗಿ ಪೊಲೀಸ್ ಗೆ ಆಯ್ಕೆಯಾಗಿರುತ್ತಾರೆ .ಪರಶುರಾಮ್ ನಿಧನದ ನಂತರ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದಂತಾಗಿದೆ . ಪಿಎಸ್ಐ ಪರಶುರಾಮ್ ಪತ್ನಿ ಶ್ವೇತಾ ಬಿ.ಇ ಪದವಿ ಮುಗಿಸಿದ್ದು ಸರಕಾರದ ಮಟ್ಟದಲ್ಲಿ ಚರ್ಚಿಸಿ ಸರಕಾರ ಉದ್ಯೋಗ ಕೊಡುವಂತೆ ಮನವಿ ಮಾಡಲಾಗುವುದು ಎಂದು ಹೇಳಿದರು.
ವಿರೋಧ ಪಕ್ಷಗಳು ರಾಜಕೀಯ ಸದುದ್ದೇಶಕ್ಕಾಗಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಹೇಳಿಕೆ ನೀಡುತ್ತಿದ್ದಾರೆ . ಸಿಐಡಿಯವರು ಪರಿಣಾಮಕಾರಿಯಾಗಿ ತನಿಖೆ ಮಾಡುತ್ತಿದ್ದಾರೆ. ವಿರೋಧ ಪಕ್ಷದವರು ನಮಗೆ ಪಾಠ ಕಲಿಸಲು ಬರುವುದು ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಪ್ರಕರಣವನ್ನು ಸಿ ಐ ಡಿ ತಂಡ ಕಾರ್ಯ ನಿರ್ವಹಿಸುತ್ತಿದೆ .ತನಿಖೆಯ ನಂತರ ಯಾರೇ ಆಗಿರಲಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.