ರೈಲ್ವೆ ನಿಲ್ದಾಣಕ್ಕೆ ಶಿವಕುಮಾರ ಸ್ವಾಮೀಜಿಯವರ ಹೆಸರಿಡುವ ಪ್ರಸ್ತಾವನೆ ಸರ್ಕಾರಕ್ಕೆ ಬಂದಿದ್ದು, ಈ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ, ಅವರ ಒಪ್ಪಿಗೆ ಪಡೆದು ಶೀಘ್ರದಲ್ಲಿ ಆದೇಶ ಹೊರಡಿಸಲಾಗುವುದು ಎಂದು ಗೃಹಸಚಿವ ಡಾ. ಜಿ ಪರಮೇಶ್ವರ್ ಹೇಳಿದರು.
ತುಮಕೂರಿನ ಸಿದ್ದಗಂಗಾ ಮಠಕ್ಕೆ ಇಂದು ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮುಂದಿನ ದಿನಗಳಲ್ಲಿ ತುಮಕೂರು ರೈಲ್ವೆ ನಿಲ್ದಾಣ ಸ್ವಾಮೀಜಿ ಅವರ ಹೆಸರಿನಲ್ಲಿ ಶಾಶ್ವತವಾಗಿ ಇರುತ್ತದೆ. ಅದು ನಾವು ಅವರಿಗೆ ಕೊಡುವ ಗೌರವ. ಈ ಬಗ್ಗೆ ಸಚಿವ ಸೋಮಣ್ಣನವರೂ ಒತ್ತಾಯ ಮಾಡಿದ್ದರು. ಈಗಾಗಲೇ ರೈಲ್ವೆ ಇಲಾಖೆಯಿಂದ ಕೇಂದ್ರದಲ್ಲಿ ಮಂಜೂರು ಮಾಡಿಸಿದ್ದಾರೆ. ಶ್ರೀಗಳ ಹೆಸರಿಡಲು ರಾಜ್ಯ ಸರ್ಕಾರದಿಂದ ಯಾವುದೇ ರೀತಿ ವಿಳಂಬವಾಗಿಲ್ಲ. ರಸ್ತೆ, ವೃತ್ತ, ಕಟ್ಟಡಕ್ಕೆ ಹೆಸರಿಡುವರೆ ಪ್ರಸ್ತಾವನೆಗಳು ಬಂದಾಗ ಪರಿಶೀಲನೆ ಮಾಡಿ, ಸಾಧಕ ಭಾದಕಗಳನ್ನ ನೋಡಿ ಸರ್ಕಾರ ಅನುಮತಿ ಕೊಡುತ್ತದೆ” ಎಂದರು.
“ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡಬೇಕು ಎಂದು ಕೇಂದ್ರಕ್ಕೆ ಒತ್ತಾಯ ಮಾಡಿದ್ದೆವು. ಎರಡು ವರ್ಷದ ಹಿಂದೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 5300 ಕೋಟಿ ರೂ. ಅನುದಾನ ನೀಡುವುದಾಗಿ ಬಜೆಟ್‌ನಲ್ಲಿ ಹೇಳಿದ್ದರು. ಕೆಲವು ಕಾರಣಾಂತರಗಳಿಂದ ಅವರು ಅನುದಾನ ಬಿಡುಗಡೆ ಮಾಡಲು ಆಗಿಲ್ಲ. ಆದರೂ ಕಾಮಗಾರಿಗಳನ್ನು ವೇಗವಾಗಿ ಪೂರ್ಣಗೊಳಿಸಲು ಮುಂದಾಗಿದ್ದೇವೆ” ಎಂದರು.
“ಎತ್ತಿನಹೊಳೆ ಯೋಜನೆ ಕಾಮಗಾರಿ ನಡೆಯುತ್ತಿದ್ದು, ಪ್ರತಿವರ್ಷ ಹಣ ಬಿಡುಗಡೆ ಮಾಡಲಾಗುತ್ತಿದೆ. ಬರುವ ಜೂನ್ ವೇಳೆಗೆ ಅರಸಿಕೆರೆಗೆ ನೀರು ತಲುಪಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಎರಡು-ಮೂರು ಕಡೆ ಅರಣ್ಯ ಭೂಮಿಯಿಂದ ಕೊಂಚ ಸಮಸ್ಯೆಯಾಗಿದೆ. ಅದು ಬಗೆಹರಿದರೆ 2026ರ ಜೂನ್‌ಗೆ ತುಮಕೂರಿಗೆ ಎತ್ತಿನಹೊಳೆ ನೀರು ಬರುತ್ತದೆ. ಮುಂದೆ ಚಿಕ್ಕಬಳ್ಳಾಪುರ, ಕೋಲಾರಕ್ಕೆ ನೀರು ಹೋಗುತ್ತದೆ” ಎಂದರು.
“ಸದ್ಯ ತುಮಕೂರು ನಗರಕ್ಕೆ ಕುಡಿಯುವ ನೀರಿನ ಸಮಸ್ಯೆಯಿಲ್ಲ. ಬುಗುಡನಹಳ್ಳಿ ಕೆರೆಯಲ್ಲಿ ಶೇಖರಣೆ ಮಾಡಿರುವ ನೀರು ಜೂನ್, ಜುಲೈ ತಿಂಗಳವರೆಗೆ ಆಗುತ್ತದೆ ಎಂದು ಮಹಾನಗರ ಪಾಲಿಕೆ ಆಯುಕ್ತರು ಹೇಳುತ್ತಿದ್ದಾರೆ. ಮೇ ತಿಂಗಳಲ್ಲಿ ಹೇಮಾವತಿಯಿಂದ ಎರಡು ಟಿಎಂಸಿ ನೀರು ಬಿಡಿಸುವಂತೆ ಹಾಸನ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರ ಜೊತೆಗೆ ಮಾತನಾಡುತ್ತೇನೆ. ಜಿಲ್ಲೆಯ ತಾಲೂಕುಗಳಿಗೆ ಸುಮಾರು 2300 ಕೋಟಿ ರೂ. ಕುಡಿಯುವ ನೀರಿನ ಯೋಜನೆ ರೂಪಿಸಲಾಗಿದೆ. ಚಳ್ಳಕೆರೆ, ಕೂಡ್ಲಿಗಿ, ಹಿರಿಯೂರು ಎಲ್ಲಾ ಕಡೆಗೂ ನೀರು ಬರುತ್ತದೆ. ಪಾವಗಡ ತಾಲೂಕಿನ 328 ಹಳ್ಳಿಗಳ ಪೈಕಿ 270 ಹಳ್ಳಿಗಳಿಗೆ ಈಗಾಗಲೇ ನೀರು ಕೊಡುತ್ತಿದ್ದೇವೆ. ಮುಖ್ಯಮಂತ್ರಿಯವರು ಸದ್ಯದಲ್ಲೇ ಉದ್ಘಾಟನೆ ಮಾಡಲಿದ್ದಾರೆ. ಮಧುಗಿರಿಯ ಕೆಲ ಭಾಗಕ್ಕೆ ನೀರು ಬರಲಿದೆ” ಎಂದು ತಿಳಿಸಿದರು.
ಇದನ್ನೂ ಓದಿ: ತುಮಕೂರು | ಮಕ್ಕಳಿಗೆ ಚೈತನ್ಯ ತುಂಬಲು ರಂಗ ಶಿಬಿರ ಸಹಕಾರಿ : ಡಾ. ಗೀತಾ ವಸಂತ
ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ವಿಚಾರದ ಕುರಿತು ಮಾತನಾಡಿ, “ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಅವರು ಸೇರಿ 35 ಜನ ಶಾಸಕರು ಬರೆದಿರುವ ಪತ್ರವನ್ನು ಕೇಂದ್ರ ಸರ್ಕಾರ ಪರಿಗಣಿಸಬೇಕು. ಶಿರಾ ಭಾಗದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾದರೆ ಅನುಕೂಲವಾಗಲಿದೆ. ಈಗಾಗಲೇ ನೆಲಮಂಗಲ ಹಾಗೂ ಕನಕಪುರ ಭಾಗದಲ್ಲಿ ಸರ್ವೆ ಆಗಿದೆ. ವಿಮಾನ ನಿಲ್ದಾಣ ಮಾಡಲು ಅವರದ್ದೇ ಆದ ಮಾನದಂಡಗಳಿರುತ್ತವೆ. ಅದರಂತೆಯೇ ಶಿಫಾರಸ್ಸು ಮಾಡುತ್ತಾರೆ. ಶಿರಾಗೆ ಸರ್ವೆ ಮಾಡಲು ಬಂದಿಲ್ಲ. ಜಿಲ್ಲೆಯ ವಸಂತನರಸಾಪುರ, ಶಿರಾ ಭಾಗದಲ್ಲಿ ಎಲ್ಲಿಯೇ ವಿಮಾನ ನಿಲ್ದಾಣವಾದರೆ ಸುಮಾರು 20 ಜಿಲ್ಲೆಗಳಿಗೆ ಅನುಕೂಲವಾಗಲಿದೆ. ವಿಮಾನ ನಿಲ್ದಾಣ ಯೋಜನೆಯನ್ನು ಯಾರು ಹೈಜಾಕ್ ಮಾಡಲು ಆಗುವುದಿಲ್ಲ. ತಾಂತ್ರಿಕ ಸಾಧ್ಯತೆಗಳ ಮೇಲೆ ನಿರ್ಮಿಸಲಾಗುತ್ತದೆ” ಎಂದು ಹೇಳಿದರು.