ದಲಿತ ಯುವಕನನ್ನು ಪ್ರೀತಿಸಿದ್ದಾಳೆಂಬ ಕಾರಣಕ್ಕೆ ತಂದೆಯೇ ಮಗಳನ್ನು ಹತ್ಯೆಗೈದಿರುವ ಮರ್ಯಾದೆಗೇಡು ಹತ್ಯೆ ಪ್ರಕರಣ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನಲ್ಲಿ ನಡೆದಿದೆ. ಯುವತಿಯ ಸಾವಿನ ಸುದ್ದಿ ಕೇಳಿ, ಆಕೆಯ ಪ್ರಿಯಕರನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.
ತಾಲೂಕಿನ ಬೋಡಗುರ್ಕಿ ಗ್ರಾಮದಲ್ಲಿ ಮಂಗಳವಾರ ಮರ್ಯಾದೆಗೇಡು ಹತ್ಯೆ ಪ್ರಕರಣ ನಡೆದಿದೆ. ದಲಿತ ಯುವಕ ಗಂಗಾಧರ್ ಮತ್ತು ಗೊಲ್ಲ ಸಮುದಾಯದ ಯುವತಿ ಕೀರ್ತಿ ಒಂದೇ ಗ್ರಾಮದವರಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗಲು ನಿರ್ಧರಿಸಿದ್ದರು. ಅವರ ಪ್ರೀತಿಯ ಬಗ್ಗೆ ತಿಳಿದ ಯುವತಿಯ ತಂದೆ, ಆರೋಪಿ ಕೃಷ್ಣಮೂರ್ತಿ ಕೀರ್ತಿಯನ್ನು ಉಸಿರುಗಟ್ಟಿಸಿ ಹತ್ಯೆಗೈದಿದ್ದಾನೆ ಎಂದು ಆರೋಪಿಸಲಾಗಿದೆ.
ಆಕೆಯ ಸಾವಿನ ಸುದ್ದಿ ತಿಳಿದ ಗಂಗಾಧರ್ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೀರ್ತಿ ಅವರ ತಂದೆ ಕೃಷ್ಣಮೂರ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
“ಇಬ್ಬರ ಪ್ರೀತಿಗೆ ಯುವತಿಯ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದರು. ಆದರೂ, ಗಂಗಾಧರನನ್ನೇ ಮದುವೆಯಾಗುವುದಾಗಿ ಯುವತಿ ಹಠ ಹಿಡಿದಿದ್ದಳು. ಇದೇ ವಿಚಾರವಾಗಿ ಸೋಮವಾರ ರಾತ್ರಿ ಯುವತಿ ಮನೆಯಲ್ಲಿ ಜಗಳವಾಗಿತ್ತು. ಮಂಗಳವಾರ ಕೀರ್ತಿಯನ್ನು ಆಕೆಯ ತಂದೆಯೇ ಕೊಲೆ ಮಾಡಿದ್ದಾನೆ. ಆರೋಪಿಯನ್ನು ಬಂಧಿಸಿದ್ದೇವೆ” ಎಂದು ಪೊಲೀಸರು ತಿಳಿಸಿದ್ದಾರೆ.