ದಕ್ಷಿಣ ಕೊರಿಯಾದಲ್ಲಿ ನಡೆದ ಏಷ್ಯಾ ಗೇಮ್ಸ್‌ನಲ್ಲಿ ವ್ಹೈಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಮೂರು ಚಿನ್ನದ ಪದಕ ಗೆದ್ದ ಖುಡ್ಸಿಯಾ ನಜೀರ್ ಅವರನ್ನು ವಸತಿ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹಮದ್ ಸನ್ಮಾನಿಸಿದ್ದಾರೆ.
ಬೆಂಗಳೂರಿನ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಸಭಾಂಗಣದಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಖುಡ್ಸಿಯಾ ನಜೀರ್ ಅವರನ್ನು ಜಮೀರ್ ಅಹಮದ್ ಸನ್ಮಾನಿಸಿದರು. ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಲು ಫಿನ್‌ಲೆಂಡ್‌ಗೆ ತೆರಳುತ್ತಿರುವ ನಜೀರ್ ಅವರಿಗೆ ವೈಯಕ್ತಿಕವಾಗಿ 2.50 ಲಕ್ಷ ರೂ. ನೆರವಿನ ಚೆಕ್ ನೀಡಿದರು.
ಅಲ್ಲದೆ, ದೇಶದ ಕೀರ್ತಿ ಹೆಚ್ಚಿಸುತ್ತಿರುವ ಇಂತಹ ಕ್ರೀಡಾಪಟುಗಳಿಗೆ ನೆರವು ನೀಡಲು ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಲ್ಲಿ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಜಮೀರ್ ಅಹಮದ್ ನಿರ್ದೇಶನ ನೀಡಿದರು.
ಬಂಗಾರಪೇಟೆ ಮೂಲದ ಖುಡ್ಸಿಯಾ ನಜೀರ್, ಕೆಎಸ್‌ಆರ್‌ಟಿಸಿಯಲ್ಲಿ ಪ್ರಥಮ ದರ್ಜೆ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ, ವ್ಹೈಟ್‌ಲಿಫ್ಟಿಂಗ್ ಸ್ಪರ್ಧೆಗೂ ಕೋಚಿಂಗ್ ಪಡೆಯುತ್ತಿದ್ದು, ರಾಜ್ಯ, ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹಿಳೆಯರ ವಿಭಾಗದಲ್ಲಿ 87 ಕೆಜಿ ವಿಭಾಗದಲ್ಲಿ ಸಾಧನೆ ಮಾಡಿದ್ದಾರೆ.
“ಸಚಿವ ಜಮೀರ್ ಅಹಮದ್ ಅವರು ನನ್ನ ಸಾಧನೆ ಗುರುತಿಸಿ ಸನ್ಮಾನಿಸಿದ್ದಾರೆ. ಫಿನ್‌ಲೆಂಡ್‌ಗೆ ತೆರಳಲು 2.50 ಲಕ್ಷ ರೂ. ನೆರವು ನೀಡಿದ್ದಾರೆ. ಇದು ಸಂತಸ ತಂದಿದೆ. ಇದರಿಂದ ಮತ್ತಷ್ಟು ಸಾಧನೆ ಮಾಡಲು ಉತ್ತೇಜನ ಸಿಕ್ಕಿದೆ” ಎಂದು ನಜೀರ್ ಹೇಳಿದ್ದಾರೆ.