ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಇರುವ ಸರ್ಕಾರಿ ಜಾಗಗಳು, ಜಮೀನುಗಳು ಹಾಗೂ ಯಾರದ್ದೋ ಜಮೀನನ್ನು ಇನ್ನಾರಿಗೋ ಬರೆದುಕೊಡಲಾಗುತ್ತಿದೆ. ಹೊಸನಗರ ಕಂದಾಯ ಇಲಾಖೆಯ ಕೆಲವು ಸಿಬ್ಬಂದಿಗಳು ಅವ್ಯವಹಾರ ನಡೆಸುತ್ತಿದ್ದಾರೆ ಎಂದು ಎಎಪಿ ಆರೋಪಿಸಿದೆ.
ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಎಎಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಜೀರ್ ಅಹಮದ್, “ಹೊಸನಗರ ತಾಲೂಕು ಕಚೇರಿಯಲ್ಲಿ ಅನಧಿಕೃತವಾಗಿ ಕೆಲವು ಬ್ರೋಕರ್‌ಗಳು ಸಾರ್ವಜನಿಕರಿಂದ ಹಣ ಪಡೆದು ಕೆಲಸ ಮಾಡಿಸಿಕೊಡುತ್ತಿದ್ದಾರೆ. ಈ ಬಗ್ಗೆ ತಾಲೂಕು ದಂಢಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ, ಅವರು ಉಡಾಪೆಯ ಉತ್ತರ ನೀಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
“ಹೊಸನಗರ ತಾಲೂಕಿನ ಕಸಬಾ ಹೋಬಳಿ ವರಕೋಡು ಗ್ರಾಮದ ಸರ್ವೆ ನಂಬರ್ 47ರಲ್ಲಿ 40*60 [2400 ಚದರ ಅಡಿ] ಅಳತೆಯ ಅಕ್ರಮ ಕಟ್ಟಡಕ್ಕೆ 15/11/2023ರಂದು ಮಂಜೂರಾತಿ ಹಕ್ಕುಪತ್ರ ನೀಡಲಾಗಿದೆ. ಆದರೆ, ಹಕ್ಕುಪತ್ರದಲ್ಲಿ 27/09/2002 ದಿನಾಂಕ ಹಾಕಲಾಗಿದೆ. ಇದಕ್ಕೆ ಸಂಬಂಧಿಸಿದ ಸರ್ವೆ ಇಲಾಖೆಯ ಜಿಪಿಎಸ್ ಸರ್ವೆ ಹಾಗೂ ಅರ್ಜಿಗಳ ಸೀರಿಯಲ್ ನಂಬರುಗಳು ಹಾಗೂ ಎಸ್‌ಬಿಐ ಚಲನ್ ಸಂಖ್ಯೆ ಕೂಡ ದೊರೆತಿವೆ” ಎಂದು ಹೇಳಿದ್ದಾರೆ.
“ಇಂತಹ ಪ್ರಕರಣಗಳು ಕಳೆದ 2 ವರ್ಷದಿಂದ ಬಂದಿವೆ. ಹಲವಾರು ಸಂತ್ರಸ್ತರು ನಮ್ಮ ಗಮನಕ್ಕೆ ತಂದಿದ್ದಾರೆ. ಆದರೆ, ಅಧಿಕೃತ ದಾಖಲಾತಿಗಳು ನಮಗೆ ಲಭ್ಯವಾಗಿರಲಿಲ್ಲ. ಈಗ ನಮಗೆ ದಾಖಲೆಗಳು ಲಭ್ಯವಾಗಿವೆ. ಆರ್.ಟಿ.ಐ ಮುಖೇನ ಮುಖ್ಯ ದಾಖಲೆಗಳನ್ನು ಪಡೆದು ಪರಿಶೀಲಿಸಿದ್ದೇವೆ. ನಕಲಿ ದಾಖಲೆಗಳು ಪತ್ತೆಯಾಗಿವೆ” ಎಂದು ತಿಳಿಸಿದ್ದಾರೆ.
“ನಕಲಿ ಖಾತೆಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದೇವೆ. ಅಕ್ರಮದ ವಿರುದ್ಧ ಕಂದಾಯ ಮಂತ್ರಿಗಳು ಹಾಗೂ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶಿವಕುಮಾರ್ ಗೌಡ, ಸುರೇಶ್ ಕೌಟೇಕರ್, ಗಣೇಶ್ ಸೋಗೋಡು, ಹಸನಬ್ಬ, ಈಶ್ವರಪ್ಪ ಗೌಡ ಸೇರಿದಂತೆ ಹಲವರು ಇದ್ದರು.