ಟೌನ್‌ಶಿಪ್ ನಿರ್ಮಾಣದ ನೆಪದಲ್ಲಿ ರೈತರಿಂದ ಬಲವಂತವಾಗಿ ಭೂಸ್ವಾಧೀನಕ್ಕೆ ಸರ್ಕಾರವು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಸುಪ್ರೀಂ ಕೊರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಕಿಡಿಕಾರಿದರು.
ಬೆಂ.ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ನಂದಗುಡಿಯಲ್ಲಿ ಮಂಗಳವಾರ ಭೂ ಸ್ವಾಧೀನ ವಿರೋಧಿ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಈ ಹಿಂದೆ 2007ರಲ್ಲಿ ಭೂ ಸ್ವಾಧೀನ ಪ್ರಕ್ರಿಯೆನ್ನು ವಿರೋಧಿಸಿದ್ದ ಕಾಂಗ್ರೆಸ್ ಪಕ್ಷ, ಅಧಿಕಾರಕ್ಕೆ ಬಂದ ಬಳಿಕ ರೈತರಿಂದ ಬಲವಂತವಾಗಿ ಭೂಮಿ ಕಸಿದುಕೊಳ್ಳಲು ಮುಂದಾಗಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ. ಯಾವುದೇ ಸರಕಾರಗಳಾಗಲಿ ಸಂವಿಧಾನಕ್ಕೆ ವಿರುದ್ಧವಾಗಿ ರೈತರಿಂದ ಬಲವಂತವಾಗಿ ಭೂಮಿಯನ್ನು ಕಸಿದುಕೊಂಡು ಟೌನ್‌ಶಿಪ್ ನಿರ್ಮಾಣ ಅಸಾಧ್ಯ” ಎಂದು ಗುಡುಗಿದರು.

ರಿಯಲ್ ಎಸ್ಟೇಟ್ ದಲ್ಲಾಳಿಗಳನ್ನು ಮೆಚ್ಚಿಸಲು ಫಲವತ್ತಾದ ಕೃಷಿ ಭೂಮಿಯನ್ನು ರಾಜ್ಯ ಸರಕಾರವು ಟೌನ್‌ಶಿಪ್ ಮಾಡಲು ಮುಂದಾಗಿರುವುದು ಸರಿಯಲ್ಲ. 18,500 ಭೂಮಿ ಕಳೆದುಕೊಂಡ ರೈತರಿಗೆ ಪರ್ಯಾಯ ವ್ಯವಸ್ಥೆ ಏನು? ಭೂತಾಯ ಮಕ್ಕಳ ಕುಟುಂಬಗಳು ಹೇಗೆ ಜೀವನ ಸಾಗಿಸಬೇಕು. ರಾಜ್ಯ ಸರಕಾರ ಇನ್ನಾದರೂ ಎಚ್ಛೆತ್ತು ಕೂಡಲೇ ಟೌನ್‌ಶಿಪ್ ಪ್ರಕ್ರಿಯೆಯನ್ನು ಕೈ ಬಿಟ್ಟು, ರೈತರಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಲು ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ, ರೈತರ ಹೆಸರಲ್ಲಿ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಸರಕಾರ ರೈತರ ಹಿತ ಮರೆತಿದೆ. ರಾಜ್ಯದಲ್ಲಿ ಜೆಸಿಬಿ (ಜನತಾದಳ, ಕಾಂಗ್ರೆಸ್, ಬಿಜೆಪಿ) ಪಕ್ಷಗಳು ಅಧಿಕಾರ ನಡೆಸಿದ್ದು, ತಮ್ಮ ಅಧಿಕಾರಾವಧಿಯಲ್ಲಿ ಸಾವಿರಾರು ಎಕರೆ ಭೂಮಿ ಸಂಪಾದಿಸಿದ್ದಾರೆ. ರಾಜ್ಯದಲ್ಲಿ ರೈತರ ಪರವಾದ ಪ್ರಾದೇಶಿಕ ಪಕ್ಷಗಳು ಅಧಿಕಾರಕ್ಕೆ ತರುವ ಕೆಲಸಗಳನ್ನು ರಾಜ್ಯದ ಜನರು ನಿರ್ಧರಿಸಬೇಕಾಗಿದೆ.
ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ. ಶಿವಕುಮಾರ್ ರೈತ ವಿರೋಧಿ ಧೋರಣೆ ಅನುಸರಿಸುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸುತ್ತ ಇರುವ ದುಷ್ಟರನ್ನು ದೂರ ಇರಿಸುವ ಕೆಲಸ ಮಾಡಬೇಕು. ಅಲ್ಲದೆ ನಂದಗುಡಿ ಟೌನ್‌ಶಿಪ್ ಅನ್ನು ಕೈ ಬಿಡುವ ಬಗ್ಗೆ ನೋಟಿಫಿಕೇಷನ್ ಹೊರಡಿಸುವ ಮೂಲಕ ರೈತರ ಪರವಾಗಿದ್ದೇವೆ ಎಂದು ಸಾಬೀತುಪಡಿಸಬೇಕು. ಇಲ್ಲವಾದಲ್ಲಿ ನಂದಗುಡಿ ಭಾಗದ ರೈತರ ಜಮೀನು ಉಳಿಸಲು ಯಾವುದೇ ಹೋರಾಟಕ್ಕೂ ನಾವು ಕೈಜೋಡಿಸಲಿದ್ದೇವೆ ಎಂದರು.

ಶಾಶ್ವತ ನೀರಾವರಿ ಯೋಜನೆ ಸಮಿತಿಯ ಅಧ್ಯಕ್ಷ ಆಂಜನೇಯ ರೆಡ್ಡಿ ಮಾತನಾಡಿ, ನಂದಗುಡಿ ಭಾಗದಲ್ಲಿ ಬೆಂಗಳೂರು ನಗರಕ್ಕೆ ನಿತ್ಯ ಹಾಲು, ಹೂವು, ಹಣ್ಣು, ತರಕಾರಿ ಪೂರೈಸುತ್ತಾ ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡಿರುವ ರೈತರ ಫಲವತ್ತಾದ ಜಮೀನನ್ನು ಕಸಿದುಕೊಳ್ಳುತ್ತಿರುವುದು ಸರಿಯಲ್ಲ. ಟೌನ್‌ಶಿಪ್ ಹೆಸರಿನಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಕೆಲಸಕ್ಕೆ ರಾಜ್ಯ ಸರಕಾರ ಮುಂದಾಗಿದೆ.
ಇಂತಹ ರೈತ ವಿರೋಧಿ ಕೆಲಸಕ್ಕೆ ಮುಂದಾದರೆ ಮುಂದಿನ ದಿನಗಳಲ್ಲಿ ರಾಜ್ಯ ಸರಕಾರ ತಕ್ಕ ಬೆಲೆ ತೆರಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಭೂಗಳ್ಳರಿಗೆ, ಬಂಡವಾಳ ಶಾಹಿಗಳಿಗೆ ರೈತರ ಜೀವನಾಡಿಯಾದ ಫಲವತ್ತಾದ ಭೂಮಿಯನ್ನು ವಶಕ್ಕೆ ಪಡೆಯಲು ಅವಕಾಶ ನೀಡುವುದಿಲ್ಲ. ಇದರ ವಿರುದ್ಧ ರೈತರು ಸಂಘಟಿತರಾಗಿದ್ದು, ಜೀವ ಹೋದರೂ ಸರಿಯೇ ಭೂಮಿ ಕೊಡಲು ಸಿದ್ದರಿಲ್ಲ. ಹೋರಾಟಕ್ಕೆ ಅಣಿಯಾಗಿದ್ದೇವೆ. ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಟಕ್ಕೆ ಸಿದ್ಧರಾಗಿರೋಣ ಎಂದು ಕರೆ ನೀಡಿದರು.
ಅಳಂದ ಶಾಸಕ ಬಿ.ಆರ್. ಪಾಟೀಲ್ ಮಾತನಾಡಿ, ರಾಜ್ಯದಲ್ಲಿ ಎಲ್ಲ ಸರಕಾರಗಳ ಅವಧಿಯಲ್ಲಿ ಅಭಿವೃದ್ಧಿ ನೆಪದಲ್ಲಿ ರೈತರ ಭೂಮಿ ಕಸಿಯುವ ಕೆಲಸವಾಗುತ್ತಿದೆ. ಮೂಲಭೂತ ಸವಲತ್ತುಗಳನ್ನು ಒದಗಿಸಿ ರೈತರ ಹಿತ ಕಾಯುವಲ್ಲಿ ಸರಕಾರಗಳು ವಿಫಲವಾಗುತ್ತಿವೆ. ನಂದಗುಡಿ ಟೌನ್‌ಶಿಪ್ ಭೂ ಸ್ವಾಧೀನ ಪ್ರಕ್ರಿಯೆ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಸದನದ ಗಮನಕ್ಕೆ ತಂದು ಟೌನ್‌ಶಿಪ್ ನಿರ್ಮಾಣ ಯೋಜನೆಯನ್ನು ಕೈ ಬಿಡುವಂತೆ ಒತ್ತಾಯಿಸಲಾಗುವುದು ಎಂದು ಹೇಳಿದರು.

ಭೂಸ್ವಾಧೀನ ವಿರೋಧಿ ಸಮಿತಿ ಕಚೇರಿಯಿಂದ ಗಾಂಧಿ ವೃತ್ತದವರೆಗೂ ಸುಮಾರು 3000ಕ್ಕೂ ಹೆಚ್ಚಿನ ರೈತರು ಕಾಲ್ನಡಿಗೆಯಲ್ಲಿ ತೆರಳುವ ಮೂಲಕ ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ನಂದಗುಡಿಯಲ್ಲಿ ಹೋಟೆಲ್, ಅಂಗಡಿ-ಮುಂಗಟ್ಟು, ವಾಣಿಜ್ಯ ಕೇಂದ್ರಗಳನ್ನು ಸ್ವಯಂಪ್ರೇರಿತರಾಗಿ ಮುಚ್ಚಿ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತವಾಯಿತು. ರೈತ ಹೋರಾಟಕ್ಕೆ ರೈತ ಮಹಿಳೆಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಕ್ಷಾತೀತವಾಗಿ ಸಾಥ್ ನೀಡಿದ್ದರಲ್ಲದೇ ರೈತರು ಎತ್ತಿನ ಬಂಡಿ, ಟ್ರಾಕ್ಟರ್‌ನಲ್ಲಿ ಬಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ಗಮನ ಸೆಳೆಯಿತು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಬಿಜೆಪಿಗರ ಅತಿರೇಕದ ಮಾತುಗಳೂ, ಕಾಂಗ್ರೆಸ್ಸಿಗರ ಕರುಣಾಜನಕ ಸ್ಥಿತಿಯೂ
ಕಾರ್ಯಕ್ರಮದಲ್ಲಿ ಮಧ್ಯಪ್ರದೇಶದ ಮಾಜಿ ಶಾಸಕ ಡಾ.ಸುನಿಲಮ್, ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಪೃಥ್ವಿರೆಡ್ಡಿ, ಬಳ್ಳಾರಿಯ ರೈತ ಮುಖಂಡರಾದ ಮಾಧವ ರೆಡ್ಡಿ, ವೀರಸಂಗಯ್ಯ, ರಘುನಾಥ್, ಆಲೀಬಾಬಾ, ಸುಭಾಶ್, ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಕೆಂಚೇಗೌಡ, ಸದಸ್ಯರಾದ ಐ.ಸಿ. ಮುನಿಶಾಮೆಗೌಡ, ಎಂ.ಬಿ. ವೆಂಕಟೇಶ್, ಚೊಕ್ಕಸಂದ್ರ ನಾರಾಯಣಸ್ವಾಮಿ, ಧರ್ಮೇಶ್, ಚಂದ್ರಮೋಹನ್, ಶಂಕರನಾರಾಯಣ್, ಟಿ. ಅಗ್ರಹಾರ ಆನಂದ್, ಇಟ್ಟಸಂದ್ರ ಮುನಿರಾಜ್, ದೇವೆಗೌಡ ಹಕ್ಕಲೇಗೌಡ ಸೇರಿದಂತೆ ಸಹಸ್ರಾರು ರೈತರು ಭಾಗವಹಿಸಿದ್ದರು.



