ರಾಜ್ಯ ಸರ್ಕಾರ ಒಂಬತ್ತು ವಿಶ್ವವಿದ್ಯಾಲಯಗಳನ್ನು ಮುಚ್ಚುವ ಹುನ್ನಾರ ನಡೆಸಿದ್ದು, ತಮ್ಮ ತೀರ್ಮಾನವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ವಿಜಯನಗರ ಜಿಲ್ಲೆಯ ಹೊಸಪೇಟೆಯ ಎಸ್‌ಎಫ್‌ಐ ತಾಲೂಕು ಸಮಿತಿಯಿಂದ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.ಹೊಸಪೇಟೆ
ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ಶಿವರೆಡ್ಡಿ ಮಾತನಾಡಿ, “ರಾಜ್ಯದಲ್ಲಿ ಒಂಬತ್ತು ಹೊಸ ವಿಶ್ವವಿದ್ಯಾಲಯಗಳನ್ನು ಮುಚ್ಚಲು ರಾಜ್ಯ ಸರ್ಕಾರದ ಸಚಿವ ಸಂಪುಟದ ಉಪಸಮಿತಿ ತೀರ್ಮಾನಿಸಿದೆ. ಸರ್ಕಾರದ ಈ ನಡೆ ವಿದ್ಯಾರ್ಥಿ ವಿರೋಧಿ ನಡೆಯಾಗಿದೆ. ಹಾಗಾಗಿ ರಾಜ್ಯ ಸರ್ಕಾರ ವಿವಿಗಳನ್ನು ಮುಚ್ಚುವ ತೀರ್ಮಾನವನ್ನು ರದ್ದುಪಡಿಸಿ, ಯಥಾ ಸ್ಥಿತಿಯಲ್ಲಿ ವಿವಿಗಳನ್ನು ಮುಂದುವರೆಸಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ ತಾಲೂಕು ಸಮಿತಿ ಒತ್ತಾಯಿಸುತ್ತದೆ ಎಂದರು.
“2023ರಲ್ಲಿ ಅಂದಿನ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಹೊಸ ವಿಶ್ವವಿದ್ಯಾಲಯಗಳನ್ನು ಪ್ರಾರಂಭಮಾಡಿತ್ತು. ಆದರೆ ಅಂದಿನ ಸರ್ಕಾರ ಅಗತ್ಯ ಅನುದಾನ ಹಾಗೂ ವಿಶ್ವವಿದ್ಯಾಲಯ ಸ್ಥಾಪಿಸಲು ಬೇಕಾದ ಸೌಲಭ್ಯಗಳನ್ನು ಒದಗಿಸದೆ ಏಕಾಏಕಿ ಪ್ರಾರಂಭಿಸಿತು. ನಂತರ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಸರ್ಕಾರ ಕೂಡ ಕಳೆದ ಎರಡು ವರ್ಷದಿಂದ ಯಾವುದೇ ಅನುದಾನ ನೀಡಿಲ್ಲ. ಇಂತಹ ಸಂಕಷ್ಟಮಯ ಪರಿಸ್ಥಿತಿಯಲ್ಲಿಯೂ ಕೂಡ ಕಾರ್ಯನಿರ್ವಹಿಸಿಕೊಂಡು ಬರುತ್ತಿರುವ ವಿಶ್ವವಿದ್ಯಾಲಯಗಳನ್ನು ಮುಚ್ಚಲು ರಾಜ್ಯ ಸರ್ಕಾರ ತೀರ್ಮಾನಿಸಿರುವುದು ಯಾವುದೇ ರೀತಿಯಲ್ಲಿ ಸಮರ್ಥನೀಯವಲ್ಲ” ಎಂದರು.
“ಸರ್ಕಾರ ಮುಚ್ಚಲು ಹೊರಟಿರುವ ಈ ವಿವಿಗಳಿಗೆ ಪೂರ್ಣಕಾಲಿಕ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ನೇಮಕ, ಗ್ರಾಂಥಾಲಯ, ಪ್ರಯೋಗಾಲಯ, ಹಾಸ್ಟೆಲ್, ಅನುದಾನ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಸರ್ಕಾರ ಒದಗಿಸಬೇಕಿತ್ತು. ಈ ಸೌಕರ್ಯಗಳನ್ನು ಒದಗಿಸದಿರುವ ಸ್ಥಿತಿಯಲ್ಲಿಯೂ ಹಲವು ಪ್ರಮುಖ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಅಗತ್ಯವಿರುವ ಉನ್ನತ ಶಿಕ್ಷಣ ಪಡೆಯಲು ವಿವಿಧ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಮುನ್ನಡೆಯುತ್ತಿವೆ” ಎಂದು ಹೇಳಿದರು.
“ಈಗಾಗಲೇ ಈ ವಿವಿಗಳಲ್ಲಿ ಓದುತ್ತಿರುವ ಸಾವಿರಾರು ವಿದ್ಯಾರ್ಥಿಗಳು, ನೂರಾರು ಬೋಧಕ ಮತ್ತು ಬೋಧಕೇತರ ವರ್ಗ ವಿವಿಗಳಿಗೆ ಸೇರ್ಪಡೆಯಾಗಿರುವ ನೂರಾರು ಪದವಿ ಕಾಲೇಜುಗಳು ಹಾಗೂ ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಅತಂತ್ರವಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣವನ್ನು ಕೇವಲ ಲಾಭದ ದೃಷ್ಟಿಯಲ್ಲಿ ನೋಡದೆ ಮಾನವ ಸಂಪನ್ಮೂಲ ಅಭಿವೃದ್ಧಿಯ ದೃಷ್ಟಿಯಿಂದ ಈ ಎಲ್ಲ ವಿಶ್ವವಿದ್ಯಾಲಯಗಳಿಗೂ ಹೆಚ್ಚಿನ ಅನುಧಾನ ಬಿಡುಗಡೆ ಮಾಡಿ ವಿವಿಗಳನ್ನು ಉಳಿಸಬೇಕಾಗಿದೆ” ಎಂದು ಆಗ್ರಹಿಸಿದರು.
ಎಸ್‌ಎಫ್‌ಐ ನ ಜಿಲ್ಲಾ ಸಹಕಾರ್ಯದರ್ಶಿ ಕೌಶಾಲ್ ಮಾತನಾಡಿ, “ವಿಶ್ವವಿದ್ಯಾಲಯಗಳನ್ನು ಬಲಿಷ್ಠಪಡಿಸುವ ಬದಲು ಮುಚ್ಚುವ ತೀರ್ಮಾನವು ಆಯಾ ಜಿಲ್ಲೆಯ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ವಂಚಿಸುವುದಾಗಿದೆ. ಹಾಗಾಗಿ ಸಚಿವ ಸಂಪುಟದ ಉಪಸಮಿತಿ ತೆಗೆದುಕೊಂಡಿರುವ ನಿರ್ಧಾರವನ್ನು ಸರ್ಕಾರ ಯಾವುದೇ ಕಾರಣ ನೀಡದೆ ಕೂಡಲೇ ಹಿಂಪಡೆಯಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಇಂಡಿ ಠಾಣೆಗೆ ನೂತನ CPI ಆಗಿ ಪ್ರದೀಪ ಭಿಸೆ ಅಧಿಕಾರ ಸ್ವೀಕಾರ
ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಹಾಗೂ ಬೌದ್ದಿಕ ಸ್ವಾವಲಂಬನೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ
ವಿವಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಿ ಕೊಟ್ಟು ಬಲಪಡಿಸಬೇಕು. ವಿಶ್ವ ವಿದ್ಯಾಲಯಗಳಲ್ಲಿ ಉಪನ್ಯಾಸಕರನ್ನು ನೇಮಕಾತಿ ಮಾಡಬೇಕು. ಅನುದಾನವನ್ನು ನೀಡುವ ಮೂಲಕ ವಿಶ್ವ ವಿದ್ಯಾಲಯಗಳನ್ನು ಬಲಪಡಿಸಬೇಕು. ಸಂಪುಟ ಉಪಸಮಿತಿಯ ತೀರ್ಮಾನವನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಕೂಡಲೇ ಹಿಂಪಡೆಯಬೇಕು. ಇಲ್ಲವಾದಲ್ಲಿ ವಿಶ್ವವಿದ್ಯಾಲಯದ ಉಳಿವಿಗಾಗಿ ರಾಜ್ಯವ್ಯಾಪಿ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ” ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ತಾಲೂಕು ಮುಖಂಡರಾದ ಕೌಶಾಲ್, ರುದ್ರೇಶ್, ಸುಬ್ಬರಾಮಣಿ, ಸಂತೋಷ್, ವಿನಯ್, ದಿವಾಕರ್ ಸೇರಿದಂತೆ ಇತರ ವಿದ್ಯಾರ್ಥಿಗಳು ಇದ್ದರು.