ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಅಗತ್ಯಕ್ಕಿಂತ ಹೆಚ್ಚಾಗಿ ಮಳೆ ಸುರಿದ ಪರಿಣಾಮ ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ಒಂದು ಕಡೆಯಲ್ಲಿ ಕೃತಕ ನೆರೆ ಉಂಟಾದರೆ, ಇನ್ನೊಂದೆಡೆ ಗುಡ್ಡ ಕುಸಿತದಂತಹ ದುರಂತಗಳು ಇಲ್ಲಿಯ ಜನರಿಗೆ ದಿಗ್ಭ್ರಮೆಗೊಳಿಸಿದೆ.
ಜಿಲ್ಲೆಯಾದ್ಯಂತ ಹಲವೆಡೆ ವಿದ್ಯುತ್ ಕಂಬಗಳು ತುಂಡು, ತುಂಡಾಗಿ ಬಿದ್ದ ಪರಿಣಾಮ ವಿದ್ಯುತ್ ವ್ಯತ್ಯಯ ಉಂಟಾಗಿ ಸ್ಥಳೀಯರು ಸಮಸ್ಯೆಗಳ ಸುಳಿಯಲ್ಲಿ ಜೀವನ ನಡೆಸುವಂತಾಗಿದೆ. ಮೆಸ್ಕಾಂ ಅಧಿಕಾರಿಗಳ ಅವಾಂತರದಿಂದಾಗಿ ಇಲ್ಲಿನ ಶಶಿಧರ ಶೆಟ್ಟಿ ಎಂಬುವವರು ಕಳೆದ 20 ದಿನಗಳಿಂದ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಇದೀಗ ಬಡ ಕುಟುಂಬವೊಂದು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.
ಶಶಿಧರ್ ಅವರು ಎಂದಿನಂತೆ ಪತ್ನಿಯೊಂದಿಗೆ ಮಗನನ್ನು ಶಾಲೆಗೆ ಬಿಡಲು ಸ್ಕೂಟರ್ ನಲ್ಲಿ ತೆರಳುವಾಗ ಮಣಿಪಾಲದ ಕೈಗಾರಿಕೆ ಪ್ರದೇಶದಲ್ಲಿ ಧಾರಾಕಾರ ಸುರಿದ ಮಳೆ ಹಾಗೂ ಗಾಳಿಗೆ ವಿದ್ಯುತ್ ತಂತಿ ತುಂಡಾಗಿ ಸ್ಕೂಟರ್ ಮೇಲೆ ಬಿದ್ದಿದೆ. ವಿದ್ಯುತ್ ತಂತಿ ಶಶಿಧರ ಶೆಟ್ಟಿ ಅವರ ಕುತ್ತಿಗೆ ಉರುಳು ಹಾಕಿದ ಪರಿಣಾಮ ಪತ್ನಿ ಮತ್ತು ಮಗು ಜೊತೆಗೆ ಬಿದ್ದಿದ್ದಾರೆ. ತಕ್ಷಣ ಸ್ಥಳೀಯರು ಶಶಿಧರ್ ಶೆಟ್ಟಿ ಹಾಗೂ ಅವರ ಕುಟುಂಬವನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.
ಪತ್ನಿ ಮತ್ತು ಮಗುವಿಗೆ ಸಣ್ಣ ಪುಟ್ಟ ಗಾಯಗಳಿಗೆ ಚಿಕಿತ್ಸೆ ನೀಡಿಲಾಗಿದೆ. ಗಂಭೀರವಾಗಿ ಗಾಯಗೊಂಡ ಶಿಶಿಧರ್ ಶೆಟ್ಟಿ ಅವರನ್ನು ಹಿರಿಯ ವೈದ್ಯರು ಸಂಪೂರ್ಣವಾಗಿ ಪರೀಕ್ಷೆ ನಡೆಸಿದ ಬಳಿಕ ಸ್ಪೈನಲ್ ಕೋಡ್‌ನಲ್ಲಿ ಸಮಸ್ಯೆಯಾಗಿದೆ ಎಂದು ತಿಳಿಸಿದ್ದಾರೆ. ಈಗಾಗಲೇ ಎರಡು ಆಪರೇಷನ್‌ಗೆ ಸುಮಾರು ₹15 ಲಕ್ಷ ರೂ. ವೆಚ್ಚ ಆಗಿದ್ದು, ಇನ್ನು ಚಿಕಿತ್ಸೆ ಮುಂದುವರಿಸಬೇಕೆಂದು ವೈದ್ಯರು ಹೇಳಿದ್ದಾರೆ. ಚಿಕಿತ್ಸೆಗೆ ₹6 ಲಕ್ಷ ರೂ. ವೆಚ್ಚ ಮಾಡಿದ ಕುಟುಂಬ ಈಗ ಹಣವಿಲ್ಲದೆ ಚಿಂತಿಗೀಡಾಗಿದೆ.

ಈ ಘಟನೆ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಮೆಸ್ಕಾಂ ಇಲಾಖೆಯ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ ಇದುವರೆಗೂ ಮೆಸ್ಕಾಂ ಇಲಾಖೆ ಸಂತ್ರಸರ ನೆರವಿಗೆ ಬಾರದೇ ಕುಂಟು ನೆಪ ಹೇಳಿ ನುಣಚಿಕೊಂಡು ದಿನದೂಡುತ್ತಿದೆ. ಘಟನೆ ಬಳಿಕ ಶಶಿಧರ್ ಶೆಟ್ಟಿ ಅವರ ಕುಟುಂಬ ಆರ್ಥಿಕ ಸಂಕಷ್ಟಕ್ಕೀಡಾಗಿದ್ದು, ಅವರ ನೆರವಿಗೆ ಸಂಬಂಧಿಕರು, ಸ್ನೇಹಿತರು ಧನ ಸಹಾಯದ ಮೂಲಕ ಚಿಕಿತ್ಸೆ ಮುಂದುವರಿದಿದೆ. ಹೆಚ್ಚಿನ ಖರ್ಚಿಗೆ ಕುಟುಂಬ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದೆ.
ಈ ಬಗ್ಗೆ ಶಶಿಧರ್ ಅವರ ಪತ್ನಿ ದಿವ್ಯ ಈ ದಿನ.ಕಾಮ್ ಜೊತೆ ಮಾತನಾಡಿ, ʼಈ ಘಟನೆಗೆ ವಿದ್ಯುತ್ ಇಲಾಖೆಯ ನಿರ್ಲಕ್ಷ್ಯವೇ ಕಾರಣ. ಕೂಲಿ ಮಾಡುವ ಜೀವನ ಸಾಗಿಸುವ ನಮಗೆ ಈ ಘಟನೆಯಿಂದ ದಿಕ್ಕುತೋಚದಂತಾಗಿದೆ. ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಭರಿಸುವ ಸಾಮರ್ಥ್ಯ ಇಲ್ಲ. ದಾನಿಗಳು ನಮ್ಮ ಆರ್ಥಿಕ ನೆರವು ನೀಡಬೇಕುʼ ಎಂದು ಕೋರಿದರು.

ಶಶಿಧರ್ ಶೆಟ್ಟಿ ಅವರ ಸಹೋದರ ಸಂಬಂಧಿ ನಾಗರಾಜ್ ಶೆಟ್ಟಿ ಈ ದಿನ.ಕಾಮ್ ಜೊತೆ ಮಾತನಾಡಿ, ʼಶಶಿಧರ್ ಶೆಟ್ಟಿ ಅವರ ತಲೆಯ ಕೆಳಗಿನ ಭಾಗ ಸಂಪೂರ್ಣ ಸ್ವಾಧೀನ ಕಳೆದುಕೊಂಡಿದೆ. ಚಿಕಿತ್ಸೆಯಿಂದ ಅವರು ಚೇತರಿಸಿಕೊಳ್ಳಲು ಮೂರ್ನಾಲ್ಕು ತಿಂಗಳು ಸಮಯ ಬೇಕಾಗಬಹುದು ಎಂದು ವೈದ್ಯರು ಹೇಳಿದ್ದಾರೆ. ತದನಂತರ ಮೊದಲಿನಂತೆ ಚೇತರಿಕೆ ಕಂಡುಕೊಳ್ಳುವ ವಿಶ್ವಾಸವಿಲ್ಲ. ಈಗ ಆಸ್ಪತ್ರೆ ವೆಚ್ಚ ಹೇಗೆ ಭರಿಸುವುದು ಎಂಬ ಚಿಂತೆ ಕಾಡುತ್ತಿದೆ. ಮೆಸ್ಕಾಂ ಇದನ್ನು ಗಂಭೀರವಾಗಿ ಪರಿಗಣಿಸಬೇಕುʼ ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಗುಲಬರ್ಗಾ ವಿಶ್ವವಿದ್ಯಾಲಯ ಘಟಿಕೋತ್ಸವ : ದಲಿತ ಕಾರ್ಮಿಕನ ಮಗನಿಗೆ ಎರಡು ಚಿನ್ನದ ಪದಕ
ಒಟ್ಟಾರೆಯಾಗಿ ಯಾರೋ ಮಾಡಿದ ತಪ್ಪಿಗೆ ಒಂದು ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಮೆಸ್ಕಾಂ ಇಲಾಖೆ ಮತ್ತು ಸರ್ಕಾರ ಈ ನಿಟ್ಟಿನಲ್ಲಿ ಗಂಭೀರವಾಗಿ ಪರಿಗಣಿಸಿ ಕುಟುಂಬದ ನೆರವಿಗೆ ಧಾವಿಸಬೇಕು ಜೊತೆಗೆ ಸಂತ್ರಸ್ತರ ಸಂಪೂರ್ಣ ಚಿಕಿತ್ಸೆ ವೆಚ್ಚವನ್ನು ಭರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.

