ವೇತನ ಹೆಚ್ಚಳ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗಾಗಿ ಬಿಸಿಯೂಟ ನೌಕರರು ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬಾರಿ ಬಜೆಟ್‌ನಲ್ಲಿ ಬಿಸಿಯೂಟ ನೌಕರರ ವೇತನ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ವೇಳೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಲಕ್ಷ್ಮೀದೇವಿ, “ಹಲವು ವರ್ಷಗಳಿಂದ ಶಾಲೆಗಳಲ್ಲಿ ಬಿಸಿಯೂಟ ಅಡುಗೆ ಮಾಡಿಕೊಂಡು ಬಂದಿದ್ದೇವೆ. ನಮಗೆ ನೀಡುವುದೇ 3,700 ರೂ. ಸಂಬಳ ಇದರಲ್ಲೇ ಕೆಲಸ ಮಾಡಿಕೊಂಡು ಬಂದಿದ್ದೇವೆ. ಇಷ್ಟು ಬಿಟ್ಟರೇ ನಮಗೆ ಬೇರೆ ಏನೂ ಕೊಡುತ್ತಿಲ್ಲ. ಈ ಹಿಂದೆ ವಾರದಲ್ಲಿ 2 ಸಲ ಮೊಟ್ಟೆ ಕೊಡುತ್ತಿದ್ದರೂ, ಈಗ ವಾರದಲ್ಲಿ ನಾಲ್ಕು ಸಲ ಮೊಟ್ಟೆ ಕೊಟ್ಟಿದ್ದಾರೆ. ಸಾವಿರಾರು ಮಕ್ಕಳಿಗೆ ಮೊಟ್ಟೆ ಸುಲಿಯುವುದೇ ಕೆಲಸವಾಗಿದೆ. ಮೊಟ್ಟೆ ಸುಲಿಯುವುದಕ್ಕೆ 2 ಗಂಟೆಗೂ ಹೆಚ್ಚು ಸಮಯ ಬೇಕು. ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಗಂಜಿ ಕೊಡಬೇಕು. ನಂತರ ಊಟ ಕೊಡಬೇಕು. ಮಕ್ಕಳ ಮತ್ತು ಶಿಕ್ಷಕರ ತಟ್ಟೆಯನ್ನು ತೊಳಿಯಬೇಕು. ಮಾಡಲಿಲ್ಲ ಅಂದರೆ, ಕೆಲಸ ಬಿಟ್ಟು ಹೋಗಿ ಎಂದು ಹೇಳುತ್ತಾರೆ. ನಾವು ಕೆಲಸ ಬಿಟ್ಟು ಹೋಗಲು ಈ ಕೆಲಸಕ್ಕೆ ಸೇರಿಲ್ಲ. ಇವತ್ತು ಇಡೀ ದಿನ ಬಿಸಿಯೂಟ ನಿಲ್ಲಿಸಿ ಬಂದಿದ್ದೇವೆ. ಆದರೂ ಕೂಡ ಯಾವ ಅಧಿಕಾರಿ ಆಗಲೀ, ಸಚಿವರಾಗಲೀ ಪ್ರತಿಭಟನಾ ಸ್ಥಳಕ್ಕೆ ಬಂದಿಲ್ಲ. ಸರ್ಕಾರಕ್ಕೆ ನಾವು ಗಡುವು ನೀಡುತ್ತಿದ್ದೇವೆ. ನಮ್ಮ ಸಂಬಳ ಜಾಸ್ತಿ ಮಾಡಬೇಕು. ಇಲ್ಲವಾದರೇ, ನಾವು ರಸ್ತೆ ತಡೆ ಮಾಡಿ ಲಾಟಿ ಏಟು ತಿನ್ನುವುದಕ್ಕೂ ಕೂಡ ಸಿದ್ಧರಿದ್ದೇವೆ” ಎಂದು ಹೇಳಿದರು.
ಸಿಐಟಿಯುನ ಹನುಮಮ್ಮ ಮಾತನಾಡಿ, “ಅಕ್ಷರ ದಾಸೋಹ ಆರಂಭವಾಗಿ 24 ವರ್ಷ ಕಳೆದಿದೆ. ಬೆಳಿಗ್ಗೆಯಿಂದ ಲಕ್ಷಾಂತರ ಜನರು ಬಿಸಿಯೂಟ ಬಂದ ಮಾಡಿ ಪ್ರತಿಭಟನೆ ಮಾಡುತ್ತಿದ್ದಾರೆ. ಈಗ ಅವರು ಬಜೆಟ್‌ನಲ್ಲಿ ಬಿಸಿಯೂಟ ನೌಕರರಿಗೆ ಸಂಬಳ ಹೆಚ್ಚಳ ಮಾಡಬೇಕು. ಇಲ್ಲವಾದರೇ, ನಾವು ತೀವ್ರ ಹೋರಾಟ ಮಾಡುತ್ತೇವೆ. ಈ ಹಿಂದೆಯೂ ಕೂಡ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾವು ಪ್ರತಿಭಟನೆ ಮಾಡಿದ್ದೇವೆ. ಈಗ ಬಿಜೆಪಿಯನ್ನೂ ಸೋಲಿಸಿ ಮೂಲೆಗೆ ಕೂರಿಸಿದ್ದೀವಿ. ಈಗಿರುವ ಕಾಂಗ್ರೆಸ್ ಸರ್ಕಾರ ನಮ್ಮ ಪ್ರತಿಭಟನೆಗೆ ಸ್ಪಂದಿಸದೇ ಇದ್ದರೇ, ಕಾಂಗ್ರೆಸ್ ಅನ್ನು ಸಹ ಮೂಲೆಗೆ ಕೂಡಿಸುತ್ತೇವೆ” ಎಂದು ಎಚ್ಚರಿಕೆ ನೀಡಿದರು.
ಬಿಸಿಯೂಟ ನೌಕರ ಸಮಿತಿಯ ರಾಜ್ಯ ಖಜಾಂಚಿ ಮಹದೇವಮ್ಮ ಮಾತನಾಡಿ, “ಯಾವುದೇ ಆಧಾರ ಇಲ್ಲದೇಯೇ ಬಿಸಿಯೂಟ ನೌಕರರು ಕೆಲಸ ಮಾಡುತ್ತಿದ್ದಾರೆ. ಗೌರವಧನದ ಆಧಾರದ ಮೇಲೆ 3,700 ರೂಪಾಯಿಗೆ ಕೆಲಸ ಮಾಡುತ್ತಿದ್ದಾರೆ. ಸರ್ಕಾರಗಳು ಹೇಳುತ್ತವೆ ದೇಶವನ್ನ ಅಭಿವೃದ್ಧಿ ಮಾಡುತ್ತೇವೆ ಎಂದು. ಈ ದೇಶದಲ್ಲಿ ನಾವು ಇದ್ದೀವಿ. ಗ್ಯಾರೆಂಟಿಯನ್ನ ನಾವು ಸ್ವಾಗತ ಮಾಡುತ್ತೇವೆ. ನಮಗೂ ಕೂಡ ಗ್ಯಾರೆಂಟಿ ಕೊಡಬೇಕು. ನೀವು ಹೇಳಿದಂತೆ ನುಡಿದಂತೆ ನಡೆಯಿರಿ” ಎಂದರು.
“ಇಡೀ ರಾಜ್ಯದಲ್ಲಿ 11,500 ಜನರನ್ನ ನಿವೃತ್ತಿ ಹೆಸರಿನಲ್ಲಿ ಮನೆಗೆ ಕಳುಹಿಸಿದ್ದಾರೆ. ಇಡಿಗಂಟು ಕೂಡಲೇ ಬಿಸಿಯೂಟ ನೌಕರರಿಗೆ ಜಾರಿಯಾಗಬೇಕು. ಬಿಸಿಯೂಟ ನೌಕರರಿಗೆ ಹೇಳಿದಂತೆ 6 ಸಾವಿರ ವೇತನ ಹೆಚ್ಚಳ ಮಾಡಬೇಕು” ಎಂದು ಎಚ್ಚರಿಕೆ ನೀಡಿದರು.
ಕಳೆದ ಎರಡು ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಮಟ್ಟದ ಅಹೋರಾತ್ರಿ ಅನಿರ್ಧಿಷ್ಟಾವಧಿ ಧರಣಿ ನಡೆಯುತ್ತಿದೆ. ಈ ಧರಣಿ ಮಾರ್ಚ್ 7ರವೆರೆಗೂ ನಡೆಯಲಿದೆ. ಪ್ರಮುಖವಾಗಿ ಶಿಕ್ಷಣ, ಆರೋಗ್ಯ ಎಲ್ಲವು ದುಬಾರಿಯಾಗುತ್ತಿರುವ ಈ ದಿನಗಳಲ್ಲಿ ಕಾರ್ಮಿಕರ ವೇತನ ಪರಿಷ್ಕರಣೆಯಾಗಬೇಕು ಎಂದು ಪ್ರತಿಭಟನಾಕಾರರು ಪಟ್ಟನ್ನ ಹಿಡಿದಿದ್ದಾರೆ.
ಈ ಸುದ್ದಿ ಓದಿದ್ದೀರಾ? 16 ಮತಗಳಿಂದ ಸೋತಿದ್ದ ಸೌಮ್ಯಾರೆಡ್ಡಿ ಕೇಸು-ಸುಪ್ರೀಮ್ ಕೋರ್ಟ್ ಏನು ಹೇಳಿತು?
ಸಿಐಟಿಯು ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯುತ್ತಿದ್ದು, ಕೇಂದ್ರ ಸರ್ಕಾರದ ಕಾರ್ಮಿಕ ಸಂಹಿತೆಗಳು ರದ್ದಾಗಬೇಕು, ಸಮಾನ ಕನಿಷ್ಠ ವೇತನ 36 ಸಾವಿರ ಪರಿಷ್ಕರಣೆ ಮಾಡಬೇಕು, ಸ್ಕೀಂ ನೌಕರರಿಗೆ ಭರವಸೆ ನೀಡಿದಂತೆ ವೇತನ ಹೆಚ್ಚಳ ಮಾಡಬೇಕು, ಗ್ರಾಮ ಪಂಚಾಯತ್, ಕಟ್ಟಡ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕು, ಗುತ್ತಿಗೆ, ಹೊರಗುತ್ತಿಗೆ ನೌಕರರ ಖಾಯಮಾತಿಯ ಶಾಸನ ರೂಪಿಸಬೇಕು, ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿ ಈ ಧರಣಿ ನಡೆಸಲಾಗುತ್ತಿದೆ.
ಮಾರ್ಚ್ 3ರಂದು ಗ್ರಾಮ ಪಂಚಾಯಿತಿ ಕಾರ್ಮಿಕರು, ಮಾರ್ಚ್ 4ರಂದು ಅಕ್ಷರ ದಾಸೋಹ ಕಾರ್ಮಿಕರ ಪ್ರತಿಭಟನೆ ನಡೆದಿದೆ. ಇನ್ನು ಮಾರ್ಚ್ 5ರಂದು ಕಟ್ಟಡ ನಿರ್ಮಾಣ ಕಾರ್ಮಿಕರು, ಮಾರ್ಚ್ 6ರಂದು ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾಯಂ ಹಾಗೂ ಗುತ್ತಿಗೆ ಕಾರ್ಮಿಕರು ಮತ್ತು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಅಸಂಘಟಿತ ಕಾರ್ಮಿಕರು ಹಾಗೂ ಮಾರ್ಚ್ 7ರಂದು ಅಂಗನವಾಡಿ ಕಾರ್ಮಿಕರು ಈ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.