ಅಡುಗೆ ಅನಿಲ ಸಿಲಿಂಡರ್‌ನಿಂದ ಗ್ಯಾಸ್ ಸೋರಿಯಾಗಿ, ಮನೆ ಹೊತ್ತಿ ಉರಿದಿದ್ದು, ಮನೆಯಲ್ಲಿದ್ದ ಇಬ್ಬರು ಜೀವಂತವಾಗಿ ಸುಟ್ಟುಹೋಗಿರುವ ಹೃದಯವಿದ್ರಾವಕ ಘಟನೆ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ. ಘಟನೆಯಲ್ಲಿ ಇನ್ನೂ ನಾಲ್ವರಿಗೆ ಬೆಂಕಿ ತಗುಲಿದ್ದು, ಅವರ ಪರಿಸ್ಥಿತಿ ಗಂಭೀರವಾಗಿದೆ.
ನೆಲಮಂಗಲ ಬಳಿಯ ಅಡಕಮಾರನಹಳ್ಳಿಯಲ್ಲಿ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಬಳ್ಳಾರಿ ಮೂಲದ ನಾಗರಾಜ್ (50) ಮತ್ತು ರಕ್ಷಣೆಗೆ ಧಾವಿಸಿದ ಶ್ರೀನಿವಾಸ್ (50) ಸಜೀವ ದಹನವಾಗಿದ್ದಾರೆ. ಅಲ್ಲದೆ, ಅಭಿಷೇಕ್, ಶಿವಶಂಕರ್, ಲಕ್ಷ್ಮೀದೇವಿ ಹಾಗೂ ಬಸವ ಎಂಬವರ ಪರಿಸ್ಥಿತಿ ಗಂಭೀರವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಡಕಮಾರನಹಳ್ಳಿಯ ಗಂಗಯ್ಯ ಎಂಬವರ ಮನೆಯಲ್ಲಿ ನಾಗರಾಜ್ ಕುಟುಂಬ ಬಾಡಿಗೆಗೆ ವಾಸವಾಗಿತ್ತು. ಗುರುವಾರ ಬೆಳಗ್ಗೆ ದೇವರಿಗೆ ಪೂಜೆ ಮಾಡಲು ನಾಗರಾಜ್ ದೀಪ ಹೊತ್ತಿಸಿದ್ದರು. ಇದೇ ವೇಳೆ, ಗ್ಯಾಸ್ ಸಿಲಿಂಡರ್ ಬದಲಿಸಲು ನಾಗರಾಜ್ ಅರ ಮಗ ಅಭಿಷೇಕ್ ಮುಂದಾಗಿದ್ದಾರೆ. ಸರಿಯಾಗಿ ರೆಗ್ಯೂಲೇಟರ್‌ಅನ್ನು ಜೋಡಿಸದ ಕಾರಣ ಅನಿಲ ಸೋರಿಯಾಗಿ ಮನೆಯೆಲ್ಲ ಆವರಿಸಿದ್ದು, ಬೆಂಕಿ ಹೊತ್ತಿಕೊಂಡಿದೆ.
ಪರಿಣಾಮ ಮನೆ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಮನೆಯ ಒಳಭಾಗದಲ್ಲಿದ್ದ ನಾಗರಾಜ್ ಬೆಂಕಿಯಿಂದ ತಪ್ಪಿಸಿಕೊಳ್ಳಲಾಗದೆ, ಜೀವಂತವಾಗಿ ಸುಟ್ಟು ಹೋಗಿದ್ದಾರೆ. ಅವರನ್ನು ರಕ್ಷಿಸಲು ಧಾವಿಸಿದ ಪಕ್ಕದ ಮನೆಯ ಶ್ರೀನಿವಾಸ್ ಕೂಡ ಸಜೀವ ದಹನವಾಗಿದ್ದಾರೆ. ನಾಗರಾಜ್ ಪತ್ನಿ ಲಕ್ಷ್ಮಿ ದೇವಿ (35), ಮಕ್ಕಳಾದ ಬಸನಗೌಡ (19) ಅಭಿಷೇಕ್ (18) ಹಾಗೂ ನೆರೆಹೊರೆಯ ನಿವಾಸಿ ಶಿವಶಂಕರ್‌ಗೂ ಬೆಂಕಿ ತಗುಲಿದ್ದು, ಸುಟ್ಟ ಗಾಯಗಳಾಗಿವೆ.
ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.