ಭತ್ತದ ಬೀಜದಿಂದ ಬರುವ ಬೆಂಕಿರೋಗ, ಊದು ಬತ್ತಿರೋಗ, ಕಂದು ಎಲೆಚುಕ್ಕಿ ರೋಗ ಮತ್ತು ಹುಸಿಕಾಡಿಗೆ ರೋಗಾಣುಗಳು ಮಣ್ಣು, ನೀರು, ಗಾಳಿ ಮೂಲಕ ಬಿತ್ತನೆ ಬೀಜಗಳಿಗೆ ಪ್ರಸಾರಗೂಂಡು ರೈತರಿಗೆ ಅಪಾರ ಆರ್ಥಿಕ ಹಾನಿಯನ್ನು ಉಂಟುಮಾಡುತ್ತವೆ. ರೈತರು ಅತಿ ಸರಳ ಮತ್ತು ಕಡಿಮೆ ಖರ್ಚಿನಲ್ಲಿ ಬೀಜೋಪಚಾರ ಮಾಡುವ ಮೂಲಕ ಈ ರೋಗಗಳನ್ನು ತಡೆಯಬಹುದು ಎಂದು ಕೃಷಿ ವಿಜ್ಞಾನ ಕೇಂದ್ರ ತಿಳಿಸಿದೆ.
ಕೊಡಗು ಜಿಲ್ಲೆಯ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು ಭತ್ತದ ಬೀಜೋಪಚಾರ ಕುರಿತು ಹಲವಾರು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. “ಹಾನಿಕಾರಕ ರೋಗಾಣುಗಳಾದ ಶಿಲೀಂದ್ರ, ದುಂಡಾಣು ಮತ್ತು ನಂಜಾಣುಗಳಂತಹ ಸೂಕ್ಷ್ಮ ಜೀವಿಗಳು ಬೀಜಗಳ ಹೊರಮೈ ಹಾಗೂ ಒಳಮೈ ಆವರಿಸಿಕೊಳ್ಳುತ್ತವೆ. ಬೀಜಗಳು ಮೊಳಕೆಯೊಡೆಯುವಾಗ ಮತ್ತು ಸಸಿಗಳು ಬೆಳೆಯುವಾಗ ವಿವಿಧ ಹಂತದಲ್ಲಿ ರೋಗವು ಉಲ್ಬಣಿಸಿ ಬೆಳೆಯ ಹಾನಿಗೆ ಕಾರಣವಾಗುತ್ತವೆ” ಎಂದು ವಿವರಿಸಿದ್ದಾರೆ.
ಬೀಜೋಪಚಾರ ಮಾಡುವ ವಿಧಾನ: ಪ್ರತೀ ಎಕರೆಗೆ 25-30 ಕೆ.ಜಿ ಭತ್ತದ ಬೀಜವನ್ನು ತೆಗೆದುಕೂಂಡು 1:4 ಪ್ರಮಾಣದ ಉಪ್ಪಿನ ದ್ರಾವಣದಲ್ಲಿ (4 ಲೀ. ನೀರಿಗೆ 1 ಕೆ.ಜಿ ಉಪ್ಪು) ಅದ್ದಿ ಗಟ್ಟಿ ಮತ್ತು ಜೊಳ್ಳು ಬೀಜಗಳನ್ನು ಬೇರ್ಪಡಿಸಬೇಕು.
ಗಟ್ಟಿಯಾದ ಬೀಜಗಳನ್ನು ಬೇರ್ಪಡಿಸಿದ ನಂತರ 2-3 ಬಾರಿ ತಣ್ಣೀರಿನಲ್ಲಿ ತೊಳೆದು ಸುಮಾರು 8 ಗಂಟೆಗಳ ಕಾಲ ಬಿತ್ತನೆ ಬೀಜವನ್ನು ನೀರಿನಲ್ಲಿ ನೆನೆಸಬೇಕು. ನೆನೆಸಿದ ಬೀಜಗಳನ್ನು ನೀರಿನಿಂದ ತೆಗೆದು ಎಕರೆಗೆ ಬೇಕಾದ 25-30 ಕೆ.ಜಿ ಬಿತ್ತನೆ ಬೀಜಕ್ಕೆ 100 ರಿಂದ 120 ಗ್ರಾಂ ಕಾರ್ಬೆಂಡೆಜಿಮ್ ಅಥವಾ 50 ರಿಂದ 60 ಗ್ರಾಂ ಕಾರ್ಬೆಂಡೆಜಿಮ್ + ಮ್ಯಾಂಕೊಜೆಬ್ ಅಥವಾ 50- 60 ಗ್ರಾಂ ಟ್ರೈಸೈಕ್ಲಜೋಲ್ ಎಂಬ ಶಿಲೀಂದ್ರನಾಶಕವನ್ನು ಚೆನ್ನಾಗಿ ಮಿಶ್ರಣ ಮಾಡಿ ನೆರಳಿನಲ್ಲಿ ಒಣಗಿಸಬೇಕು. ಈ ರೀತಿ ಬೀಜೋಪಚಾರ ಮಾಡಿದ ಬಿತ್ತನೆ ಬೀಜವನ್ನು ಒಂದು ಚೀಲದಲ್ಲಿ ಗಟ್ಟಿಯಾಗಿ ಕಟ್ಟಿ ಮೊಳಕೆಯೊಡೆಯಲು ಇಟ್ಟು ನಂತರ ಸಸಿಮಡಿಗೆ ಉಪಯೋಗಿಸಬೇಕು.
ಬೀಜೋಪಚಾರ ಮಾಡುವಾಗ ಗಮನಿಸಬೇಕಾದ ಅಂಶಗಳು: ಕೃಷಿ ತಜ್ಞರು ಶಿಫಾರಸು ಮಾಡಿದ ಶಿಲೀಂದ್ರನಾಶಕವನ್ನು ನಿರ್ದಿಷ್ಟ ಪ್ರಮಾಣದಲ್ಲಿ ಉಪಯೋಗಿಸಿ ಬೀಜೋಪಚಾರ ಮಾಡಬೇಕು. ಬೀಜೋಪಚಾರ ಮಾಡಿದ ಬಿತ್ತನೆ ಬೀಜಗಳನ್ನು ಸುರಕ್ಷಿತ ಸ್ಥಳದಲ್ಲಿ ಇಡಬೇಕು. ಎರಡು ಮೂರು ಶಿಲೀಂದ್ರನಾಶಕಗಳನ್ನು ಒಟ್ಟಿಗೆ ಮಿಶ್ರಣ ಮಾಡಿ ಬೀಜೋಪಚಾರ ಮಾಡಬಾರದು. ಬಿತ್ತನೆ ಬೀಜಕ್ಕೆ ಬೀಜೋಪಚಾರ ಮಾಡುವ ಸಂಧರ್ಭದಲ್ಲಿ ಕೈಗಳಿಗೆ ಪ್ಲಾಸ್ಟಿಕ್ ಚೀಲ ಅಥವಾ ಗ್ಲೌಸ್‍ಗಳನ್ನು ಬಳಸಿ ಬೀಜೋಪಚಾರ ಮಾಡಬೇಕು.
ಅಝೋಸ್ಪೈರಿಲಂ: ಅಝೋಸ್ಪೈರಿಲಂ ಎನ್ನುವ ಏಕಾಣುಗಳು ಭತ್ತದ ಬೆಳೆಯ ಬೇರಿನ ಹೊರವಲಯದಲ್ಲಿ ಜೀವಿಸಿ, ಸಾರಜನಕ ಸ್ಥೀರಿಕರಣ ಮಾಡುತ್ತವೆ. ಅಝೋಸ್ಪೈರಿಲಂ ಜೀವಾಣು ಗೊಬ್ಬರ ಬಳಕೆಯಿಂದ ಬೆಳೆಗಳಿಗೆ ನೇರವಾಗಿ ಸಾರಜನಕ ಲಭ್ಯವಾಗುವುದರಿಂದ ಜೊತೆಗೆ ಈ ಏಕಾಣುಗಳು ಹಾರ್ಮೋನುಗಳನ್ನು ಉತ್ಪನ್ನಮಾಡಿ ಸಸ್ಯಗಳ ಬೆಳವಣಿಗೆಯನ್ನು ಹೆಚ್ಚಿಸುತ್ತವೆ. ಅಝೋಸ್ಪೈರಿಲಂನಿಂದ ಬೀಜೋಪಚಾರ ಮಾಡುವ ವಿಧಾನ 50 ಗ್ರಾಂ ಬೆಲ್ಲ ಅಥವಾ ಸಕ್ಕರೆಯನ್ನು ಅರ್ಧ ಲೀಟರ್ ನೀರಿನಲ್ಲಿ ಕರಗಿಸಿ 5 ನಿಮಿಷಗಳ ಕಾಲ ಕುದಿಸಿ ಅಂಟು ದ್ರಾವಣವನ್ನು ತಯಾರಿಸಬೇಕು. ತಣ್ಣಗಾದ ಬೆಲ್ಲ ಅಥವಾ ಸಕ್ಕರೆ ದ್ರಾವಣವನ್ನು 25 ಕೆ.ಜಿ ಬಿತ್ತನೆ ಬೀಜದ ಮೇಲೆ ಸಮನಾಗಿ ಲೇಪಿಸಿ ನಂತರ 400 ಗ್ರಾಂ ಅಝೋಸ್ಪೈರಿಲಂ ಎಂಬ ಜೈವಿಕ ಗೊಬ್ಬರದಿಂದ ಮಿಶ್ರಣ ಮಾಡಿ, ಅರ್ಧಗಂಟೆ ನೆರಳಿನಲ್ಲಿ ಒಣಗಿಸಿ ಸಸಿಮಡಿಗೆ ಉಪಯೋಗಿಸಬೇಕು.
ಈ ಸುದ್ದಿ ಓದಿದ್ದೀರಾ?: ಅಕ್ಕಿ ಪೂರೈಕೆ ನಿರಾಕರಣೆ: ಕರ್ನಾಟಕದ ಮಹತ್ವಾಕಾಂಕ್ಷಿ ಯೋಜನೆಗೆ ಕಲ್ಲು ಹಾಕಿದ ಕೇಂದ್ರ ಸರಕಾರ
ಅಝೋಸ್ಪೈರಿಲಂನ್ನು ನಾಟಿ ಮಾಡುವ ಪ್ರದೇಶದಲ್ಲಿ ಉಪಯೋಗ: 800 ಗ್ರಾಂ ಅಝೋಸ್ಪೈರಿಲಂ ಜೈವಿಕ ಗೊಬ್ಬರವನ್ನು ಪುಡಿಮಾಡಿದ 10 ಕೆ.ಜಿ ಕೊಟ್ಟಿಗೆ ಗೊಬ್ಬರ ಮತ್ತು 10 ಕೆ.ಜಿ. ಮಣ್ಣಿನೊಡೆನೆ ಮಿಶ್ರಣಗೊಳಿಸಿ ಗದ್ದೆಗೆ ನಾಟಿ ಮಾಡುವ ಸಮಯದಲ್ಲಿ ಎರಚಬೇಕು.
ಅಝೋಸ್ಪೈರಿಲಂನಿಂದ ಸಸಿಗಳ ಉಪಚಾರ: 6 ಅಡಿ ಉದ್ದ ಮತ್ತು ಅಗಲದ ಹೊಂಡವನ್ನು ಮಾಡಿ ಇದರಲ್ಲಿ ಮುಕ್ಕಾಲು ಅಡಿ ನೀರು ನಿಲ್ಲಿಸಿ ಅದರಲ್ಲಿ 400 ಗ್ರಾಂ ಅಝೋಸ್ಪೈರಿಲಂ ಜೈವಿಕ ಗೊಬ್ಬರವನ್ನು ಮಿಶ್ರಣಮಾಡಿ ಸಸಿ ಮಡಿಯಿಂದ ಕಿತ್ತ ಸಸಿಗಳ ಬೇರುಗಳನ್ನು 10 ರಿಂದ 15 ನಿಮಿಷಗಳ ಕಾಲ ಅದ್ದಿ ನಂತರ ನಾಟಿ ಮಾಡುವುದು.
ಈ ರೀತಿಯಾಗಿ ಮಾಡುವುದರಿಂದ ಬೀಜಗಳಿಂದ ಪ್ರಸಾರವಾಗುವ ಅನೇಕ ರೋಗಗಳನ್ನು ಅತಿ ಸುಲಭವಾಗಿ ಹಾಗೂ ಕಡಿಮೆ ಖರ್ಚಿನಲ್ಲಿ ಹತೋಟಿ ಮಾಡಬಹುದಲ್ಲದೆ, ರೋಗರಹಿತ ಬೆಳೆಯಿಂದ ಅಧಿಕ ಇಳುವರಿಯನ್ನು ಪಡೆಯಬಹುದು.
ಹೆಚ್ಚಿನ ಮಾಹಿತಿಗೆ ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥರು ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು, ಕೊಡಗು ಜಿಲ್ಲೆ ಇವರನ್ನು ಸಂಪರ್ಕಿಸಬಹುದು.