ಸ್ನೇಹಿತರಿಬ್ಬರ ಜಗಳ ವಿಕೋಪಕ್ಕೆ ತಿರುಗಿದ ಪರಿಣಾಮ 12ವರ್ಷದ ಬಾಲಕನೊಬ್ಬ 15 ವರ್ಷದ ಬಾಲಕನಿಗೆ ಚಾಕು ಇರಿದು ಹತ್ಯೆ ಮಾಡಿರುವ ಘಟನೆ ಮೇ 12ರ ಸೋಮವಾರ ಸಂಜೆ ಹುಬ್ಬಳ್ಳಿಯ ಮೂರು ಸಾವಿರ ಮಠದ ಹತ್ತಿರ ನಡೆದಿದೆ.
ಹುಬ್ಬಳ್ಳಿ ಪಟ್ಟಣದ ಗುರುಸಿದ್ದೇಶ್ವರ ನಗರದಲ್ಲಿ ಘಟನೆ ನಡೆದದ್ದು, 6ನೇ ತರಗತಿಯಲ್ಲಿ ಓದುವ ಬಾಲಕ ಮತ್ತು ಹತ್ಯೆಯಾದ 9ನೇ ತರಗತಿಯ ಬಾಲಕನ ನಡುವೆ ಮೇ.12 ಸಂಜೆ 6 ಗಂಟೆ ಸುಮಾರಿಗೆ ಜಗಳವಾಗಿದೆ. ಇಬ್ಬರ ಜಗಳ ವಿಕೋಪಕ್ಕೆ ತಿರುಗಿ ಚೇತನ್‌ಗೆ ಚಾಕು ಇರಿದಿದ್ದಾನೆ ಎಂದು ತಿಳಿದು ಬಂದಿದೆ.
ಈ ಕುರಿತು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಸುದ್ಧಿಗಾರರೊಂದಿಗೆ ಮಾತನಾಡಿ, “ಬಾಲಕರಿಬ್ಬರ ನಡುವಿನ ಜಗಳದಿಂದ ಓರ್ವ ಬಾಲಕ ಮನೆಗೆ ಹೋಗಿ ಚಾಕು ತಂದು ಇನ್ನೊಬ್ಬನಿಗೆ ಇರಿದಿದ್ದಾನೆ. ನಂತರ ಚಾಕು ಇರಿದ ಬಾಲಕನ ತಾಯಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಕಿಮ್ಸ್ ಆಸ್ಪತ್ರೆಗೆ ಕರೆತಂದಿದ್ದಾರೆ. ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ” ಎಂದು ತಿಳಿಸಿದರು.
“ನನ್ನ ಜೀವನದಲ್ಲೇ ಇಂತಹ ಘಟನೆ ನೋಡಿಲ್ಲ. ಆರನೇ ತರಗತಿ ಬಾಲಕ ಕೊಲೆ ಮಾಡುವಂತಹ ಮನಸ್ಥಿತಿ ಬಂದಿದೆ. ಆತ ನಮ್ಮ ಸೊಂಟದೆತ್ತರಕ್ಕೂ ಇಲ್ಲ” ಎಂದು ದಿಗ್ಧಮೆ ವ್ಯಕ್ತಪಡಿಸಿದ ಪೊಲೀಸ್ ಕಮಿಷನರ್, “ಪೋಷಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಮೃತ ಬಾಲಕ 8ನೇ ತರಗತಿ ಪಾಸ್ ಆಗಿದ್ದಾನೆ. ಒಬ್ಬನೇ ಮಗ. ತಂದೆ-ತಾಯಿ ರೊಟ್ಟಿ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಗಾಯದ ತೀವ್ರತೆ ಅಂದಾಜಿಲ್ಲ. ಇದು ಹೃದಯ ವಿದ್ರಾವಕ ಘಟನೆ. ಕೊಲೆ ಮಾಡಿದ ಬಾಲಕನ ಕುಟುಂಬವೂ ಬಡತನದ್ದಾಗಿದೆ. ಕಾರ್ಯವಿಧಾನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಬೀದಿ ನಾಯಿಗಳ ದಾಳಿಗೆ ಮಹಿಳೆ ಬಳಿ
ಈ ಘಟನೆಯು ಕಮರಿಪೇಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ನಿಷ್ಕ್ರಿಯವಾದ ಕಾನೂನು ಪಾಲನೆ, ಹದಗೆಟ್ಟ ನಾಗರೀಕತೆ, ಪರಿಸರದ ಮೇಲೆರಗಿರುವ ವಿಕೃತಿಯೆ ಕಾರಣ!?