ಸಚಿವ ಪ್ರಲ್ಹಾದ್ ಜೋಶಿ ಈಗ ಎಲ್ಲಿದ್ದಾರೆಂದು ಪತ್ತೆ ಹಚ್ಚಿ, ಮಹದಾಯಿ ನೀರಿನ ಸಲುವಾಗಿ ಅವರೊಂದಿಗೆ ನೇರವಾಗಿ ಮಾತನಾಡಬೇಕಿದೆ. ನೀರಿನ ವಿಚಾರದಲ್ಲಿ ಕೇಂದ್ರ ಸಚಿವರು ಕಾಣೆಯಾಗುತ್ತಾರೆ ಎಂದು ಭಾರತ್ ಏಕತಾ ಮಿಷನ್ ಸಂಘಟನೆಯ ವಿಜಯಕುಮಾರ ಗುಂಜಾಳ ಟೀಕಿಸಿದರು.
ಮಹದಾಯಿ ನೀರಿನ ಸಮಸ್ಯೆ ವಿಳಂಬ ನೀತಿ ಖಂಡಿಸಿ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಧರಣಿ ಸ್ಥಳದಲ್ಲಿ ಮಾತನಾಡಿದರು. ಇದೇ ವೇಳೆ ಪ್ರತಿಭಟನಾಕಾರರು ಕಾಲಿಕೊಡ ಹಿಡದು ಕೇಂದ್ರ ಸರ್ಕಾರ ಮತ್ತು ಕೇಂದ್ರ ಸಚಿವರ ವಿರುದ್ಧ ಘೋಷಣೆ ಕೂಗಿದರು.
“ಬಹಳ ವರ್ಷಗಳಿಂದ ಮಹದಾಯಿ ಹೋರಾಟವನ್ನು ನೋಡುತ್ತದ್ದೇವೆ. ಜನರು ತಕ್ಕಪಾಠ ಕಲಿಸಬೇಕಿದೆ. ಇಂತಹ ವಿಷಯದಲ್ಲಿ ಯಾವುದೇ ತಾರತಮ್ಯವಿಲ್ಲ. ಹೀಗಾಗಿ ಎಲ್ಲರೂ ಒಂದಾಗಿ ಹೋರಾಡೋಣ. ಮತ್ತು ಕಾಣೆಯಾಗಿರುವ ಜೋಶಿಯವರನ್ನು ಹುಡುಕಿ ತರುವ ಕೆಲಸ ಮಾಡೋಣ. ರೈತರು ಉದ್ಧಾರವಾದರೆ; ನಾವೆಲ್ಲ ಉದ್ದಾರವಾಗುತ್ತೇವೆ” ಎಂದರು.
ಈ ವೇಳೆ ಬಾಬಾಜಾನ ಮುಧೋಳ ಮಾತನಾಡಿ, “ಕಳೆದ ಹತ್ತು ವರ್ಷಗಳಿಂದ ನಿರಂತರ ರೈತರು, ಕಾರ್ಮಿಕರು, ದಲಿತಪರ, ಕನ್ನಡಪರ ಹೀಗೆ ವಿವಿಧ ಸಂಘಟನೆಗಳು ಸೇರಿಕೊಂಡು ಹುಬ್ಬಳ್ಳಿ ಧಾರವಾಡದ ಭಾಗಕ್ಕೆ ನೀರು ಬೇಕು ಎಂದು ಧ್ವನಿ ಮಾಡುತ್ತಾ ಬಂದಿದ್ದಾರೆ. ಇದು ಕೇವಲ ರೈತರಿಗೆ ಮಾತ್ರ ಸಿಮೀತವಾಗಿಲ್ಲ. ಕಳಸಾ ಬಂಡೂರಿ ಹೋರಾಟವು ಐತಿಹಾಸಿಕ ಹೋರಾಟವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ನಾಲ್ಕು ಜಿಲ್ಲೆಗಳಲ್ಲಿ ನಾಲ್ಕು ಸಂಸದೀಯ ಸದಸ್ಯರಿದ್ದಾರೆ. ಕೇಂದ್ರಕ್ಕೆ ಅತೀ ಆಪ್ತರಾದ ಪ್ರಲ್ಹಾದ್ ಜೋಶಿಯವರು ನೀರಿಗಾಗಿ ದ್ವನಿಯೆತ್ತಬಹುದಿತ್ತು. ಪ್ರಧಾನಿ ಮೋದಿ ಮನಸ್ಸು ಮಾಡಿದರೆ; ನೀರಿನ ಸಮಸ್ಯೆ ಕೂಡಲೇ ಬಗೆಹರಿಯುತ್ತದೆ. ಕುಡಿಯುವ ನೀರಿನ ವಿಚಾರದಲ್ಲಿ ವಿಳಂಬ ಮತ್ತು ಮಲತಾಯಿ ಧೋರಣೆ ಆಗುತ್ತಿದೆ” ಎಂದು ದೂರಿದರು.

ಬಳ್ಳಾರಿಯ ಯ್ಯೂಸೂಫ್‌ಖಾನ್ ಮಾತಮಾಡಿ, “ಮಹದಾಯಿ ಹೋರಾಟವು ನಾಲ್ಕು ದಶಕಗಳಿಂದ ಮುಂದುವರೆದಿದೆ. ನಮ್ಮ ನೀರು ನಮ್ಮ ಹಕ್ಕು. ಆದ್ದರಿಂದ ನಮಗೆ ನೀರು ಬೇಕು. ನಮಗೆ ನೀರು ಕೊಡಿಸುವ ತನಕ ಮುಷ್ಕರ ಮುಂದುವರೆಯುತ್ತದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ಅಭಿವೃದ್ದಿ ಕಾರ್ಯದಲ್ಲಿ ವಿಫಲವಾಗಿದ್ದಾರೆ. ಕೇವಲ ಜಾತಿ ಹೆಸರಿನಲ್ಲಿ ರಾಜಕಾರಣ ಮಾಡುವುದನ್ನು ಬಿಡಬೇಕು. ರಾಜಕಾರಣಿಗಳಿಗೆ ಬುದ್ದಿ ಕಲಿಸಲು ಇವರನ್ನು ಮೊದಲು ಬಹಿಷ್ಕಾರ ಹಾಕಬೇಕಿದೆ. ಮಹದಾಯಿ ನೀರಿಗಾಗಿ ನಡೆದ ಧರಣಿಗೆ ಎಲ್ಲರೂ ಕೈಜೋಡಿಸಬೇಕು” ಎಂದು ವಿನಂತಿಸಿದರು.
ಇದನ್ನೂ ಓದಿ: ಹುಬ್ಬಳ್ಳಿ | ಕಸ ವಿಲೇವಾರಿ ವಾಹನ ಹರಿದು 6 ವರ್ಷದ ಬಾಲಕಿ ಸಾವು
ನಾಗಪ್ಪ ಮಾತನಾಡಿ, “ರಾಜ್ಯ ಮತ್ತು ಕೇಂದ್ರ ಸರ್ಕಾದಗಳು ಒಬ್ಬರ ಮೇಲೊಬ್ಬರು ಹಾಕುತ್ತಿದ್ದಾರೆ. ಕುಡಿಯುವ ನೀರಿನ ವಿಷಯದಲ್ಲಿ ರಾಜಕೀಯ ಮಾಡುವ ಹಲಾಲ್‌ಕೋರ ಸರ್ಕಾರಗಳನ್ನು ಕಿತ್ತೊಗೆಯಬೇಕು. ಮಹದಾಯಿ ನೀರು ಕೇವಲ ರೈತರಿಗಾಗಿ ಅಷ್ಟೇ ಅಲ್ಲ. ಹುಬ್ಬಳ್ಳಿ ಧಾರವಾಡ ಜನತೆಗೆ ಅನುಕೂಲವಾಗುತ್ತದೆ. ಜಾತಿ ಮತ ಮರೆತು ಎಲ್ಲರೂ ಒಂದಾಗಿ ಕುಡಿಯುವ ನೀರಿಗಾಗಿ ಎರಡೂ ಸರ್ಕಾರಗಳಿಗೂ ಒತ್ತಾಯಿಸಬೇಕು. ಮಹದಾಯಿ ಹೋರಾಟ ಸ್ಥಗಿತಗೊಂಡರೆ ರಾಜಕೀಯ ಮಾಡಲು ಕಾರಣವಿಲ್ಲ ಎಂಬ ಕಾರಣಕ್ಕೆ ಇದರಲ್ಲಿ ರಾಜಕಾರಣ ಮಾಡುತ್ತಿದ್ದಾರೆ” ಎಂದರು.
ಧರಣಿಯಲ್ಲಿ ದಲಿತಪರ ಹೋರಾಟಗಾರ್ತಿ ಶೋಭಕ್ಕ, ಗಂಧಾದರ ಪೆರೂರ, ಸಿದ್ದಣ್ಣ ತೇಜಿ, ಪೀರಸಾಬ ನದಾಫ್, ಫಾತೀಮಾ ತಡಕೋಡ, ಮಕಾನಂದಾರ, ಬೀರಪ್ಪ ಕಡ್ಡಿ, ಶಂಕ್ರಣ್ಣ ಕೋಟಿ, ನಾಗಪ್ಪ ಉಂಡಿ, ರವಿರಾಜ ಕಂಬಳಿ, ಹರೀಶ್ ಗುಂಟ್ರಾಳ, ಶಮೀಮ್ ಮುಲ್ಲಾ, ಮಹಿಳೆಯರು ಹಾಗೂ ಹಲವು ರೈತರು ಇದ್ದರು.