ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೃಹತ್ ಪ್ರತಿಭಟನಾ ಸಮಾವೇಶದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಪ್ರತಿರೋಧ ತೋರಲಿದ್ದೇವೆ ಎಂದು ಮಾಜಿ ಮೇಯರ್ ಹಾಗೂ ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಅಯೂಬ್ ಖಾನ್ ತಿಳಿಸಿದರು.
ಮೈಸೂರು ನಗರದ ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, “ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಎನ್‌ಡಿಎ ಸರ್ಕಾರ ವ್ಯವಸ್ಥಿತವಾಗಿ ಒಂದು ಸಮುದಾಯವನ್ನು ಗುರಿಯಾಗಿಸಿ ವಕ್ಫ್ ತಿದ್ದುಪಡಿ ಕಾಯ್ದೆ ತಂದಿದೆ. ರಾಜಕೀಯ ಪ್ರೇರಿತವಾಗಿದ್ದು, ದೇಶದಲ್ಲಿ ಅಧಿಕಾರ ಹಿಡಿಯಲು ಹಿಂದೂ ಮತಗಳನ್ನು ಗಟ್ಟಿಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಹುನ್ನಾರ ನಡೆಸಿದೆ. ದೇಶದಲ್ಲಿ ಮುಸ್ಲೀಮರ ಆಸ್ತಿಗಳನ್ನು ಕಸಿದುಕೊಳ್ಳುವ ಪ್ರಯತ್ನ, ಧಾರ್ಮಿಕವಾಗಿ ಭಾವನಾತ್ಮಕ ಸಂಬಂಧಗಳನ್ನು ಬೇರ್ಪಡಿಸಿ ರಾಜಕೀಯ ಲಾಭ ಮಾಡಲು ಹೊರಟಿದೆ” ಎಂದು ಆರೋಪಿಸಿದರು.
“ಸುಪ್ರೀಂ ಕೋರ್ಟ್ ತೀರ್ಪಿನ ಮೇಲೆ ವಿಶ್ವಾಸ, ನಂಬಿಕೆ, ಗೌರವವಿರುವುದರಿಂದ ನಮ್ಮ ನೋವನ್ನು, ಅಳಲನ್ನು ಸಾಮೂಹಿಕವಾಗಿ, ಬಹಿರಂಗವಾಗಿ ಕೇಂದ್ರ ಸರ್ಕಾರ, ಘನ ನ್ಯಾಯಾಲಯಕ್ಕೆ ಶಾಂತಿಯುತವಾಗಿ ಅವಗಾಹಿಸಲಿದ್ದೇವೆ. ಹಾಗಾಗಿ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್‌ನಿಂದ ಮೇ 03 ರಂದು ಮಧ್ಯಾಹ್ನ 3ಕ್ಕೆ ತಿಲಕ್ ನಗರದ ಈದ್ಗಾ ಮೈದಾನದಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ” ಎಂದರು.
ಮಾಜಿ ಪೊಲೀಸ್ ಅಧಿಕಾರಿ ಸುಹೆಲ್ ಅಹಮದ್ ಮಾತನಾಡಿ, “ದೇಶದಲ್ಲಿ ರಾಜಕೀಯಕ್ಕಾಗಿ, ರಾಜಕೀಯ ಲಾಭಕ್ಕಾಗಿ ಧರ್ಮ ಬಳಸಿಕೊಂಡು ವ್ಯವಸ್ಥಿತವಾಗಿ ಅಧಿಕಾರದಲ್ಲಿರುವ ಸಂಚು ನಡೆದಿದ್ದು, ಅದರ ಆರಂಭಿಕವಾಗಿ ವಕ್ಫ್ ಹೆಸರಿನಲ್ಲಿ ತಿದ್ದುಪಡಿ ಕಾಯ್ದೆ ತರುವ ಮೂಲಕ ಒಂದು ಸಮುದಾಯವದವರ ವಿರುದ್ಧ ಹೆಜ್ಜೆ ಇಟ್ಟಿದ್ದಾರೆ. ಇದು ಸಂವಿಧಾನ ಬಾಹಿರವಾಗಿದ್ದು, ಯಾವುದೇ ಕಾರಣಕ್ಕೂ ಒಪ್ಪತಕ್ಕದ್ದಲ್ಲ. ವಕ್ಫ್ ಕಮಿಟಿಯಲ್ಲಿ ಮುಸ್ಲೀಮೇತರ ಸದಸ್ಯರ ನೇಮಕ ಮಾಡುವ ತೀರ್ಮಾನ ಮಾಡುವುದಾದರೆ ಅದೇ ಹಿಂದೂ ಧಾರ್ಮಿಕ ಕೇಂದ್ರಗಳು, ಪ್ರಾಧಿಕಾರ, ಮಠ, ಮಾನ್ಯಗಳಲ್ಲೂ ಮುಸ್ಲೀಮ್ ಹಾಗೂ ಕ್ರಿಶ್ಚಿಯನ್ ಸಮುದಾಯದವರನ್ನು ನೇಮಿಸಬಹುದಿತ್ತು. ಅದನ್ನೆಲ್ಲ ಮಾಡದೆ ಎಲ್ಲದರಲ್ಲೂ ಲಾಭ ಹುಡುಕುವುದು, ಮತಕ್ಕಾಗಿ ಕೀಳು ಮಟ್ಟದ ರಾಜಕಾರಣ ಮಾಡುವುದು ಸರಿಯಲ್ಲ” ಎಂದರು.

ಅಹಿಂದ ಸಂಘಟನೆ ಮುಖಂಡ ಕೆ ಶಿವರಾಮು ಮಾತನಾಡಿ, “ನಾಳೆಯ ಬೃಹತ್ ಸಮಾವೇಶಕ್ಕೆ ಪ್ರಗತಿಪರ ಸಂಘಟನೆಗಳು ಬೆಂಬಲ ನೀಡುತ್ತಿದ್ದು, ನಾವೆಲ್ಲರೂ ಭಾಗಿಯಾಗಲಿದ್ದೇವೆ. ಮುಸ್ಲಿಂ ಸಮುದಾಯಕ್ಕಷ್ಟೇ ಅಲ್ಲದೆ ಇದು ಎಲ್ಲರಿಗೂ ಆಗಿರುವ ತೊಂದರೆಯೇ. ಕೇಂದ್ರ ಸರ್ಕಾರ ತನ್ನ ಇಬ್ಬಂದಿತನದಿಂದ ಆಗಾಗ ಇಂತಹ ಪ್ರಯತ್ನ ಮಾಡುತ್ತಿರುತ್ತದೆ. ಅದರಲ್ಲೂ ದಲಿತರು, ಮುಸ್ಲೀಮರು, ಕ್ರಿಶ್ಚಿಯನ್ನರ ಮೇಲೆ ನಿರಂತರವಾಗಿ ಪ್ರಹಾರ ನಡೆಸುತ್ತಿದ್ದು, ಹಿಂದೂ ಪರ ಅನ್ನುವುದನ್ನೇ ದಾಳ ಮಾಡಿಕೊಂಡು ರಾಜಕೀಯ ಮಾಡ ಹೊರಟಿದೆ. ಬಹು ಸಂಖ್ಯಾತ ವರ್ಗಗಳಿಗೆ ಅಪಮಾನ ಮಾಡುತ್ತಾ ಇಂತಹ ಕೆಳಮಟ್ಟದ ಕೆಲಸಕ್ಕೆ ಕೈ ಹಾಕುತಿದ್ದು ನಾಳೆ ಸಮಾವೇಶದ ಮೂಲಕ ಪ್ರತಿರೋಧ ತೋರಲಿದ್ದೇವೆ ” ಎಂದರು.
ಎಸ್‌ಡಿಪಿಐ ಜಿಲ್ಲಾಧ್ಯಕ್ಷ ರಫತುಲ್ಲಾ ಖಾನ್ ಮಾತನಾಡಿ, “ವಕ್ಫ್ ಧಾರ್ಮಿಕ ಸಂಸ್ಥೆಯಾಗಿದ್ದು, ಈಗ ಅದನ್ನು ಕಿತ್ತುಕೊಳ್ಳುವ, ಕಡಿವಾಣ ಹಾಕುವ ಕೆಲಸಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ನಮ್ಮಲ್ಲೇ ಸಾಕಷ್ಟು ಭೂಮಿ ಇರುವಾಗ ಮತ್ತೊಬ್ಬರ ಭೂಮಿಗೆ ನಾವ್ಯಾಕೆ ಆಸೆ ಮಾಡಬೇಕು? ಅಲ್ಲದೆ, ಮುಸ್ಲಿಂ ಸಮುದಾಯದ ಆಸ್ತಿಯ ಮೇಲೆ ಕಣ್ಣು ಹಾಕಿ ಅದನ್ನ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಇರಾದೆ ಬಿಜೆಪಿ ಸರ್ಕಾರದ್ದು. ಅದೇ ಸರ್ಕಾರ ಮುಸ್ಲಿಮರ ಏಳಿಗೆಗೆ, ಅಭಿವೃದ್ಧಿಗೆ ಪೂರಕವಾದ ಕೆಲಸ ಮಾಡುವಲ್ಲಿ ವಿಫಲವಾಗಿದೆ. ಎಲ್ಲದರಲ್ಲೂ ರಾಜಕೀಯ ಮಾಡುವುದು, ಲಾಭ ಪಡೆಯುವುದಷ್ಟೇ ವೃತ್ತಿಯನ್ನಾಗಿಸಿಕೊಂಡಿದೆ” ಎಂದು ಆರೋಪಿಸಿದರು.

ಧರ್ಮ ಗುರುಗಳಾದ ಮೌಲಾನ ಮುಫ್ತಿ ತಾಜುದ್ದಿನ್ ಮಾತನಾಡಿ, “ನಾಳೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಿದ್ದೇವೆ. ವಕ್ಫ್ ಆಸ್ತಿ ಮುಸ್ಲಿಮರಲ್ಲಿ ಬಡವರ ಅಭ್ಯುದಯಕ್ಕೆ ಇರುವಂತದ್ದು. ಆದರೆ, ಬಿಜೆಪಿ ಸರ್ಕಾರ ಮುಸ್ಲಿಂ ಸಮುದಾಯದ ಎಲ್ಲ ಆಸ್ತಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಕುಗ್ಗಿಸುವ ಸಂಚು ನಡೆಸಿದೆ. ಇದು ಸರಿಯಾದ ಕ್ರಮವಲ್ಲ. ಇಂತಹದನ್ನು ಸಾಮೂಹಿಕವಾಗಿ ದೇಶಾದ್ಯಂತ ಖಂಡಿಸಲಿದ್ದೇವೆ” ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ವಖ್ಫ್ ತಿದ್ದುಪಡಿ ಕಾನೂನು ವಿರೋಧಿಸಿ ಮೇ. 3 ರಂದು ಬೃಹತ್ ಪ್ರತಿಭಟನೆ
ಪತ್ರಿಕಾಗೋಷ್ಠಿಯಲ್ಲಿ ಮೌಲಾನ ಮೊಹಮ್ಮದ್ ಜಾಕಾವುಲ್ಲಾ, ಮೌಲಾನ ಅಯೂಬ್ ಅನ್ಸಾರಿ, ಜಮಾಆತೆ ಇಸ್ಲಾಮಿ ಹಿಂದ್ ಮುಖಂಡ ಅಸಾದುಲ್ಲಾ ಸೇರಿದಂತೆ ಇತರರು ಇದ್ದರು.