- ಹೋರಾಟಕ್ಕೆ ಸಂದ ಜಯ ಎಂದ ನೈಜ ಹೋರಾಟಗಾರರ ವೇದಿಕೆಯ ಹೆಚ್ ಎಂ ವೆಂಕಟೇಶ್
- ನ್ಯಾಯಮೂರ್ತಿ ಎಲ್ ನಾರಾಯಣಸ್ವಾಮಿಯವರ ನೇತೃತ್ವದ ನಿಯೋಗ ಬಾಳುಗೋಡಿಗೆ ಭೇಟಿ
ಕುಡಿಯುವ ನೀರಿನ ಸಮಸ್ಯೆಯನ್ನು ಅನುಭವಿಸುತ್ತಿದ್ದ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಾಳುಗೋಡಿಗೆ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಎಲ್ ನಾರಾಯಣಸ್ವಾಮಿ ಭೇಟಿ ನೀಡಿ ಆದಿವಾಸಿ ಗಿರಿಜನರ ಸಮಸ್ಯೆಗಳನ್ನು ಆಲಿಸಿದರು.
ಈ ಬಗ್ಗೆ ಆಯೋಗಕ್ಕೆ ಮನವಿ ಸಲ್ಲಿಸಿದ್ದ ನೈಜ್ಯ ಹೋರಾಟಗಾರರ ವೇದಿಕೆ ತಂಡವು ಬಾಳುಗೋಡಿನಲ್ಲಿ ವಾಸಿಸುವ ಆದಿವಾಸಿಗಳ ಗೋಳನ್ನು ವಿವರಿಸಿ ತಕ್ಷಣ ಸ್ಥಳಕ್ಕೆ ಬಂದು ಪರಿಹಾರವನ್ನು ಕಂಡುಕೊಳ್ಳುವಂತೆ ಈ ಹಿಂದೆ ಮನವಿ ಸಲ್ಲಿಸಿದ್ದರು.
ನೈಜ ಹೋರಾಟಗಾರರ ವೇದಿಕೆಯ ದೂರನ್ನು ಹೊತ್ತುಕೊಂಡು ಬಾಳುಗೋಡಿನ ಆದಿವಾಸಿ ಗಿರಿಜನರ ಹಾಡಿಗೆ ಭೇಟಿ ನೀಡಿದ ಆಯೋಗದ ಅಧ್ಯಕ್ಷರು, ಅಲ್ಲಿಯ ಜನರ ಜೀವನವನ್ನು ಕಣ್ಣಾರೆ ನೋಡಿ ಬೇಸರಿಸಿದರು.
ಜಿಲ್ಲಾಡಳಿತದ ಅಧಿಕಾರಿಗಳೆಲ್ಲರನ್ನು ಸ್ಥಳದಲ್ಲಿಯೇ ಕರೆಸಿದ ಆಯೋಗವು, ಜನರಿಗೆ ಸರ್ಕಾರವು ಒದಗಿಸಬೇಕಾದ ಮೂಲಭೂತ ಸೌಕರ್ಯದ ಬಗ್ಗೆ ತಕ್ಷಣ ಕಾರ್ಯಪ್ರವರ್ತರಾಗುವಂತೆ ಮೌಖಿಕವಾಗಿ ಆದೇಶ ನೀಡಿ, 20 ದಿನಗಳ ಒಳಗಾಗಿ ಬಡಾವಣೆಯ ನಕ್ಷೆಯನ್ನು ಮಂಜೂರು ಮಾಡಿಕೊಳ್ಳಬೇಕು ಮತ್ತು ಇವರಿಗೆ ಹಕ್ಕುಪತ್ರಗಳನ್ನು ನೀಡಬೇಕು. ಶೌಚಾಲಯಗಳನ್ನು ತಕ್ಷಣ ನಿರ್ಮಾಣ ಮಾಡಬೇಕು. ಮತ್ತು ಇಲ್ಲಿನ ನಿವಾಸಿಗಳಿಗೆ ವಿದ್ಯುತ್ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು.
ಕುಡಿಯುವ ನೀರಿಗಾಗಿ ಬೋರ್ವೆಲ್ ಅನ್ನು ತಕ್ಷಣ ಕೊರೆಸಿ ನೀರನ್ನು ಒದಗಿಸುವಂತೆ ತಿಳಿಸಿದರ. ಒಂದು ವಾರದೊಳಗೆ ಬೋರ್‌ವೆಲ್ ಅನ್ನು ಕೊರೆಸಿ ಶಾಶ್ವತ ನೀರನ್ನು ಒದಗಿಸುವಂತೆ ಹಾಗೂ ತಾತ್ಕಾಲಿಕವಾಗಿ ಟ್ಯಾಂಕರ್‌ನಲ್ಲಿ ನೀರನ್ನು ಸರಬರಾಜು ಮಾಡುವಂತೆ ತಿಳಿಸಿದರು.
ಆಯೋಗದ ಸೂಚನೆಯ ಮೇರೆ ನಿನ್ನೆಯಿಂದ(ಫೆ.1) ಅಧಿಕಾರಿಗಳು ವಾಟರ್ ಟ್ಯಾಂಕಿನ ಮೂಲಕ ಹಾಡಿ ಜನರಿಗೆ ನೀರನ್ನು ಒದಗಿಸಲು ಪ್ರಾರಂಭಿಸಿದ್ದಾರೆ. ಬೋರ್ವೆಲ್ ಮಿಷನ್ ಕೂಡ ತರಿಸಿ ಬೋರ್ವೆಲ್ ಅನ್ನು ಕೊರೆಸುತ್ತಿರುವುದು ನೈಜ್ಯ ಹೋರಾಟಗಾರರ ವೇದಿಕೆಯ ಮುಖಂಡರ ಹೋರಾಟಕ್ಕೆ ಸಂದ ಜಯವೆಂದು ಬಾಳುಗೋಡಿನ ಆದಿವಾಸಿ ಜನರು ಸಂತಸ ವ್ಯಕ್ತಪಡಿಸಿದರು.
ಆಯೋಗದ ಭೇಟಿಯ ವೇಳೆ ಸದಸ್ಯ ಕಾರ್ಯದರ್ಶಿ ಶಾಮ್ ಭಟ್ ಮತ್ತು ಸದಸ್ಯರಾದ ಒಂಟಿಗೋಡು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಹಾಜರಿದ್ದರು.
ಯಾವುದೇ ಮೂಲಭೂತ ಸೌಕರ್ಯವಿಲ್ಲದೆ ಬದುಕುತ್ತಿರುವ ಬಾಳುಗೋಡಿನ ಆದಿವಾಸಿ ಜನರ ಸಮಸ್ಯೆಯ ಬಗ್ಗೆ ಕೊಡಗು ಜಿಲ್ಲಾಡಳಿತಕ್ಕೆ ಪತ್ರಗಳ ಮೂಲಕ ನೈಜ ಹೋರಾಟಗಾರ ವೇದಿಕೆಯು ಮನವಿ ಮಾಡಿತ್ತು. ಆದರೆ, ಇದಕ್ಕೆ ಯಾವುದೇ ರೀತಿಯ ಸಕಾರಾತ್ಮಕ ಸ್ಪಂದನೆ ನೀಡದ ಜಿಲ್ಲಾಡಳಿತದ ವಿರುದ್ಧವೇ ಮಾನವ ಹಕ್ಕುಗಳ ಆಯೋಗಕ್ಕೆ ಹಿರಿಯ ಸಾಮಾಜಿಕ ಹೋರಾಟಗಾರ ಹೆಚ್ಎಂ ವೆಂಕಟೇಶ್ ಮತ್ತು ವೇದಿಕೆಯ ನಿಯೋಗವು ದೂರು ನೀಡಿತ್ತು.
ಈ ದೂರಿನ ಆಧಾರದ ಮೇರೆಗೆ ಆಯೋಗವು ಬಾಳುಗೋಡಿನ ಆದಿವಾಸಿ ಜನರು ವಾಸಿಸುವ ಸ್ಥಳಕ್ಕೆ ಬಂದು ಪರಿಶೀಲಿಸಿತು.
ನೈಜ ಹೋರಾಟಗಾರರ ವೇದಿಕೆಯ ಸದಸ್ಯರಾದ ಕುಣಿಗಲ್ ನರಸಿಂಹಮೂರ್ತಿ, ನಾಗರಾಜ್, ತುಮಕೂರಿನ ರಾಜು, ಮಲ್ಲಿಕಾರ್ಜುನಯ್ಯ, ನಾಗಸೂರ್ಯ, ಕೊಳ್ಳೇಗಾಲ ಅಪ್ಪಾಜಿ, ಮೈಸೂರಿನ ನಂಜರಾಜ್ ಅರಸ್, ಹಾಗೂ ಹಂದ್ರಾಳ್ ನಾಗಭೂಷಣ್ ಕೂಡ ಸ್ಥಳದಲ್ಲಿ ಹಾಜರಿದ್ದು, ಅಲ್ಲಿಯ ಜನರ ಬವಣೆಯನ್ನು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಿಗೆ ಮನವರಿಕೆ ಮಾಡಿಕೊಟ್ಟರು.
“ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಮತ್ತು ಜಿಲ್ಲಾ ಆಡಳಿತವು ವಾಟರ್ ಟ್ಯಾಂಕ್ ಮೂಲಕ ನೀರನ್ನು ಸರಬರಾಜು ಮಾಡಿದ್ದು ಬೋರ್‌ವೆಲ್‌ಗಳನ್ನು ತಕ್ಷಣ ಕೊರೆಸುತ್ತಿರುವುದು ಅಲ್ಲಿ ವಾಸಿಸುತ್ತಿರುವ ಆದಿವಾಸಿ ಜನರ ಮುಖದಲ್ಲಿ ಸಂತಸವನ್ನು ಮೂಡಿಸಿದೆ” ಎಂದು ನೈಜ ಹೋರಾಟಗಾರರ ವೇದಿಕೆಯ ಹೆಚ್ ಎಂ ವೆಂಕಟೇಶ್ ತಿಳಿಸಿದ್ದಾರೆ.
ಕುಡಿಯುವ ನೀರು ಕಲ್ಪಿಸಲು ಹೋರಾಟ ನಡೆಸಿದ್ದಕ್ಕೆ ನೈಜ ಹೋರಾಟಗಾರರ ವೇದಿಕೆಯ ತಂಡಕ್ಕೆ ಮತ್ತು ಮಾನವ ಹಕ್ಕುಗಳ ಆಯೋಗಕ್ಕೆ ಬಾಳುಗೋಡಿನ ನಿವಾಸಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.