ಸರ್ಕಾರಿ ಕಾಲೇಜಿನ ಪ್ರಾಂಶುಪಾಲರೊಬ್ಬರು ಕಾಲೇಜು ಕಟ್ಟಡದೊಳಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದದಲ್ಲಿ ನಡೆದಿದೆ.
ನಾಗರಾಜ ಮುದಗಲ್ (55) ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ. ಇವರು ಹುನಗುಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಆತ್ಮಹತ್ಯೆಗೆ ನಿಖರವಾದ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಆಗಸ್ಟ್ 22ರ ಬೆಳಿಗ್ಗೆ 6 ಗಂಟೆಗೆ ಕಾಲೇಜ್ ಕ್ಯಾಂಟಿನ್ ಸ್ಟೇರ್ ಕೇಸ್ ಗ್ರಿಲ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳವಾರ ಸರ್ಕಾರಿ ಕಾಲೇಜಿನಲ್ಲಿ ಜಾನಪದ ಜಾತ್ರೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದ ಸಿದ್ಧತೆಯ ಹಿನ್ನೆಲೆ ಪ್ರಾಂಶುಪಾಲರು ಸೋಮವಾರ ರಾತ್ರಿ ಕಾಲೇಜಿನಲ್ಲಿಯೇ ತಂಗಿದ್ದರು. ಮಂಗಳವಾರ ಬೆಳಗಿನ ಜಾವ ಕೊಠಡಿಯಿಂದ ಹೊರಗಡೆ ಬಂದ ಪ್ರಾಂಶುಪಾಲರು ಶವವಾಗಿ ಪತ್ತೆಯಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬ್ರ್ಯಾಂಡ್ ಬೆಂಗಳೂರು | ಉನ್ನತ ಮಟ್ಟದ ಶಿಕ್ಷಣಕ್ಕೆ ಯೋಜನೆ ಅಗತ್ಯ: ಬಿಬಿಎಂಪಿ ವಿಶೇಷ ಆಯುಕ್ತ
ಮುದಗಲ್ ಇವರು ಇಳಕಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 14 ವರ್ಷ ಕರ್ತವ್ಯ ನಿರ್ವಹಿಸಿದ್ದರು. ಕಳೆದ ಆರು ತಿಂಗಳ ಹಿಂದೆ ಇಳಕಲ್ ಕಾಲೇಜಿನಿಂದ ಹುನಗುಂದ ಕಾಲೇಜಿಗೆ ವರ್ಗಾವಣೆಗೊಂಡು ಬಂದಿದ್ದರು. ಪ್ರಾಂಶುಪಾರಿಗೆ ಪತ್ನಿ ಹಾಗೂ ಮೂವರು ಮಕ್ಕಳು ಇದ್ದಾರೆ.
ಘಟನಾ ಸ್ಥಳಕ್ಕೆ ಹುನಗುಂದ ಡಿವೈಎಸ್ಪಿ, ಸಿಪಿಐ, ಪಿಎಸ್ಐ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುನುಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ಆರೋಗ್ಯ ಸಹಾಯವಾಣಿ 104.