- ಸುಡಾನ್‌ನಲ್ಲಿ ಸಿಲುಕಿರುವ ಹುಣಸೂರು, ಎಚ್ ಡಿ ಕೋಟೆಯ 80ಕ್ಕೂ ಹೆಚ್ಚು ಮಂದಿ
- ಹಕ್ಕಿಪಿಕ್ಕಿ ಸಮುದಾಯದವರು ತಾವೇ ತಯಾರಿಸುವ ಕೇಶ ತೈಲ ಮಾರಾಟಕ್ಕೆ ತೆರಳಿದ್ದರು
ಸುಡಾನ್‌ನಲ್ಲಿ ಆಂತರಿಕ ಸೈನಿಕ ದಂಗೆ ಭುಗಿಲೆದಿದ್ದಿದೆ. ಅಲ್ಲಿ, ಕರ್ನಾಟಕದ 800 ಮಂದಿ ಸಿಲುಕಿಕೊಂಡಿದ್ದಾರೆ. ಅವರಲ್ಲಿ, ಮೈಸೂರು ಜಿಲ್ಲೆಯ ಹುಣಸೂರು ಮತ್ತು ಎಚ್.ಡಿ ಕೋಟೆ ತಾಲೂಕಿನ ಸುಮಾರು ಹಕ್ಕಿಪಿಕ್ಕಿ ಸಮುದಾಯದ 80ಕ್ಕೂ ಹೆಚ್ಚು ಮಂದಿ ಇದ್ದಾರೆ. ಅವರೆಲ್ಲರೂ, ಜೀವ ಉಳಿಸಿಕೊಂಡು ತಾಯ್ನಾಡಿಗೆ ಮರಳುವುದು ಹೇಗೆಂಬ ಆತಂಕದಲ್ಲಿದ್ದಾರೆ. ತಮಗೆ ನೆರವಾಗುವಂತೆ ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ದಕ್ಷಿಣ ಆಫ್ರಿಕಾದ ಸುಡಾನ್‌ಗೆ ಕಳೆದ ನಾಲ್ಕು ತಿಂಗಳ ಹಿಂದೆ ಹಕ್ಕಿಪಿಕ್ಕಿ ಸಮುದಾಯದವರು ತಾವೇ ತಯಾರಿಸುವ ಕೇಶ ತೈಲ ಮಾರಾಟ ಮಾಡಲು ಮತ್ತು ಮಸಾಜ್ ಮಾಡಲು ತೆರಳಿದ್ದರು. ಸುಡಾನ್‌ನ ಅಲ್ಲಲ್ಲಿ ಬಾಡಿಗೆ ಮನೆ, ಲಾಡ್ಜ್‌ಗಳನ್ನು ಗುರುತು ಮಾಡಿಕೊಂಡು ವಾಸಿಸುತ್ತಿದ್ದರು.
ಈ ನಡುವೆ ಮಿಲಿಟರಿ ಹಾಗೂ ಅರೆ ಸೇನಾಪಡೆಗಳ ನಡುವೆ ದಂಗೆ ಎದ್ದಿದ್ದು, ಇಡೀ ಸುಡಾನ್‌ನಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದೆ. ವಿಮಾನ ನಿಲ್ದಾಣವನ್ನು ಧ್ವಂಸ ಮಾಡಲಾಗಿದ್ದು, ಸತತ ಗುಂಡಿನ ಮೊರೆತ ಕೇಳುತ್ತಿದೆ. ಮನೆಯಿಂದ ಹೊರಬರಲಾಗದೆ ಊಟ – ತಿಂಡಿ, ಕುಡಿಯುವ ನೀರಿಗೂ ತತ್ವಾರ ಉಂಟಾಗಿದ್ದು, ಪರಿತಪಿಸುತ್ತಿದ್ದಾರೆ.
ಸುಡಾನ್‌ನಲ್ಲಿ ಕರೆಂಟ್ ಸ್ಥಗಿತವಾಗಿದೆ. ಅಂಗಡಿಗೆ ಹೋಗಿ ಆಹಾರ ಸಾಮಗ್ರಿಗಳನ್ನು ತರಲು ಸಾಧ್ಯವಾಗುತ್ತಿಲ್ಲ. ಎಲ್ಲೆಂದರಲ್ಲಿ ಮಿಲಿಟರಿ ವಾಹನಗಳು ಸೈರನ್ ಹಾಕಿಕೊಂಡು ಸಂಚರಿಸುತ್ತಿವೆ. ಮನೆಯಿಂದ ಹೊರಬರಲಾಗದ ಸ್ಥಿತಿ ನಿರ್ಮಾಣವಾಗಿದ್ದು, ಅಲ್ಲಿನ ದೇಶದವರು ಬೇರೆಕಡೆಗೆ ವಲಸೆ ಹೋಗುತ್ತಿದ್ದಾರೆ.
ಸುಡಾನ್ ನಲ್ಲಿರುವ ಹಕ್ಕಿಪಿಕ್ಕಿ ಸಮುದಾಯದ ಮಂದಿ ಪಕ್ಷಿರಾಜಪುರದ ಕುಟುಂಬದವರೊಂದಿಗೆ ವಿಡಿಯೋ ಕಾಲ್ ಮಾಡಿ ಮಾತನಾಡಿ ತಮ್ಮ ಆತಂಕವನ್ನು ತೋಡಿಕೊಂಡಿದ್ದಾರೆ.

ಶಿವಮೊಗ್ಗ, ಕೇರಳ, ಬೆಂಗಳೂರು, ದಾವಣಗೆರೆ ಮತ್ತು ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಒಂದನೇ ಪಕ್ಷಿರಾಜಪುರ, ಎರಡನೇ ಪಕ್ಷಿರಾಜಪುರ, ಎಚ್ ಡಿ ಕೋಟೆ ತಾಲೂಕಿನ ಟೈಗರ್ ಬ್ಲಾಕ್‌ನಿಂದ ಸುಮಾರು 80ಕ್ಕೂ ಹೆಚ್ಚು ಮಂದಿ ಸುಡಾನ್‌ಗೆ ಹೋಗಿದ್ದು, ಕುಟುಂಬದವರಿಗೆ ಮಾಹಿತಿ ಪಡೆಯಲು ಯಾರನ್ನು ಸಂಪರ್ಕಿಸಬೇಕೆಂಬುದೇ ತಿಳಿಯದ ಪರಿಸ್ಥಿತಿ ಉಂಟಾಗಿದ್ದು, ನೆರವಿಗೆ ಧಾವಿಸುವಂತೆ ಮನವಿ ಸಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಚುನಾವಣಾ ನೀತಿ ಸಂಹಿತೆ ಸಮರ್ಪಕ ಜಾರಿಗೆ ಜಿಲ್ಲಾಧಿಕಾರಿ ಸೂಚನೆ
ಪ್ರಧಾನಿಗೆ ಮನವಿ
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗೋಪನಾಳು ಮತ್ತು ಅಸ್ತಾಪನಹಳ್ಳಿ ಗ್ರಾಮದ 150 ಜನ, ಶಿವಮೊಗ್ಗ ಜಿಲ್ಲೆಯ 400, ಮೈಸೂರು ಜಿಲ್ಲೆಯ 250 ರಿಂದ 300 ಜನ ಅತಂತ್ರರಾಗಿದ್ದಾರೆ. ಮೂರ್ನಾಲ್ಕು ದಿನಗಳಿಂದ ಆಹಾರ, ನೀರು ಸಿಗದೇ ಪರಿತಪಿಸುತ್ತಿರುವುದಾಗಿ ಅವರು ಸಂಬಂಧಿಕರಿಗೆ ಕರೆ ಮಾಡಿ ತಿಳಿಸಿದ್ದಾರೆ.
ಸುಡಾನ್‌ನ ಖಾರ್ಟೂಮ್ ನಗರದಲ್ಲಿ ಕೆಲವು ದಿನಗಳಿಂದ ಬಾಂಬ್ ಮತ್ತು ಕ್ಷಿಪಣಿ ದಾಳಿಗಳು ನಡೆಯುತ್ತಿವೆ. ಅಲ್ಲಿ ಸಿಲುಕಿರುವ ಕನ್ನಡಿಗರು ಜೀವ ಭಯದಿಂದ ದಿನ ಕಳೆಯುತ್ತಿದ್ದಾರೆ. ಅತಂತ್ರರಾಗಿರುವ ಅವರೆಲ್ಲರನ್ನೂ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆ ತರುವಂತೆ ಸಮುದಾಯದ ಹಿರಿಯರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.