ಮೈಕ್ರೋಫೈನಾನ್ಸ್‌ನಿಂದ ಪಡೆದಿದ್ದ ಸಾಲ ತೀರಿಸಲು ನಾನು ನನ್ನ ಕಿಡ್ನಿ ಮಾರಿದ್ದೇನೆ. ಆದರೂ, ಸಾಲದಾತರು ಸಾಲ ಮುಗಿದಿಲ್ಲ ಎನ್ನುತ್ತಿದ್ದಾರೆ. ನನ್ನ ಇಬ್ಬರು ಹೆಣ್ಣುಮಕ್ಕಳ ಕಿಡ್ನಿಗಳನ್ನೂ ಮಾರಾಟ ಮಾಡಿ, ಹಣ ಪಾವತಿಸುವಂತೆ ಮೈಕ್ರೋಫೈನಾನ್ಸ್ ಏಜೆಂಟರು ಒತ್ತಾಯಿಸುತ್ತಿದ್ದಾರೆ ಎಂದು ರಾಮನಗರ ಜಿಲ್ಲೆಯ ಮಹಿಳೆಯೊಬ್ಬರು ಆರೋಪಿಸಿದ್ದಾರೆ.
ಜಿಲ್ಲೆಯ ಮಾಗಡಿ ಪಟ್ಟದ ನಿವಾಸಿ, ಕೃಷಿ ಕಾರ್ಮಿಕ ಮಹಿಳೆ ಗೀತಾ ಅವರು ಮೈಕ್ರೋಫೈನಾನ್ಸ್ ನೀಡುತ್ತಿರುವ ಕಿರುಕುಳದ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. “2013ರಲ್ಲಿ ತನ್ನ ಪತಿ ಅನಾರೋಗ್ಯಕ್ಕೆ ತುತ್ತಾಗಿದ್ದರು. ಆಗ, ಮೈಕ್ರೋಫೈನಾನ್ಸ್ ನಡೆಸುತ್ತಿದ್ದ ಮಂಜುನಾಥ್ ಎಂಬಾತ ತಮಗೆ 2.5 ಲಕ್ಷ ರೂ. ಸಾಲ ನೀಡಿದ್ದರು. ಆದರೆ, ಚಿಕಿತ್ಸೆ ಫಲಿಸದೆ ತಮ್ಮ ಪತಿ ಸಾವನ್ನಪ್ಪಿದರು. ಜೀವನ ನಡೆಸುವುದೇ ಕಷ್ಟವಾಗಿತ್ತು. ಹೀಗಿದ್ದರೂ, ಕಷ್ಟದಿಂದ ದುಡಿತು ಇಬ್ಬರು ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸಿ, ಮದುವೆ ಮಾಡಿದ್ದೇನೆ” ಎಂದು ಮಹಿಳೆ ಹೇಳಿದ್ದಾರೆ.
“ಸಾಲ ನೀಡಿದ್ದ ಮಂಜುನಾಥ್ ಸಾಲ ಮರುಪಾವತಿ ಮಾಡುವಂತಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಸಾಲ ತೀರಿಸಲು ಕಿಡ್ನಿ ಮಾರುವಂತೆ ಒತ್ತಾಯಿಸಿದರು. ಅವರೇ ಆಸ್ಪತ್ರೆಗೆ ಕರೆದೊಯ್ದು ಕಡ್ನಿ ಮಾರಿಸಿದರು. ಮೂರು ವರ್ಷಗಳ ಹಿಂದೆ, ನನ್ನ ಒಂದು ಕಿಡ್ನಿಯನ್ನು 2.5 ಲಕ್ಷ ರೂ.ಗೆ ಮಾರಾಟ ಮಾಡಿ, ಸಾಲ ಮರುಪಾವತಿ ಮಾಡಿದ್ದೇನೆ. ಆದರೆ, ಈಗ ಕೆಲವು ವಾರಗಳಿಂದ ಮಂಜುನಾಥ್ ಮತ್ತೆ ಹಣ ಪಾವತಿ ಮಾಡಬೇಕೆಂದು ಕೇಳುತ್ತಿದ್ದಾರೆ” ಎಂದು ಮಹಿಳೆ ಆರೋಪಿಸಿದ್ದಾರೆ.
“ನಾನು ಇನ್ನಾವುದೇ ಹಣವನ್ನು ನೀಡುವುದಿಲ್ಲ ಎಂದು ಪ್ರತಿಭಟಿಸಿದೆ. ಆದರೆ, ಅವರು ನನ್ನ ಇಬ್ಬರು ವಿವಾಹಿತ ಹೆಣ್ಣುಮಕ್ಕಳಿಗೆ ಅವರ ಕಿಡ್ನಿಯನ್ನು ಮಾರಾಟ ಮಾಡಲು ಮನವೊಲಿಸುವಂತೆ ಒತ್ತಡ ಹಾಕುತ್ತಿದ್ದಾರೆ. ಆದರೆ, ನಾನು ಅವರೊಂದಿಗೆ ಜಗಳ ಮಾಡಿದ್ಧೇನೆ. ಇನ್ನಾವುದೇ ಸಾಲವೂ ಉಳಿದಿಲ್ಲವೆಂದು ನಿರಕಾರಿಸಿದ್ದೇನೆ” ಎಂದು ಮಹಿಳೆ ಹೇಳಿಕೊಂಡಿದ್ದಾರೆ.