ನನ್ನ ಕ್ಷೇತ್ರದ ಯಾವುದೇ ತಾಲ್ಲೂಕಿರಲಿ ಗುಬ್ಬಿ ತಾಲ್ಲೂಕೇ ಇರಲಿ ಅಭಿವೃದ್ಧಿ ವಿಚಾರವಾಗಿ ಯಾರ ಮನೆಗಾದರೂ ಹೋಗಲು ಸದಾ ಕಾಲ ಸಿದ್ದವಿದ್ದೇನೆ. ಅಭಿವೃದ್ದಿ ವಿಚಾರದಲ್ಲಿ ಪಕ್ಷ, ಜಾತಿ ಧರ್ಮ ಬೇಧವಿಲ್ಲದೆ ಕೆಲಸ ಮಾಡಬೇಕು. ಕ್ಷೇತ್ರಕ್ಕೆ ಒಳ್ಳೇದಾಗುತ್ತೆ ಎಂದಾದರೆ ಸಲ್ಲದ ರಾಜಕಾರಣ ಮಾಡುವುದು ಬೇಡ ಎಂದು ಕೇಂದ್ರ ರೈಲ್ವೆ ರಾಜ್ಯಖಾತೆ ಸಚಿವ ವಿ.ಸೋಮಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ಗುಬ್ಬಿ ತಾಲ್ಲೂಕಿನ ಕಸಬ ಹೋಬಳಿ ಜಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮತದಾರರ ಇಚ್ಚೆಯಂತೆ ಕೆಲಸ ಮಾಡಲು ಬಯಸುತ್ತೇನೆ. ಎಲ್ಲಾ ಅಧಿಕಾರಿ ವರ್ಗ ನನ್ನ ಜೊತೆ ಸಹಕರಿಸಿ ಸಾರ್ವಜನಿಕ ಕೆಲಸ ಮಾಡಬೇಕು. ಶ್ರೀ ಸಾಮಾನ್ಯರನ್ನು ತಾತ್ಸಾರ ಮಾಡದೆ ಸಮಸ್ಯೆ ಬಗೆಹರಿಸಬೇಕು. ಅಧಿಕಾರ ಶಾಶ್ವತ ಅಲ್ಲ ಪಕ್ಷ ಜಾತಿ ಧರ್ಮ ಬೇಧವಿಲ್ಲದೆ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.
ಸಾರ್ವಜನಿಕ ಬದುಕು ಅರಿತು ಅಧಿಕಾರಿಗಳು ಕೆಲಸ ಮಾಡಬೇಕು. ಮುಳ್ಳಿನ ಹಾಸಿಗೆಯ ಕೆಲಸದಂತೆ ಇರುವ ಅಧಿಕಾರದಲ್ಲಿ ಯಾರೊಬ್ಬರ ಅಣತಿಯಂತೆ ಕೆಲಸ ಮಾಡುವುದು. ಬಡ ಮಧ್ಯಮ ವರ್ಗಕ್ಕೆ ಅನ್ಯಾಯ ಮಾಡುವುದು ಇಂತಹ ವಿಚಾರ ನನ್ನ ಬಳಿಗೆ ಬಾರದಂತೆ ನಿಗಾ ವಹಿಸಬೇಕು. ಜನರನ್ನು ಸುಮ್ಮನೆ ಅಲೆದಾಡಿಸುವ ದೂರು ಬರಬಾರದು ಎಂದು ಎಚ್ಚರಿಸಿದ ಸಚಿವರು ಪ್ರಧಾನ ಮಂತ್ರಿ ಮೋದಿ ಅವರ ದೇಶದ ಅಭಿವೃದ್ದಿ ಕನಸು ನನಸು ಮಾಡಲು ನಾವೆಲ್ಲಾ ಬದ್ಧರಾಗಿ ಕೆಲಸ ಮಾಡುತ್ತಿದ್ದೇವೆ. ದೇಶದಲ್ಲೇ ಕುಡಿಯುವ ನೀರಿಗೆ ಜಲ ಜೀವನ್ ಮಿಷನ್ ಯೋಜನೆ ಜಾರಿ ಮಾಡಿ 8 ಲಕ್ಷ ಕೋಟಿ ರೂ ನೀಡಿದ್ದಾರೆ. ನೀರಾವರಿ ಯೋಜನೆಗಳಿಗೆ 2.64 ಲಕ್ಷ ಕೋಟಿ ರೂ ನೀಡಿದ್ದಾರೆ. ಜೆಜೆಎಂ ಯೋಜನೆ ನನ್ನದೇ ಖಾತೆ. ಅಲ್ಲಿನ ಕಳಪೆ ಕಾಮಗಾರಿ ಬಗ್ಗೆ ದೂರು ಬಾರದಂತೆ ಅಧಿಕಾರಿಗಳು ಕೆಲಸ ಮಾಡಬೇಕು. ಈ ಜೊತೆಗೆ ರಸ್ತೆ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಗೆ ಕೇಂದ್ರ 1 ಲಕ್ಷ ಕೋಟಿ ರೂ ಬರಲಿದೆ. ದುರಸ್ಥಿ ಕಾರ್ಯಕ್ಕೆ ಬಳಸಬೇಕು ಎಂದು ಸೂಚನೆ ನೀಡಿದರು.

ದೇಶದ ಅತಿ ದೊಡ್ಡ ಖಾತೆ ರೈಲ್ವೆ ಇಲಾಖೆ 120 ವರ್ಷದ ಇತಿಹಾಸವಿದೆ. 12 ಲಕ್ಷ ಸಿಬ್ಬಂದಿ ಇರುವ ಈ ಖಾತೆ ನಿರ್ವಹಣೆ ಕಷ್ಟದ ಕೆಲಸವಾಗಿದೆ. ಇಂತಹ ಒತ್ತಡ ಮಧ್ಯೆ ತುಮಕೂರು ಕ್ಷೇತ್ರದ ಎಲ್ಲಾ ತಾಲ್ಲೂಕಿಗೆ ಬರುತ್ತೇನೆ. ಅಭಿವೃದ್ದಿ ವಿಚಾರವಾಗಿ ಗ್ರಾಮೀಣ ಭಾಗಕ್ಕೆ ತೆರಳುತ್ತೇನೆ. ಇನ್ನೂ ಮುಂದೆ ತಹಶೀಲ್ದಾರ್ ಅವರಿಗೆ ತೊಂದರೆ ಆಗಬಹುದು. ನನ್ನ ಮೇಲೆ ಬೇಸರ ಆಗಬೇಡಿ ಎಂದು ನೇರ ವೇದಿಕೆಯಲ್ಲಿದ್ದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಸರ್ವ ರೋಗಕ್ಕೂ ಸಾರಾಯಿ ಮದ್ದು ಎನ್ನುವಂತೆ ಗ್ರಾಮೀಣ ಅಭಿವೃದ್ಧಿಗೆ ಇಓ ಅಧಿಕಾರಿಯೇ ಮುಖ್ಯವಾಗುತ್ತಾರೆ ಎಂದು ಹಾಸ್ಯ ಮಾತುಗಳಲ್ಲೇ ಜವಾಬ್ದಾರಿ ಬಗ್ಗೆ ತಿಳಿ ಹೇಳಿ ಬಗರ್ ಹುಕುಂ ಸಮಿತಿ ಮೂಲಕ ಈಗಾಗಲೇ 200 ಎಕರೆ ವಿತರಣೆ ಮಾಡಲಾಗುತ್ತಿದೆ. ಅರ್ಹರಿಗೆ ಮಾತ್ರ ಭೂಮಿ ಸಿಗುವಂತೆ ಎಚ್ಚರಿಕೆ ವಹಿಸಿ ಕೆಲಸ ಮಾಡಿ ಬಡವರ ಆಶೀರ್ವಾದ ನಿಮ್ಮ ತಲೆ ಕಾಯುತ್ತದೆ ಎಂದು ತಿಳಿಸಿದರು.
ಕಕ್ಕಾಬಿಕ್ಕಿಯಾದ ಅಧಿಕಾರಿಗಳು.!!.
ಗಣೇಶ ಮಾಡು ಅಂದ್ರೆ ಅವರಪ್ಪನ ಮಾಡೋದು, ಯಾರೋ ಒಬ್ಬರ ಬಳಿ ಶೆಲ್ಟರ್ ಆಗೋದು, ಅದನ್ನೇ ನಂಬಿ ದುಡ್ಡು ಮಾಡುವುದೇ ಮುಖ್ಯ ಕೆಲಸ ಆಗಬಾರದು. ಇನ್ಮುಂದೆ ತಾಲ್ಲೂಕು ಪ್ರವಾಸ ಹೆಚ್ಚಲಿದೆ. ಅಧಿಕಾರಿಗಳಿಗೆ ತೊಂದ್ರೆ ಆಗಬಹುದು. ಯಾರೋ ನನ್ನ ಬೈದು ಕೊಳ್ಳದೆ ಕೆಲಸ ಮಾಡಿ. ಎಸಿ ಸಾಹೇಬ್ರು ವರ್ಗಾವಣೆ ಮಾಡಿಕೊಳ್ಳುವ ಪ್ರಯತ್ನ ಮಾಡೋದು ಬೇಡ. ಇನ್ನು ಮುಂದೆ ತಿದ್ದಿಕೊಂಡು ಸಾರ್ವಜನಿಕ ಕೆಲಸ ಮಾಡಿ ಸಾಕು ಎಂದು ಕೇಂದ್ರ ಸಚಿವ ಸೋಮಣ್ಣ ಖಡಕ್ ಮಾತುಗಳಾಡಿ ಕೆಲ ಕ್ಷಣ ಕಾರ್ಯಕ್ರಮದಲ್ಲಿದ್ಧ ಅಧಿಕಾರಿಗಳು ಕಕ್ಕಾಬಿಕ್ಕಿಯಾದರು.

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಹೆಚ್ಚು ಒತ್ತು..
ಕೇಂದ್ರದ ಮಹತ್ವಾಕಾಂಕ್ಷೆಯ ಯೋಜನೆಗಳ ಪೈಕಿ ರಸ್ತೆ ಅಭಿವೃದ್ದಿಗೆ ನಿರಂತರ ಹಣ ನೀಡಲಾಗುತ್ತಿದೆ. ಕೇಂದ್ರ ಸಚಿವ ಗಡ್ಕರಿ ಅವರ ಮೂಲಕ ರಾಷ್ಟ್ರೀಯ ಹೆದ್ದಾರಿ 48 ಹಾಗೂ 206 ರಸ್ತೆಯ 44 ಕಿಮೀ ಅಭಿವೃದ್ಧಿಗೆ 2600 ಕೋಟಿ, ತುಮಕೂರು ನೆಲಮಂಗಲ ಮಧ್ಯೆ ಅಪಘಾತ ಹೆಚ್ಚಾಗಿ 243 ಮಂದಿ ಸಾವನ್ನಪ್ಪಿದ್ದಾರೆ. ಈ ಹಿನ್ನಲೆ 2400 ಕೋಟಿ ರೂಗಳಲ್ಲಿ 45 ಕಿಮೀ ಅಭಿವೃದ್ದಿಗೆ ಹಣ ಮಂಜೂರಾಗಿದೆ. ಈ ಜೊತೆಗೆ ಅಆಇಈ ಕಲಿಸಿದ ಅಧಿಕಾರಿಗಳು ಕಳೆದ ಏಳು ತಿಂಗಳಲ್ಲಿ ಸಾಕಷ್ಟು ಕಾನೂನು ತಿಳಿಸಿದ್ದಾರೆ. ಈ ಗುಬ್ಬಿ ಸಾರ್ವಜನಿಕ ಸ್ಪಂದನ ಕಾರ್ಯಕ್ರಮದಿಂದ ಬದಲಾವಣೆ ಆಗಬೇಕು ಎಂದರು.
ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕೆಲಸ ನಡೆಯಲು ಬಿಡೋಲ್ಲ.
ರೈತರಿಗೆ ಮರಣ ಶಾಸನವಾಗುವ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರೋಧ ವ್ಯಕ್ತಪಡಿಸಿ ಸ್ಥಗಿತ ಮಾಡಲು ಸರ್ಕಾರಕ್ಕೆ ಒತ್ತಡ ಹೇರುತ್ತೇನೆ. ಡಿ.ಕೆ.ಶಿವಕುಮಾರ್ ಅವರು ರಾಜ್ಯಕ್ಕೆ ಉಪ ಮುಖ್ಯಮಂತ್ರಿಗಳು, ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿಗೆ ಅಲ್ಲ ಎಂಬುದು ತಿಳಿದುಕೊಳ್ಳಬೇಕು. ಕೇಂದ್ರದ ಸಚಿವನಾಗಿ ಹೋರಾಟಕ್ಕೆ ಬರುವುದು ಕಷ್ಟ. ಬಿಜೆಪಿ ಸರ್ಕಾರ ಈ ಹಿಂದೆ ಈ ಲಿಂಕ್ ಕೆನಾಲ್ ಕೆಲಸ ನಿಲ್ಲಿಸಿದ್ದೆವು. ಆದರೆ ಕಾಂಗ್ರೆಸ್ ಸರ್ಕಾರ ಮರು ಚಾಲನೆ ಮಾಡಿರುವುದು ಖಂಡಿಸಿ ಸ್ಥಗಿತಗೊಳಿಸುವ ಭರವಸೆ ಸಚಿವ ಸೋಮಣ್ಣ ನೀಡಿದರು.
ಗ್ರಾಮೀಣ ಭಾಗದ ಜನರಿಂದ ನೂರಾರು ಅಹವಾಲು ಸ್ವೀಕಾರ ಮಾಡಿ ಸಚಿವರು ಶೀಘ್ರದಲ್ಲಿ ಸಮಸ್ಯೆಗಳಿಗೆ ಸ್ಪಂದನೆ ಸಿಗುವ ಭರವಸೆ ನೀಡಿದರು.
ವೇದಿಕೆಯಲ್ಲಿ ಹೊಸಹಳ್ಳಿ ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷೆ ಮಹಾಲಕ್ಷ್ಮಿ, ಸದಸ್ಯ ಎಚ್.ಬಿ.ನರೇಶ್, ಮೋಹನ್, ಸಿದ್ದಗಂಗಮ್ಮ, ಉಪ ವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ತಹಶೀಲ್ದಾರ್ ಬಿ.ಆರತಿ, ತಾಪಂ ಇಓ ಶಿವಪ್ರಕಾಶ್ ಸೇರಿದಂತೆ ಪಪಂ ಸದಸ್ಯರು ಇದ್ದರು. ಕಾರ್ಯಕ್ರಮದಲ್ಲಿ ಮುಖಂಡರಾದ ಬಿ.ಎಸ್.ನಾಗರಾಜ್, ಎಸ್.ಡಿ.ದಿಲೀಪ್ ಕುಮಾರ್, ಜಿ.ಎನ್.ಬೆಟ್ಟಸ್ವಾಮಿ, ಕಳ್ಳಿಪಾಳ್ಯ ಲೋಕೇಶ್, ಎನ್.ಸಿ.ಪ್ರಕಾಶ್, ಪಿ.ಬಿ.ಚಂದ್ರಶೇಖರಬಾಬು, ಹೊನ್ನಗಿರಿಗೌಡ, ಪಂಚಾಕ್ಷರಿ, ಚಿಕ್ಕವೀರಯ್ಯ ಇತರರು ಇದ್ದರು.
ವರದಿ – ಎಸ್. ಕೆ. ರಾಘವೇಂದ್ರ