ಕೆಲವು ದಿನಗಳ ಹಿಂದೆ ವಸತಿ ಯೋಜನೆಯಡಿ ಮನೆ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಅವರ ಆರೋಪದ ಬಗ್ಗೆ ಸೂಕ್ತವಾದ ತನಿಖೆ ನಡೆಸಬೇಕು ಹಾಗೂ ಸರ್ಕಾರದ ಸೇವೆಯನ್ನು ಪಡೆಯಲು ಲಂಚ ಪಡೆಯುವ ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳು ಯಾರೆಂದು ಗುರುತಿಸಿ ಅವರಿಗೆ ಕಾನೂನಿನ ಚೌಕಟ್ಟಿನೊಳಗಡೆ ಶಿಕ್ಷೆಗೆ ಒಳಪಡಿಸ ಬೇಕು ಎಂದು ನೈಜ ಹೋರಾಟಗಾರರ ವೇದಿಕೆ ಆಗ್ರಹಿಸಿದೆ.
ಈ ಬಗ್ಗೆ ಕರ್ನಾಟಕ ಲೋಕಾಯುಕ್ತ ಪೊಲೀಸರಿಗೆ ದೂರನ್ನು ಸಲ್ಲಿಸಿರುವ ವೇದಿಕೆಯ ಮುಖಂಡರಾದ ಹೆಚ್ ಎಂ ವೆಂಕಟೇಶ್ ನೇತೃತ್ವದ ನಿಯೋಗವು, ನಮ್ಮ ದೂರನ್ನು ಆಧರಿಸಿ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿ ತನಿಖೆಯನ್ನು ನಡೆಸಬೇಕು ಎಂದು ಒತ್ತಾಯಿಸಿದೆ.
ಸರ್ಕಾರದ ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆಳಂದ ಕ್ಷೇತ್ರದ ಶಾಸಕರಾದ ಬಿ. ಆರ್ ಪಾಟೀಲ್ ಅವರು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಕಾರ್ಯದರ್ಶಿ ಸರ್ಫರಾಜ್ ಜೊತೆ ದೂರವಾಣಿ ಮೂಲಕ ಸಂಭಾಷಣೆ ನಡೆಸಿದ್ದಾರೆನ್ನಲಾದ ಆಡಿಯೋ ರಾಜ್ಯದಾದ್ಯಂತ ಸಂಚಲನವನ್ನುಂಟುಮಾಡಿ ಈಗ ಸುದ್ದಿಯಲ್ಲಿದೆ. ಇದರಲ್ಲಿ ಬಹಳ ಪ್ರಮುಖವಾಗಿ ರಾಜೀವ್ ಗಾಂಧಿ ವಸತಿ ನಿಗಮದಿಂದ ದೀನ ದುರ್ಬಲರಿಗೆ ವಸತಿ ಹೀನರಿಗೆ ಸರ್ಕಾರ ಹಂಚಿಕೆ ಮಾಡುವ ಮನೆಗಳನ್ನು ಪಡೆದುಕೊಳ್ಳಲು ಹಣ ಕೊಟ್ಟರೆ ಮಾತ್ರ ಹಂಚಿಕೆಯಾಗುತ್ತದೆ ಎಂಬ ಸಂಭಾಷಣೆ ನಡೆದಿರುವುದು ಅತ್ಯಂತ ಆಘಾತಕಾರಿಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಬಿ ಆರ್ ಪಾಟೀಲ್ ಅವರು ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಹಾಗೂ ಸರ್ಕಾರದ ಅಂಗವಾದ ನೀತಿ ಆಯೋಗದ (ಯೋಜನಾ ಆಯೋಗ) ಉಪಾಧ್ಯಕ್ಷರಾಗಿಯು ಸೇವೆ ಸಲ್ಲಿಸುತ್ತಿದ್ದಾರೆ. ಇವರ ಈ ಹೇಳಿಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭ್ರಷ್ಟಾ ಆಡಳಿತದ ಅಂಶ ಚರ್ಚೆಯಾಗಿರುವುದು ಅಘಾತಕಾರಿಯಾಗಿದೆ. ಲಂಚ ಕೊಟ್ಟವರಿಗೆ ಮಾತ್ರ ಮನೆ ಹಂಚಿಕೆಯಾಗುತ್ತದೆ ಎಂದು ಬಿ ಆರ್ ಪಾಟೀಲ್ ಅವರು ಹೇಳಿರುವುದು ವಸತಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈ ಹೇಳಿಕೆ ಯಾವುದೇ ಜನಸಾಮಾನ್ಯ ವ್ಯಕ್ತಿ ಹೇಳಿಕೆಯಲ್ಲ. ಇದು ಜವಾಬ್ದಾರಿಯುತಾ ಸ್ನಾನದಲ್ಲಿರುವ ಕಾನೂನುಗಳನ್ನು ರೂಪಿಸುವ ಮತ್ತು ಯೋಜನೆಗಳನ್ನು ರೂಪಿಸಿ ಜಾರಿಗೆ ತರುವ ನೀತಿ ಆಯೋಗದ ಉಪಾಧ್ಯಕ್ಷರಾಗಿರುವ ಬಿಆರ್ ಪಾಟೀಲ್ ಅವರು ಹೇಳಿರುವುದನ್ನು ನಾವೆಲ್ಲರೂ ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.
ಭ್ರಷ್ಟಾಚಾರದ ಆಡಿಯೋ ಸಂಭಾಷಣೆ ಮತ್ತು ಮಾಧ್ಯಮಗಳ ವರದಿಯು ಜನರ ನಡುವೆ ಚರ್ಚೆಗೆ ಗ್ರಾಸವಾಗುತ್ತಿದ್ದರೂ ಸಹ ಸಂಭಾಷಣೆಯಲ್ಲಿ ಭಾಗಿಯಾಗಿರುವವರನ್ನು ಪತ್ತೆ ಮಾಡಲು ಸರ್ಕಾರದ ಅಧಿಕಾರಿ ಸರ್ಫ್ ರಾಜ್ ಖಾನ್ ಅಥವಾ ಜನಪ್ರತಿನಿಧಿಗಳಾದ ಬಿ ಆರ್ ಪಾಟೀಲ್ ಈವರೆಗೂ ದೂರು ದೂರು ನೀಡಿಲ್ಲ. ಭ್ರಷ್ಟಾಚಾರದ ಈ ಸಂಭಾಷಣೆ ವಸತಿ ಇಲಾಖೆಯಲ್ಲಿನ ಇಡೀ ರಾಜ್ಯದಾದ್ಯಂತ ಪ್ರಸಾರವಾದರೂ ಸಹ ಸರ್ಕಾರವು ಕೂಡ ಈ ಬಗ್ಗೆ ತನಿಖೆಗೆ ಮುಂದಾಗಿಲ್ಲ. ಮುಖ್ಯವಾಗಿ ಭ್ರಷ್ಟಾಚಾರವನ್ನು ತಡೆಗಟ್ಟಬೇಕಾದ ಲೋಕಾಯುಕ್ತ ಸಂಸ್ಥೆಯು ಸ್ವಯಂ ಪ್ರೇರಿತವಾಗಿ ದೂರನ್ನು ದಾಖಲಿಸಿ ತನಿಖೆಗೆ ಮುಂದಾಗದೆ ಇರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಕರ್ನಾಟಕ ಲೋಕಾಯುಕ್ತವು ಜನಪ್ರತಿನಿಧಿಗಳು ಮತ್ತು ಸರ್ಕಾರದ ಅಧಿಕಾರಿಗಳು ಕರ್ತವ್ಯ ಲೋಪ ಮತ್ತು ಲಂಚ ಪ್ರಕರಣದಲ್ಲಿ ಭಾಗಿಯಾದಾಗ ಅವರನ್ನು ತನಿಖೆಗೆ ಒಳಪಡಿಸಿ ಸತ್ಯಾಸತ್ಯತೆಯನ್ನು ಹೊರಗೆ ತಂದು ತಪ್ಪಿತಸ್ಥರಿಗೆ ಶಿಕ್ಷೆ ಕೊಡಲು ಈ ಸಂಸ್ಥೆಯನ್ನು 1984ರಲ್ಲಿ ರಾಜ್ಯ ಸರ್ಕಾರವು ಹುಟ್ಟು ಹಾಕಿದೆ. ಆದುದರಿಂದ ಸರ್ಕಾರದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವೆ ನಡೆದ ಈ ಸಂಭಾಷಣೆಯ ಬಗ್ಗೆ ಲೋಕಾಯುಕ್ತ ಸಂಸ್ಥೆಯು ತಕ್ಷಣ ಮಧ್ಯ ಪ್ರವೇಶಿಸಿ ಕಾನೂನು ಕ್ರಮಗಳನ್ನು ಜರುಗಿಸಬೇಕೆಂದು ನೈಜ ಹೋರಾಟಗಾರರ ವೇದಿಕೆಯಿಂದ ಒತ್ತಾಯಿಸಿದೆ.
ಇದನ್ನು ಓದಿದ್ದೀರಾ? ಸಾಬರ ಹೆಸ್ರಿಗೆ ಜಮೀನು ಮಾಡಿದ್ರೆ ನೇಣಿಗೆ ಹಾಕೋದು ಗ್ಯಾರಂಟಿ: ದ್ವೇಷ ಹರಡಿದ ಶ್ರೀರಂಗಪಟ್ಟಣ ಕಾಂಗ್ರೆಸ್ ಶಾಸಕ!
ಆಡಿಯೋ ಸಂಭಾಷಣೆಯಲ್ಲಿ ಬಿ ಆರ್ ಪಾಟೀಲ್ ಅವರು ನಾನು ಸಂಪೂರ್ಣವಾಗಿ ಬಾಯಿಬಿಟ್ಟರೆ ಸರ್ಕಾರವೇ ಅಲುಗಾಡುತ್ತದೆ ಎಂದು ಹೇಳಿದ್ದಾರೆ. ಆದುದರಿಂದ ಈ ಸಂಭಾಷಣೆಯನ್ನು ಅತ್ಯಂತ ಆಳವಾಗಿ ತನಿಖೆಗೆ ಒಳಪಡಿಸಬೇಕಾದ ಅಗತ್ಯತೆ ಇದೆ. ಪಂಚಾಯಿತಿಯ ಅಧ್ಯಕ್ಷರು ಪತ್ರ ತೆಗೆದುಕೊಂಡು ಹೋಗಿ ಲಂಚ (ಹಣ) ಕೊಟ್ಟರೆ ಅವರು ಹೇಳಿದ ವ್ಯಕ್ತಿಗಳಿಗೆ ಮನೆಗಳು ಮಂಜೂರಾಗುತ್ತವೆ. ನನ್ನ ಪತ್ರಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ ಎಂಬ ಅರ್ಥದಲ್ಲಿ ಹೇಳಿರುತ್ತಾರೆ. ಲಂಚ ಪಡೆಯುವ ಅಧಿಕಾರಿ ಯಾರು? ಲಂಚ ಕೊಡುವವರು ಯಾರು? ಎಂಬುದನ್ನು ಆಳವಾಗಿ ತನಿಖೆ ನಡೆಸಿ, ಸರ್ಕಾರದ ಸೇವೆಯನ್ನು ಪಡೆಯಲು ಲಂಚ ಪಡೆಯುವ ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳು ಯಾರೆಂದು ಗುರುತಿಸಬೇಕು. ಅವರನ್ನು ಕಾನೂನಿನ ಚೌಕಟ್ಟಿನೊಳಗಡೆ ಶಿಕ್ಷೆಗೆ ಒಳಪಡಿಸಬೇಕು ಮತ್ತು ಈ ದೂರನ್ನು ಆಧರಿಸಿ ಎಫ್‌ಐಆರ್ ಅನ್ನು ದಾಖಲಿಸಿ ತನಿಖೆ ನಡೆಸಬೇಕೆಂದು ನೈಜ ಹೋರಾಟಗಾರರ ವೇದಿಕೆಯು ಕರ್ನಾಟಕ ಲೋಕಾಯುಕ್ತ ಪೊಲೀಸರನ್ನು ಆಗ್ರಹಿಸಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ನೈಜ ಹೋರಾಟಗಾರರ ವೇದಿಕೆಯ ಮುಖಂಡರಾದ ಬಿ ಎಸ್ ಲೋಕೇಶ್ ಹಾಗೂ ಎಂ ಜಗದೀಶ್ ಅವರು ನಿಯೋಗದಲ್ಲಿದ್ದರು.
