- ಪೊಲೀಸ್ ಠಾಣೆಯ 100 ಮೀಟರ್ ದೂರದಲ್ಲಿ ಇದ್ರೀಸ್ ಪಾಷ ಶವ ಪತ್ತೆಯಾಗಿತ್ತು
- ತಲೆ ಮರೆಸಿಕೊಂಡಿದ್ದ ಪುನೀತ್ ಕೆರೆಹಳ್ಳಿಯನ್ನು ರಾಜಸ್ಥಾನದಲ್ಲಿ ಬಂಧಿಲಾಗಿತ್ತು
ರಾಮನಗರ ಜಿಲ್ಲೆ ಕನಕಪುದ ಸಾತನೂರು ಬಳಿ ಜಾನುವಾರು ಸಾಗಣೆ ಸಂದರ್ಭದಲ್ಲಿ ಇದ್ರೀಸ್ ಪಾಷ (45) ಎಂಬುವವರ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರ ರಕ್ಷಣಾ ಪಡೆ ಸಂಘಟನೆಯ ಮುಖಂಡ ಪುನೀತ್ ಕೆರೆಹಳ್ಳಿ ಮತ್ತು ನಾಲ್ವರು ಆರೋಪಿಗಳಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.
ಆರೋಪಿಗಳು ಪ್ರತ್ಯೇಕವಾಗಿ ಸಲ್ಲಿಸಿದ್ದ ಮೂರು ಅರ್ಜಿಗಳನ್ನು ರಜಾಕಾಲದ ಪೀಠದಲ್ಲಿದ್ದ ನ್ಯಾಯಮೂರ್ತಿ ಎಂ ಜಿ ಉಮಾ ಮಂಗಳವಾರ ವಿಚಾರಣೆ ನಡೆಸಿ, ಪುನೀತ್ ಕೆರೆಹಳ್ಳಿ, ಗೋಪಿ, ಸುರೇಶ್, ಎ ಎನ್ ಪವನ್ ಕುಮಾರ್, ಪಿ ಲಿಂಗಪ್ಪ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದಾರೆ.
ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಎಂ ಅರುಣ್ ಶ್ಯಾಮ್, “ಮರಣೋತ್ತರ ಪರೀಕ್ಷೆಯಲ್ಲಿ ಇದೀಸ್ ಪಾಷ ದೇಹದಲ್ಲಿ ತರಚಿದ ಗಾಯಗಳ ಬಗ್ಗೆ ಮಾತ್ರ ಉಲ್ಲೇಖವಿದೆ. ಗಂಭೀರ ಗಾಯಗಳ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಪ್ರಕರಣವು ಸಾತನೂರು ಠಾಣೆಯ 100 ಮೀಟರ್ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಈಗಾಗಲೇ ತನಿಖೆ ಪೂರ್ಣಗೊಂಡಿದೆ. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಪೂರ್ಣಗೊಳಿಸಲಾಗಿದೆ. ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಬೇಕಿದ್ದು, ಜಾಮೀನು ಮಂಜೂರು ಮಾಡಬೇಕು” ಎಂದು ಕೋರಿದ್ದರು. ನ್ಯಾಯಪೀಠ ಈ ವಾದವನ್ನು ಪುರಸ್ಕರಿಸಿದೆ.
ಈ ಸುದ್ದಿ ಓದಿದ್ದೀರಾ? ಸಸಿಕಾಂತ್ ಸೆಂಥಿಲ್ | ಹಿಂದೆ ಜನಪರ ಅಧಿಕಾರಿ, ಈಗ ಕಾಂಗ್ರೆಸ್ ಅಭೂತಪೂರ್ವ ಗೆಲುವಿನ ರೂವಾರಿ
ಪ್ರಕರಣದ ಹಿನ್ನೆಲೆ
ಪುನೀತ್ ಕೆರೆಹಳ್ಳಿ ಮತ್ತು ಆತನ ಸಹಚರರು 2023ರ ಮಾರ್ಚ್ 31ರಂದು ಮಂಡ್ಯದ ಕಡೆಯಿಂದ ಬರುತ್ತಿದ್ದ ಜಾನುವಾರು ಸಾಗಣೆ ವಾಹನವೊಂದನ್ನು ಕನಕಪುರದ ಸಾತನೂರು ಪೊಲೀಸ್ ಠಾಣೆ ಸಮೀಪ ಅಡ್ಡಗಟ್ಟಿ ವಾಹನದಲ್ಲಿದ್ದವರ ಮೇಲೆ ಹಲ್ಲೆ ನಡೆಸಿದ್ದರು.
ಏಪ್ರಿಲ್ 1ರಂದು ಬೆಳಗ್ಗೆ ಘಟನಾ ಸ್ಥಳದಿಂದ ಅಂದರೆ ಪೊಲೀಸ್ ಠಾಣೆಯಿಂದ 100 ಮೀಟರ್ ದೂರದಲ್ಲಿ ಇದ್ರೀಸ್ ಪಾಷ ಶವ ಪತ್ತೆಯಾಗಿತ್ತು. ಪುನೀತ್ ಮತ್ತು ಸಹಚರರಿಂದ ಇದ್ರೀಸ್ ಪಾಷ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿ ಇದ್ರೀಸ್ ಪಾಷ ಸಹೋದರ ಯೂನುಸ್ ಪಾಷ ದೂರು ನೀಡಿದ್ದರು.
ಈ ದೂರು ಆಧರಿಸಿ ಆರೋಪಿಗಳ ವಿರುದ್ಧ ಸಾತನೂರು ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 302, 324, 341, 504, 506 ಜೊತೆಗೆ 34 ಅಡಿ ಪ್ರಕರಣ ದಾಖಲಾಗಿತ್ತು. ಬಳಿಕ ಆರೋಪಿಗಳನ್ನು ರಾಜಸ್ಥಾನದಲ್ಲಿ ಪೊಲೀಸರು ಏಪ್ರಿಲ್ 5ರಂದು ಬಂಧಿಸಿದ್ದರು.