‘ದಲಿತರು ಬರುವರು ದಾರಿ ಬಿಡಿ, ದಲಿತರ ಕೈಗೆ ರಾಜ್ಯ ಕೊಡಿ..’ – ಇದು ದಲಿತ ಚಳುವಳಿ ದೇಶದಲ್ಲಿ ಅಬ್ಬರಿಸುತ್ತಿದ್ದ ಸಮಯದಲ್ಲಿ ಕವಿ ಡಾ. ಸಿದ್ದಲಿಂಗಯ್ಯ ಅವರು ಬರೆದ ಕ್ರಾಂತಿಗೀತೆ ಸಾಲು. ಶೋಷಿತ ದಲಿತರು ಸಮಾನತೆ, ಸ್ವಾತಂತ್ರ್ಯ, ಸ್ವಾಭಿಮಾನದ ಬದುಕಿನೊಂದಿಗೆ ರಾಜ್ಯವಾಳಬೇಕು ಎಂಬುದು ಈ ಸಾರಿ ತಾತ್ಪರ್ಯ. ಆದರೆ, ವಾಸ್ತವ ಇಂದಿಗೂ ಘೋರವಾಗಿದೆ. ದಲಿತರ ಮೇಲಿನ ಶೋಷಣೆ ಹೆಚ್ಚುತ್ತಿದೆ. ದಲಿತರು ಬಂದರೆಂಬ ಕಾರಣಕ್ಕೆ ಹೋಟೆಲ್‌ಗಳನ್ನೇ ಮುಚ್ಚುವಂತಹ ಅಮಾನವೀಯ ಘಟನೆಗಳು ಕರ್ನಾಟಕದಲ್ಲಿಯೂ ನಡೆಯುತ್ತಿವೆ.
ದಲಿತರಿಗೆ ಹೋಟೆಲ್‌ಗಳು, ಕ್ಷೌರದ ಅಂಗಡಿಗಳಲ್ಲಿ ಪ್ರವೇಶ ನಿರಾಕರಿಸಿರುವ ಘಟನೆಗಳು ಧಾರವಾಡ, ಗದಗ, ದಾವಣಗೆರೆ, ಮಂಡ್ಯ ಜಿಲ್ಲೆಗಳಲ್ಲಿ ವರದಿಯಾಗಿವೆ. ಅಂತದ್ದೇ ಮತ್ತೊಂದು ಘಟನೆ ಕೊಪ್ಪಳ ಜಿಲ್ಲೆಯ ಹಾಲವರ್ತಿ ಗ್ರಾಮದಲ್ಲಿಯೂ ನಡೆದಿದೆ. ಗ್ರಾಮದಲ್ಲಿ ದಲಿತರು ಹೋಟೆಲ್‌ಗೆ ಬಂದರೆ, ಹೋಟೆಲ್ ಬಂದ್ ಮಾಡಲಾಗುತ್ತಿರುವ ಜಾತಿ ದೌರ್ಜನ್ಯದ ಘಟನೆ ಬೆಳಕಿಗೆ ಬಂದಿದೆ.
ಗ್ರಾಮದ ಸವರ್ಣೀಯರು ಹೋಟೆಲ್ ಮತ್ತು ಕ್ಷೌರದ ಅಂಗಡಿಗಳಿಗೆ ದಲಿತರು ಪ್ರವೇಶಿಸುದನ್ನು ತಡೆಯುತ್ತಿರುವ ಬಗ್ಗೆ ದಲಿತ ಯುವಕರು ಪ್ರಶ್ನಿಸಿದ್ದು, ಹೋಟೆಲ್ ಮತ್ತು ಕ್ಷೌರದ ಅಂಗಡಿಗಳ ಮಾಲೀಕರನ್ನು ಬುಧವಾರ ತರಾಟೆಗೆ ತೆಗೆದುಕೊಂಡಿದ್ದಾರೆ. ಗ್ರಾಮ ಪಂಚಾಯತಿಗೆ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಿದ್ದಾರೆ.
ದಲಿತರಿಗೆ ಹೋಟೆಲ್‌ಗಳಿಗೆ ‘ಬಳಸಿ ಬಿಸಾಡುವ’ ತಟ್ಟೆಗಳನ್ನು ನೀಡುತ್ತಾರೆ. ಪ್ರಬಲ ಜಾತಿಯವರಿಗೆ ಉಕ್ಕಿನ ತಟ್ಟೆಯಲ್ಲಿ ಆಹಾರ ಕೊಡುತ್ತಾರೆ. ಕ್ಷೌರದ ಅಂಗಡಿಗಳಲ್ಲಿ ದಲಿತರಿಗೆ ಕ್ಷೌರ ಮಾಡುವುದಿಲ್ಲ. ಈ ದೌರ್ಜನ್ಯವನ್ನು ಪ್ರಶ್ನಿಸಿದರೆ, ಹೋಟೆಲ್, ಅಂಗಡಿಗಳನ್ನೇ ಮುಚ್ಚಿಕೊಂಡು ಹೋಗುತ್ತಾರೆ ಎಂದು ದಲಿತ ಯುವಕರು ಕಿಡಿಕಾರಿದ್ದಾರೆ.
“ದಲಿತ ಯುವಕನೊಬ್ಬ ನಡೆಯಲಾಗದ ಪರಸ್ಥಿತಿಯಲ್ಲಿದ್ದಾನೆ. ಆತನಿಗೆ ಕ್ಷೌರ ಮಾಡುವಂತೆ ಮನವಿ ಮಾಡಿದರೂ, ಕ್ಷೌರದ ಅಂಗಡಿ ಮಾಲೀಕ, ಕ್ಷೌರ ಮಾಡದೆ, ಅಂಗಡಿಗೆ ಬೀಗ ಹಾಕಿಕೋಂಡು ಹೋದರು. ಗ್ರಾಮದ ಕರೆಯ ನೀರನ್ನು ದಲಿತರು ಮುಟ್ಟಲು ಬಿಡುವುದಿಲ್ಲ. ಕೆರೆಗೆ ದಲಿತರು ಬರದಂತೆ ನೋಡಿಕೊಳ್ಳಲು ಕಾವಲುಗಾರರನ್ನು ನೇಮಿಸಲಾಗಿದೆ” ಎಂದು ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಘಟನೆ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಗುರುವಾರ ಗ್ರಾಮಕ್ಕೆ ಭೇಟಿ ನೀಡಿ, ಹೋಟೆಲ್ ಮತ್ತು ಕ್ಷೌರದ ಅಂಗಡಿಯ ಮಾಲೀಕನ್ನು ವಿಚಾರಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಗ್ರಾಮದಲ್ಲಿ ಸಭೆ ನಡೆಸುತ್ತೇವೆ” ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, “ಹೋಟೆಲ್‌ಗಳಲ್ಲಿ ದಲಿತರಿಗೆ ಪ್ರವೇಶ ನೀಡದೇ ಇರುವುದು ಅಕ್ಷಮ್ಯ. ಜಾತಿ ದೌರ್ಜನ್ಯ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದ್ದಾರೆ.