ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಜೊತೆ ನಾನೇ ಖುದ್ದು ಮಾತಾಡಿದ್ದೇನೆ. ತಮ್ಮ ರಾಜ್ಯದಲ್ಲಿ ಅಕ್ಕಿ ದಾಸ್ತಾನು ಇಲ್ಲವೆಂದು ಅವರು ಹೇಳಿದ್ದಾರೆ. ಹೀಗಾಗಿ ಆಂಧ್ರಪ್ರದೇಶ ಸರ್ಕಾರದ ಜೊತೆ ಚರ್ಚಿಸಲು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಹೇಳಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರಿನ ಶಕ್ತಿಭವನದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿ, “ಛತ್ತೀಸ್‌ಘಡ ರಾಜ್ಯದವರು 1.5 ಮೆಟ್ರಿಕ್ ಲಕ್ಷ ಟನ್ ಅಕ್ಕಿ ಕೊಡಲು ಸಮ್ಮತಿಸಿದ್ದಾರೆ. ಆದರೆ ದರ ಸ್ವಲ್ಪ ದುಬಾರಿ ಇದೆ. ಸಾಗಣೆ ವೆಚ್ಚವೂ ಹೆಚ್ಚಾಗಲಿದೆ. ಈ ಬಗ್ಗೆ ಇಂದು (ಜೂ.17) ಸಂಜೆ ಸಭೆ ನಡೆಸಿ ನಿರ್ಧಾರ ತಿಳಿಸುತ್ತೇವೆ” ಎಂದರು.
ಕಮಿಷನ್‌ಗಾಗಿ ಹೊರ ರಾಜ್ಯಗಳಿಂದ ಅಕ್ಕಿ ಖರೀದಿಸುತ್ತಿದ್ದಾರೆ ಎಂದು ಶಾಸಕ ಬಿ ವೈ ವಿಜಯೇಂದ್ರ ಆರೋಪಿಸಿದ್ದಾರಲ್ಲ ಎಂದು ಪತ್ರಕರ್ತರು ಪ್ರಶ್ನಿಸಿದಾಗ, “ರಾಜ್ಯದಲ್ಲೇ ಅಕ್ಕಿ ಸಿಗುವುದಿದ್ದರೆ ವಿಜಯೇಂದ್ರ ಅವರೇ ಮುಂದೆ ನಿಂತು ಕೊಡಿಸಲಿ. ಅವರ ಮಿಲ್‌ನಲ್ಲಿ ಎಷ್ಟು ಅಕ್ಕಿ ಇದೆ ಅದನ್ನೂ ಕೊಡಲಿ. ಬಿಜೆಪಿಯವರು ಸುಮ್ಮನೆ ಮಾತನಾಡುತ್ತಾರೆ” ಎಂದು ಗರಂ ಆದರು.