- ಬಿಜೆಪಿ ರಾಜ್ಯ ಕಚೇರಿಯಲ್ಲಿ ಪ್ರಮುಖ ನಾಯಕರ ಸಭೆ
- ಮುರುಗೇಶ ನಿರಾಣಿ, ರೇಣುಕಾಚಾರ್ಯ ಸಭೆಗೆ ಗೈರು
ಬಿಜೆಪಿಯಲ್ಲಿ ನಾಯಕರ ಬಹಿರಂಗ ಹೇಳಿಕೆಗೆ ಸಂಬಂಧಪಟ್ಟಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಬಿಜೆಪಿ ರಾಜ್ಯ ಕಚೇರಿಯಲ್ಲಿ ಶುಕ್ರವಾರ ಪ್ರಮುಖ ನಾಯಕರ ಸಭೆ ನಡೆಯಿತು.
ಆದರೆ, ಸಭೆಗೆ ಹಾಜರು ಇರಬೇಕಾದ ಕೆಲವು ನಾಯಕರು ಗೈರಾಗಿದ್ದರು. ಅದರಲ್ಲಿ ಮುರುಗೇಶ ನಿರಾಣಿ, ಈಶ್ವರ್ ಸಿಂಗ್ ಠಾಕೂರ್, ರಮೇಶ್ ಜಿಗಜಿಣಗಿ ಹಾಗೂ ರೇಣುಕಾಚಾರ್ಯ ಇಂದಿನ ಸಭೆಗೆ ಬಂದಿರಲಿಲ್ಲ.
ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಯಿ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ನಳಿನ್ ಕುಮಾರ್ ಕಟೀಲ್ ಜೊತೆ ವೇದಿಕೆ ಹಂಚಿಕೊಂಡು ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. ಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಶಾಸಕರಾದ ಗೋವಿಂದ ಕಾರಜೋಳ, ಎ ಎಸ್ ಪಾಟೀಲ್ ನಡಹಳ್ಳಿ, ವೀರಣ್ಣ ಚರಂತಿಮಠ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.
ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಬಿ ಎಸ್ ಯಡಿಯೂರಪ್ಪ, “ಪಕ್ಷಕ್ಕೆ ಮುಜುಗರ ಆಗುವ ಹೇಳಿಕೆಗಳನ್ನು ಯಾರೂ ಕೊಡಬಾರದು. ಯಾರು ಆ ರೀತಿ ಮಾತನಾಡಿದ್ದಾರೋ ಅವರ ಜೊತೆ ಚರ್ಚಿಸಿ ಮುಂದೆ ಇಂಥ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸುತ್ತೇವೆ. ಇದು ಮುಂದುವರಿದರೆ ಸೂಕ್ತ ಕ್ರಮವನ್ನು ಕೈಗೊಳ್ಳುವ ತೀರ್ಮಾನ ಮಾಡಿದ್ದೇವೆ” ಎಂದು ತಿಳಿಸಿದರು.
“ಬಿಜೆಪಿ ಚುನಾಯಿತ ಪ್ರತಿನಿಧಿಗಳು ಸದನದ ಒಳಗೂ ಹೋರಾಟ ಮಾಡಲಿದ್ದಾರೆ. ಕಾಂಗ್ರೆಸ್ ಪಕ್ಷವು ಮನೆಮನೆಗೆ ಹೋಗಿ ಸಿದ್ದರಾಮಯ್ಯ, ಶಿವಕುಮಾರ್ ಅವರು ಸಹಿ ಮಾಡಿ ಕೊಟ್ಟ ಗ್ಯಾರಂಟಿ ಕಾರ್ಡಿನ ಅಂಶಗಳನ್ನು ಚಾಚೂತಪ್ಪದೆ ಅನುಷ್ಠಾನಕ್ಕೆ ತರಲು ಅವರು ಆಗ್ರಹಿಸಿದರು. ಈ ಕುರಿತು ಪಕ್ಷದ ಮುಖಂಡರ ಸಭೆಯಲ್ಲಿ ಚರ್ಚಿಸಲಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಜನತಂತ್ರವೆಂಬುದು ಭಾರತದ ವಂಶವಾಹಿಯಲ್ಲಿದೆಯೇ ಮೋದಿಯವರೇ, ಹೌದೇ?
ಗೈರಾದವರು ವಿವರಣೆ ಕೊಡ್ತೀವಿ ಅಂದಿದ್ದಾರೆ
ಇದೇ ವೇಳೆ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮಾತನಾಡಿ, “ಸಭೆಯಲ್ಲಿ ಪಕ್ಷ ಬಲವರ್ಧನೆಗೆ ನಾವು ಇದ್ದೇವೆ. ಹೀಗಾಗಿ ಸಭೆ ಕರೆಯಿರಿ ಎಂದು ರಾಜ್ಯಾಧ್ಯಕ್ಷರು, ಮಾಜಿ ಸಿಎಂ ಯಡಿಯೂರಪ್ಪ ಸೂಚಿಸಿದ್ದರು. ಪ್ರಭು ಚವ್ಹಾಣ್, ಮುರುಗೇಶ ನಿರಾಣಿ, ಈಶ್ವರ್ ಸಿಂಗ್ ಠಾಕೂರ್, ರಮೇಶ್ ಜಿಗಜಿಣಗಿ, ರೇಣುಕಾಚಾರ್ಯ ಇಂದಿನ ಸಭೆ ಮುಂದೆ ಬಂದಿಲ್ಲ. ಈ ವಾರದಲ್ಲಿ ಬಂದು ವಿವರಣೆ ಕೊಡ್ತೀವಿ ಎಂದು ಹೇಳಿದ್ದಾರೆ” ಎಂದು ತಿಳಿಸಿದರು.
“ಚುನಾವಣೆಯಲ್ಲಿ ಬಿಜೆಪಿ ಯಾಕೆ ಸೋತಿದೆ ಎಂದು ಕೆಲವರು ಬಹಿರಂಗ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಗಳಿಂದ ಪಕ್ಷಕ್ಕೆ ಮುಜುಗರ ಉಂಟಾಗಿದೆ, ಪಕ್ಷದ ವಿರುದ್ಧ ಹೇಳಿಕೆ ನೀಡಿರುವ ಆಡಿಯೋ ವಿಡಿಯೋ ಮುಂದಿಟ್ಟುಕೊಂಡು ಸಭೆ ಮಾಡಲಾಗಿದೆ. ಪಕ್ಷದ ವಿರುದ್ಧ ಹೇಳಿಕೆ ನೀಡಿದವರನ್ನು ಸಭೆಗೆ ಕರೆಯಲಾಗಿತ್ತು. 11 ಜನ ಪಕ್ಷದ ವಿರುದ್ಧ ಹೇಳಿಕೆ ನೀಡಿದ್ದಾರೆ. ಸಭೆಗೆ 11 ಜನರಿಗೂ ಕರೆದಿದ್ವಿ ಅದರಲ್ಲಿ 5 ಜನ ಸಭೆಗೆ ಬಂದಿಲ್ಲ” ಎಂದರು.
ಸೋಲಿನಿಂದ ವಿಚಿಲಿತರಾಗಿ ಮಾತನಾಡಿದ್ದಾರೆ
“ಪಕ್ಷದ ಸೋಲಿನ ಬಗ್ಗೆ ಬಹಿರಂಗ ಹೇಳಿಕೆ ನೀಡುತ್ತಿರುವ ಕೆಲವು ನಾಯಕರನ್ನು ಒಟ್ಟಿಗೆ ಕರೆದು ಮಾತನಾಡಲಾಗುತ್ತಿದೆ. ಕೆಲವು ನಾಯಕರು ಸೋಲಿನಿಂದ ವಿಚಲಿತರಾಗಿದ್ದಾರೆ. ಅದಕ್ಕೆ ಹೀಗೆ ಮಾತನಾಡುತ್ತಿದ್ದಾರೆ. ಏನೇ ಹೇಳಿಕೆ ಇದ್ದರೂ ಅವರೆಲ್ಲರೂ ಪಕ್ಷದ ವೇದಿಕೆಯಲ್ಲಿ ಹೇಳಬೇಕು ಹೊರತು ಹೀಗೆ ಮಾಧ್ಯಮಗಳ ಮುಂದೆ ಬಂದು ಹೇಳುವುದು ಸರಿಯಲ್ಲ. ಸಾವಿರಾರು ಜನ ಬಿಜೆಪಿ ಕಾರ್ಯಕರ್ತರ ಮನಸ್ಸಿಗೆ ನೋವಾಗಿದೆ. ಈ ಬಗ್ಗೆ ಪಕ್ಷ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ” ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.