ಪಕ್ಷ ಬಯಸಿದರೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ನಾನು ಚುನಾವಣೆಗೆ ನಿಲ್ಲಲು ಸಿದ್ಧನಿದ್ದೇನೆ. ಇಲ್ಲದಿದ್ದರೆ ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ನಾನು ಅವರನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಈಗಾಗಲೇ 6,000 ಮಂದಿ ಬಿಜೆಪಿಯ ಕಾರ್ಯಕರ್ತರು ಹಾಗೂ ಮುಖಂಡರನ್ನು ಭೇಟಿ ಮಾಡಿದ್ದೇನೆ. ಪಕ್ಷಕ್ಕೆ ನಾನು ಅರ್ಹ ಎಂದು ಕಂಡರೆ ನನಗೆ ಟಿಕೆಟ್ ಕೊಡುತ್ತದೆ. ಬೇರೆ ಅರ್ಹರು ಇದ್ದರೆ ಅವರಿಗೆ ಟಿಕೆಟ್ ನೀಡುತ್ತದೆ. ಕಾರ್ಯಕರ್ತರು ಮತ್ತು ಜನರ ಅಭಿಪ್ರಾಯ ನನ್ನ ಕಡೆಗೆ ಇದೆ ಎಂಬ ಮಾಹಿತಿ ಇದೆ. ಟಿಕೆಟ್‌ಗೆ ಎಲ್ಲರಿಗೂ ಪ್ರಯತ್ನ ಮಾಡುವ ಹಕ್ಕು ಇದೆ. ನಾನು ಆಕಾಂಕ್ಷಿ ಎಂದು ನಾಯಕರ ಬಳಿ ಹೇಳಿದ್ದೇನೆ. ಚುನಾವಣೆಯಲ್ಲಿ ಎದುರಾಳಿಯನ್ನು ಲಘುವಾಗಿ ಪರಿಗಣಿಸುವುದು ಸರಿಯಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಮಹಾತ್ಮಾ ಗಾಂಧಿಯವರ 76ನೇ ಪುಣ್ಯತಿಥಿ, ಹುತಾತ್ಮ ದಿನ ಆಚರಣೆ
“ಮೀನುಗಾರರ ಸಮಸ್ಯೆಯನ್ನು ಸರ್ಕಾರಗಳ ಮುಂದೆ ಸಮರ್ಥವಾಗಿ ಮಂಡಿಸುವ ಅನುಭವ ಜನಪ್ರತಿನಿಧಿ ಆದವರಿಗೆ ಬೇಕಾಗುತ್ತದೆ. ಮೀನುಗಾರರು ನನ್ನ ಮೇಲೆ ವಿಶ್ವಾಸ ಇಟ್ಟು ನನಗೆ ಟಿಕೆಟ್ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಬಿಜೆಪಿ ಹಿಂದುಳಿದ ವರ್ಗಕ್ಕೆ ನ್ಯಾಯ ಒದಗಿಸಿ ಕೊಡುತ್ತದೆಂಬ ವಿಶ್ವಾಸ ಇದೆ. ಗುಜರಾತ್‌ನಿಂದ ಪಶ್ಚಿಮ ಬಂಗಾಳದವರೆಗೆ ಒಬ್ಬನೇ ಒಬ್ಬ ಮೀನುಗಾರ ಸಂಸದ ಇಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.