ಕೊಪ್ಪಳದ ಮುಖ್ಯ ಶಿಕ್ಷಕರೊಬ್ಬರು ಮಕ್ಕಳಲ್ಲಿ ಓದುವ ಆಸಕ್ತಿ ಮೂಡಿಸಲು ವಿಶಿಷ್ಟ ಪ್ರಯೋಗವೊಂದನ್ನು ಮಾಡಿದ್ದಾರೆ. ಪ್ರತಿಭಾವಂತ ಮಕ್ಕಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ ಕಲ್ಪಿಸಿಕೊಡಲಿದ್ದಾರೆ.
ತಾಲೂಕಿನ ಬಹದ್ದೂರಬಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬೀರಪ್ಪ ಅಂಡಗಿ ಚಿಲವಾಡಗಿ ಇಂಥದ್ದೊಂದು ವಿಶೇಷ ಕಾರ್ಯಕ್ರಮಕ್ಕೆ ಮುಂದಾಗಿದ್ದಾರೆ. 24 ವಿದ್ಯಾರ್ಥಿಗಳನ್ನು ಹೈದರಾಬಾದ್‌ಗೆ ವಿಮಾನದ ಮೂಲಕ ಕರೆದುಕೊಂಡು ಹೋಗಲಿದ್ದು, ಈ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು 5ರಿಂದ 8ನೇ ತರಗತಿವರೆಗಿನ ಮಕ್ಕಳಿಗೆ ಲಿಖಿತ ಪರೀಕ್ಷೆ ನಡೆಸಿದ್ದಾರೆ.
ತಾಲೂಕಿನ ಹ್ಯಾಟಿ ಮುಂಡರಗಿ ಶಾಲೆಯ ಶಿಕ್ಷಕ ಕೆ ಎಂ ಅಲಿ ಸ್ವತಃ ಪ್ರಶ್ನೆಪತ್ರಿಕೆ ತಯಾರಿಸಿದ್ದಾರೆ. ಪರೀಕ್ಷೆಯಲ್ಲಿ ಉತ್ತಮವಾಗಿ ಬರೆದ ಐದರಿಂದ ಎಂಟನೇ ತರಗತಿಯಲ್ಲಿನ ತಲಾ ಆರು ಜನ ವಿದ್ಯಾರ್ಥಿಗಳನ್ನು ವಿಮಾನದಲ್ಲಿ ಕರೆದುಕೊಂಡು ಹೋಗಲಾಗುತ್ತದೆ.
ಇದನ್ನೂ ಓದಿ: ಕೊಪ್ಪಳ | ʼಸದೃಢ ಭಾರತ ನಿರ್ಮಾಣಕ್ಕಾಗಿ ವ್ಯಕ್ತಿತ್ವ ವಿಕಸನ ಅಗತ್ಯʼ
‘ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಯಬೇಕು ಹಾಗೂ ಸ್ಪರ್ಧಾ ಮನೋಭಾವ ಮೂಡಬೇಕು ಎನ್ನುವ ಕಾರಣದಿಂದ ಲಿಖಿತ ಪರೀಕ್ಷೆಯಲ್ಲಿ ಉತ್ತಮವಾಗಿ ಬರೆದವರನ್ನು ವಿಮಾನದಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋಗಲಾಗುವುದು’ ಎಂದು ಬೀರಪ್ಪ ಅಂಡಗಿ ತಿಳಿಸಿದ್ದಾರೆ.