ಇತಿಹಾಸದಲ್ಲೇ ಮೊದಲ ಬಾರಿಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೊದಲ ಬಾರಿ ಕಂಬಳ ಆಯೋಜನೆ ಮಾಡಿದ್ದು, ಈ ನಡುವೆ ಬೃಹತ್ ಬೆಂಗಳೂರು ಮಹಾಮನಗರ ಪಾಲಿಕೆ ಆಯೋಜಕರಿಗೆ ಶಾಕ್ ನೀಡಿದೆ.
ಇತಿಹಾಸ ಪ್ರಸಿದ್ಧ ಕರಾವಳಿ ಕಂಬಳ ಉತ್ಸವಕ್ಕೆ ಶುಭ ಕೋರಿ ಅರಮನೆ ಮೈದಾನದ ಮುಂದೆ ಹಾಗೂ ಬಳ್ಳಾರಿ ರಸ್ತೆಯ ಪಕ್ಕದಲ್ಲಿ ಅನಧಿಕೃತ ಫ್ಲೆಕ್ಸ್ ಹಾಕಲಾಗಿತ್ತು. ಈ ಸಂಬಂಧ ಬಿಬಿಎಂಪಿಯು ಸದಾಶಿವನಗರ ಠಾಣೆಗೆ ದೂರು ನೀಡಿದೆ.
ಈ ಹಿನ್ನೆಲೆಯಲ್ಲಿ ಸದ್ಯ ಅರಮನೆ ಮೈದಾನದ ಸುತ್ತಮುತ್ತ ಹಾಕಿರುವ ಬ್ಯಾನರ್ ತೆರವುಗೊಳಿಸಲಾಗಿದೆ. ಅಲ್ಲದೆ ಬಿಬಿಎಂಪಿಯು ಆಯೋಜಕರಿಗೆ 50 ಸಾವಿರ ದಂಡ ವಿಧಿಸಿರುವುದಾಗಿ ವರದಿಯಾಗಿದೆ.
ಇದನ್ನು ಓದಿದ್ದೀರಾ? ಪೊಲೀಸ್ ಠಾಣೆಗಳು ರಿಯಲ್ ಎಸ್ಟೇಟ್ ‘ಸೆಟಲ್‌ಮೆಂಟ್’ ಕೇಂದ್ರಗಳಾಗಿವೆ: ಹೈಕೋರ್ಟ್ ಅಸಮಾಧಾನ
ಬೆಂಗಳೂರು ನಗರದಲ್ಲಿ ಅನಧಿಕೃತವಾಗಿ ಹಾಕಲಾಗುತ್ತಿರುವ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಗಳ ತಡೆಗೆ ಈ ಹಿಂದೆ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿತ್ತು. ಅನಧಿಕೃತ ಜಾಹೀರಾತು ಹಾವಳಿ ತಡೆಯಲು ಪಂಚವಾರ್ಷಿಕ ಯೋಜನೆ ಬೇಕೆ? ಫ್ಲೆಕ್ಸ್ ತೆರವಿಗೆ ಶುಭ ಮುಹೂರ್ತಕ್ಕಾಗಿ ಕಾಯುತ್ತಿದ್ದೀರಾ? ಎಂದು ಖಡಕ್ಕಾಗಿ ಪ್ರಶ್ನಿಸಿದ ನಂತರ ಬಿಬಿಎಂಪಿ ಎಚ್ಚರಗೊಂಡಿದೆ.
ಹೈಕೋರ್ಟ್‌ನ ಎಚ್ಚರಿಕೆಯ ಬಳಿಕ ಬೆಂಗಳೂರಿನಲ್ಲಿ ಯಾವುದೇ ಫ್ಲೆಕ್ಸ್, ಬ್ಯಾನರ್ ಹಾಕದಂತೆ ಬಿಬಿಎಂಪಿ ಎಚ್ಚರ ವಹಿಸುತ್ತಿದೆ. ಒಂದು ವೇಳೆ ಅನಧಿಕೃತ ಫ್ಲೆಕ್ಸ್ ಹಾಕಿದವರಿಗೆ 50 ಸಾವಿರ ದಂಡ ವಿಧಿಸುತ್ತಿದೆ. ಈ ಹಿಂದೆ ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿ ಬಳಿ ಕೆಪಿಸಿಸಿ ಹಾಕಿದ್ದ ಫ್ಲೆಕ್ಸ್‌ಗಳಿಗೂ ಬಿಬಿಎಂಪಿ 50 ಸಾವಿರ ದಂಡ ವಿಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.