ಇಶಾ ಫೌಂಡೇಶನ್‌ನಿಂದ ಸರಕಾರಿ ಜಮೀನು ಒತ್ತುವರಿ ಮಾಡಲಾಗಿದೆ, ಸರಕಾರಿ ಜಾಗಕ್ಕೆ ಅಕ್ರಮವಾಗಿ ಟೋಲ್ ವಸೂಲಿ ಮಾಡಲಾಗುತ್ತಿದೆ, ಇಶಾಗೆ ಬರುವ ಪ್ರವಾಸಿಗರಿಂದ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂದು ಆರೋಪಿಸಿ ಶನಿವಾರ ಆವಲಗುರ್ಕಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಬೃಹತ್ ಪ್ರತಿಭಟನೆ ನಡೆಸಿದರು.
ಶನಿವಾರ ಬೆಳಗ್ಗೆ ಇಶಾ ಫೌಂಡೇಶನ್ ಬಳಿ ಜಮಾಯಿಸಿದ 500ಕ್ಕೂ ಅಧಿಕ ಮಂದಿ ರೈತ ಸಂಘ ಮತ್ತು ದಲಿತ ಮುಖಂಡರು ಸ್ಥಳೀಯ ರೈತರ ಮೇಲೆ ದೌರ್ಜನ್ಯ ಎಸಗುತ್ತಿರುವ ಇಶಾ ಫೌಂಡೇಶನ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ಈ ವೇಳೆ ಮಾತನಾಡಿದ ಸ್ಥಳೀಯ ಮುಖಂಡರು, ಚಿಕ್ಕಬಳ್ಳಾಪುರ ತಾಲೂಕಿನ ಆವಲಗುರ್ಕಿ ಬಳಿ ಇಶಾ ಫೌಂಡೇಶನ್ ಸಂಸ್ಥೆಯಿಂದ ಸರಕಾರಿ ಭೂಮಿ ಒತ್ತುವರಿ ಮಾಡಲಾಗಿದೆ. ಸರ್ವೆ ನಂಬರ್ 174, 175 ಮತ್ತು 137ರಲ್ಲಿ ಸಾಕಷ್ಟು ಭೂಮಿಯನ್ನು ಒತ್ತುವರಿ ಮಾಡಿ ರಸ್ತೆ ನಿರ್ಮಿಸಲಾಗಿದೆ. ಅಲ್ಲದೆ ಟೋಲ್ ನಿರ್ಮಿಸಿ ಇಲ್ಲಿಗೆ ಬರುವ ವಾಹನಗಳಿಂದ ಟೋಲ್ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಇದನ್ನೂ ಓದಿ : ಇಶಾ ಫೌಂಡೇಶನ್ ಅಕ್ರಮಗಳ ತನಿಖೆಗೆ ಹೈಕೋರ್ಟ್ ಆದೇಶ
ಒತ್ತುವರಿ ಮಾಡಿರುವ ಸರಕಾರಿ ಭೂಮಿಯನ್ನು ವಶಕ್ಕೆ ಪಡೆಯಬೇಕು. ಸರಕಾರಿ ಜಾಗಕ್ಕೆ ಟೋಲ್ ವಸೂಲಿ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು. ರಾತ್ರಿ ವೇಳೆ ಇಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಂದ ಸ್ಥಳೀಯ ರೈತರು ಬೇಸತ್ತು ಹೋಗಿದ್ದು, ಎಲ್ಲಾ ಅಕ್ರಮಗಳಿಗೂ ಶೀಘ್ರ ಬ್ರೇಕ್ ಹಾಕಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಚಿಕ್ಕಬಳ್ಳಾಪುರ ತಹಶೀಲ್ದಾರ್ ಅನಿಲ್, ಅರಣ್ಯ ಭೂಮಿ ಒತ್ತುವರಿಯನ್ನು ತೆರವುಗೊಳಿಸುವಂತೆ ಇಶಾ ಫೌಂಡೇಶನ್ ಅವರಿಗೆ ನೋಟೀಸ್ ನೀಡಲಾಗಿದೆ. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.