ಅತ್ತಿಬೆಲೆ ಪಟಾಕಿ ಗೋದಾಮಿನಲ್ಲಿ ಬೆಂಕಿ ಅವಘಡ ಸಂಭವಿಸಿ 14 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಈ ಘಟನೆ ಬಳಿಕ ಎಚ್ಚೆತ್ತ ಅಧಿಕಾರಿಗಳು ದೇವನಹಳ್ಳಿ, ಚಿಕ್ಕಮಗಳೂರು ಸೇರಿದಂತೆ ಕೆಲ ಕಡೆ ದಾಳಿ ನಡೆಸಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಲಕ್ಷಾಂತರ ಮೌಲ್ಯದ ಪಟಾಕಿಯನ್ನು ಬುಧವಾರ ಜಪ್ತಿ ಮಾಡಿದ್ದಾರೆ.
ಅಗ್ನಿ ದುರಂತದ ಬಳಿಕ ಮುಖ್ಯಮಂತ್ರಿ ಅವರು ಸಭೆ ನಡೆಸಿ ಅಧಿಕಾರಿಗಳು ಪಟಾಕಿ ಮಳಿಗೆಗಳ ಮೇಲೆ ಕಣ್ಣಿಡಲು ಸೂಚನೆ ನೀಡಿದ್ದರು. ಅದರಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನಲ್ಲಿ ಅಧಿಕಾರಿಗಳು ಪಟಾಕಿ ಮಳಿಗೆಗಳ ಮೇಲೆ ದಾಳಿ ಮಾಡಿದ್ದಾರೆ.
ದೇವನಹಳ್ಳಿ ತಹಶೀಲ್ದಾರ್, ವಿಜಯಪುರ ಪೊಲೀಸರು ಕಾರ್ಯಾಚರಣೆ ನಡೆಸಿ ದೇವನಹಳ್ಳಿ ಪಟ್ಟಣ, ಚನ್ನರಾಯಪಟ್ಟಣ ಮತ್ತು ವಿಜಯಪುರದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಲಕ್ಷಾಂತರ ಮೌಲ್ಯದ ಪಟಾಕಿ ಜಪ್ತಿ ಮಾಡಿದ್ದಾರೆ.
ವಿಜಯಪುರದಲ್ಲಿ ಎಂಟಿಆರ್ ರಮೇಶ್ ಎಂಬುವವನಿಗೆ ಸೇರಿದ ಪಟಾಕಿ ಗೋದಾಮಿನ ಮೇಲೆ ತಹಶಿಲ್ದಾರ್ ಶಿವರಾಜ್, ಇನ್ಸ್ಪೆಕ್ಟರ್ ಪ್ರಶಾಂತ್ ನೇತೃತ್ವದ ತಂಡ ದಾಳಿ ನಡೆಸಿ ದೀಪಾವಳಿ ಹಬ್ಬಕ್ಕೆ ಮಾರಾಟ ಮಾಡಲು ಅಕ್ರಮವಾಗಿ ಗೋದಾಮಿನಲ್ಲಿ ದಾಸ್ತಾನು ಮಾಡಲಾಗಿದ್ದ ಸುಮಾರು ₹25 ಲಕ್ಷ ಮೌಲ್ಯದ ಪಟಾಕಿ ವಶಕ್ಕೆ ಪಡೆಯಲಾಗಿದೆ. ಪೊಲೀಸರು ದಾಳಿ ಮಾಡುತ್ತಿದ್ದಂತೆ ಗೋದಾಮಿನ ಮಾಲೀಕ ಪರಾರಿಯಾಗಿದ್ದಾನೆ.
ಚಿಕ್ಕಮಗಳೂರು ನಗರದ ಗೋದಾಮಿನ ಮೇಲೆ ಪೊಲೀಸರು ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪಟಾಕಿಗಳನ್ನು ಜಪ್ತಿ ಮಾಡಿದ್ದಾರೆ. ಚಿಕ್ಕಮಗಳೂರು ನಗರ, ಬಸವನಹಳ್ಳಿ ಠಾಣೆಯ ಪೊಲೀಸರು ದಾಳಿ ನಡೆಸಿ ಪರವಾನಗಿ ಪಡೆಯದೆ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ₹7 ಲಕ್ಷದ 60 ಸಾವಿರ ಮೌಲ್ಯದ ಪಟಾಕಿ ವಶಕ್ಕೆ ಪಡೆದಿದ್ದಾರೆ.
ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮ್ಟೆ ಸೂಚನೆ ಮೇರೆಗೆ ಶರೀಫ್ ಗಲ್ಲಿ, ಬಿ.ಎಮ್ ರಸ್ತೆ, ಹಾಲೆನಹಳ್ಳಿ ಬಳಿ ಇರುವ ಗೋದಾಮಗಳ ಮೇಲೆ ದಾಳಿ ನಡೆದಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | 18 ಮಾದರಿಯಲ್ಲಿ ಸೈಬರ್ ಕ್ರೈಂ; ಬರೋಬ್ಬರಿ ₹470 ಕೋಟಿ ವಂಚನೆ
ರಾಜಕೀಯ ಕಾರ್ಯಕ್ರಮ, ಮೆರವಣಿಗೆ, ಮದುವೆ, ಗಣೇಶ ಹಬ್ಬ, ಸೇರಿದಂತೆ ಇತರೆ ಕಾರ್ಯಕ್ರಮಗಳಲ್ಲಿ ಯಾವುದೇ ರೀತಿಯ ಪಟಾಕಿ ಬಳಕೆ ಮಾಡದಂತೆ ಸರ್ಕಾರ ಆದೇಶ ಹೊರಡಿಸಿದೆ. ದೀಪಾವಳಿ ಹಬ್ಬದಂದು ಕೇವಲ ಹಸಿರು ಪಟಾಕಿಯನ್ನಷ್ಟೇ ಸಿಡಿಸಿ ಹಬ್ಬ ಆಚರಿಸಲು ಸರ್ಕಾರ ಸಲಹೆ ನೀಡಿದೆ.