ಬೀದರ್ ಭಾರತೀಯ ವಾಯುಪಡೆ ತರಬೇತಿ ಕೇಂದ್ರಕ್ಕೆ ಸೇರಿದ ಒಂಬತ್ತು ಸೂರ್ಯಕಿರಣ ವಿಮಾನಗಳ ಏರೋಬ್ಯಾಟಿಕ್ ತಂಡದಿಂದ ಶನಿವಾರ ಬಹಮನಿ ಕೋಟೆ ಮೇಲೆ ಆಯೋಜಿಸಿದ ಏರ್ ಶೋ ನೋಡುಗರ ಕಣ್ಮನ ಸೆಳೆಯಿತು.

ಸೂರ್ಯಕಿರಣ ವಿಮಾನಗಳ ಟೀಂ ಲೀಡರ್ ಗ್ರುಪ್ ಕ್ಯಾಪ್ಟನ್ ಗುರುಪ್ರಿತ್ ಸಿಂಗ್ ದಿಲ್ಲೋನ್ ನೇತೃತ್ವದಲ್ಲಿ ನಡೆದ ಏರ್ ಶೋ ಕಾರ್ಯಕ್ರಮದಲ್ಲಿ 9 ಸೂರ್ಯಕಿರಣ ವಿಮಾನಗಳು ವಿವಿಧ ರೀತಿಯಲ್ಲಿ ಆಕರ್ಷಕ ಪ್ರದರ್ಶನ ನೋಡುಗರನ್ನು ಮಂತ್ರಮುಗ್ದಗೊಳಿಸಿತು.

ಬೀದರ್ ನಗರದ ಬಹಮನಿ ಕೋಟೆಯ ಮೇಲೆ ಲೋಹದ ಹಕ್ಕಿಗಳ ಚಿತ್ತಾರ ಕಂಡ ವಿವಿಧ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಸಂಭ್ರಮಪಟ್ಟರು.
ಸೂರ್ಯಕಿರಣ ವಿಮಾನಗಳು ಆಕಾಶದಲ್ಲಿ ಮೇಲಿನಿಂದ ಕೆಳಗೆ. ಪರಸ್ಪರ ಮುಖಾಮುಖಿ ಕ್ರಾಸಿಂಗ್, ಬ್ಯಾರಲ್ ರೋಲ್ ಸೇರಿದಂತೆ ಕೇಸರಿ, ಬಿಳಿ, ಹಸಿರು ಬಣ್ಣ ಹಾಗೂ ವಿವಿಧ ವೈಮಾನಿಕ ಪ್ರದರ್ಶನ ನೋಡುಗರನ್ನು ಮೂಕವಿಸ್ಮಿತಗೊಳಿಸಿ ಆಕಾಶದಲ್ಲಿ ಚಿತ್ತಾರಗಳನ್ನು ಮೂಡಿಸಿದವು. ಬಾನಂಗಳದಲ್ಲಿ ವಿಮಾನಗಳು ಯಾವ ದಿಕ್ಕಿನಿಂದ ಹಾರುತ್ತಿವೆ ಎನ್ನುವುದನ್ನು ಜನರು ಕುತೂಹಲದಿಂದ ವೀಕ್ಷಿಸುತ್ತಿದ್ದರು.

1996ರಲ್ಲಿ ಆರಂಭಿಸಲಾದ ಸೂರ್ಯಕಿರಣ ಏರೋಬ್ಯಾಟಿಕ್ ತಂಡದ ವಿಮಾನಗಳು ಇಲ್ಲಿಯವರೆಗೆ ಭಾರತ ಮಾತ್ರವಲ್ಲದೆ ಶ್ರೀಲಂಕಾ, ಸಿಂಗಾಪುರ್, ದುಬೈ ಸೇರಿದಂತೆ ಇತರೆ ದೇಶಗಳಲ್ಲಿ 600 ಕ್ಕಿಂತಲೂ ಹೆಚ್ಚಿನ ಪ್ರದರ್ಶನಗಳನ್ನು ನೀಡಿದೆ. 9 ವಿಮಾನಗಳ ಈ ಏರ್ ಕ್ರಾಪ್ಟ್ ತಂಡ ಹೊಂದಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರಿನಲ್ಲಿ ಯುವತಿಯ ಬರ್ಬರ ಹತ್ಯೆ: ದೇಹ ತುಂಡರಿಸಿ ಫ್ರಿಡ್ಜ್‌ನಲ್ಲಿಟ್ಟ ಕೊಲೆಗಾರ
ಏರ್ ಶೋ ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷ ಮೋಹ್ಮದ್ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ವಾಯುಪಡೆ ತರಬೇತಿ ಕೇಂದ್ರದ ಕಮೊಡೋರ್ ಪರಾಗಲಾಲ್, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಕುಟುಂಬ ಸಮೇತವಾಗಿ ಆಗಮಿಸಿ ವೀಕ್ಷಿಸಿದರು.