ರಾಜ್ಯ ಸರಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ 1ಕೋಟಿ ರೂ.ವರೆಗೆ ಮೀಸಲಾತಿ ಘೋಷಿಸಿದ್ದು, ಮೀಸಲಾತಿ ಮಿತಿಯನ್ನು 2ಕೋಟಿಗೆ ಹೆಚ್ಚಿಸಬೇಕೆಂದು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಮಹಾದೇವಸ್ವಾಮಿ ಆಗ್ರಹಿಸಿದರು.
ಕಲಬುರಗಿಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, “ಆರ್ಥಿಕವಾಗಿ ಅತ್ಯಂತ ಸಂಕಷ್ಟ ಎದುರಿಸುತ್ತಿರುವ ಎಸ್‌ಸಿ, ಎಸ್‌ಟಿ ಗುತ್ತಿಗೆದಾರರಿಗೆ ಮೀಸಲಾತಿ ಕಲ್ಪಿಸಬೇಕೆಂಬ ನೈಜ ಕಳಕಳಿವಿದ್ದರೆ ಗುತ್ತಿಗೆದಾರರಿಗೆ ಮೀಸಲಾತಿ ಮಿತಿ 2ಕೋಟಿಗೆ ಹೆಚ್ಚಳ ಮಾಡಬೇಕೆಂದು” ಒತ್ತಾಯಿಸಿದರು.
“2013ರಲ್ಲಿ ಎಸ್ ಸಿ-ಎಸ್ ಟಿ ಗುತ್ತಿಗೆದಾರರಿಗೆ 50 ಲಕ್ಷದವರೆಗೆ ಮೀಸಲಾತಿ ಘೋಷಿಸಿ 2017ರಲ್ಲಿ ಜಾರಿಗೆ ತರಲಾಯಿತು. ನಂತರ ಗುತ್ತಿಗೆ ಮೀಸಲಾತಿಯನ್ನು 1ಕೋಟಿಗೆ ಹೆಚ್ಚಳ ಮಾಡುವುದಾಗಿ 2018ರಲ್ಲಿ ಘೋಷಿಸಿ ಅದನ್ನು 2023ರಲ್ಲಿ ಜಾರಿಗೆ ತರಲಾಗಿದೆ. ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಗುತ್ತಿಗೆದಾರರನ್ನು ನೆನಪಿಸಿಕೊಳ್ಳುವ ತಂತ್ರಗಾರಿಕೆ ಬಿಡಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಘೋಷಣೆಗಳು ಕೇವಲ ಕಾಗದದ ಮೇಲಿದ್ದರೆ ಸಾಲದು. ಅದನ್ನು ಪಾರದರ್ಶಕವಾಗಿ ಅನುಷ್ಠಾನಗೊಳಿಸುವ ನೈತಿಕ ಜವಾಬ್ದಾರಿಯನ್ನು ಸರಕಾರ ನಿಭಾಯಿಸಬೇಕು. ಒಂದೆಡೆ, ಎಸ್‌ಸಿ, ಎಸ್‌ಟಿ ಗುತ್ತಿಗೆದಾರರಿಗೆ ಕಾಮಗಾರಿಗಳಲ್ಲಿ ಮೀಸಲಾತಿ ಘೋಷಿಸಿ, ಮತ್ತೊಂದೆಡೆ ಕಾಮಗಾರಿಗಳಲ್ಲಿ ಪ್ಯಾಕೇಜ್ ಮಾಡಲಾಗುತ್ತಿದೆ. ಹೀಗಾದರೆ ಎಸ್‌ಸಿ, ಎಸ್‌ಟಿ ಗುತ್ತಿಗೆದಾರರಿಗೆ ಮೀಸಲಾತಿಯ ಲಾಭ ಹೇಗೆ ಲಭಿಸುತ್ತದೆ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಅಂಗನವಾಡಿಗಿಲ್ಲ ಸ್ವಂತ ಕಟ್ಟಡ; ಬಯಲು ರಂಗಮಂದಿರದ ಕೊಠಡಿಯೇ ಗತಿ
ಈ ಸಂದರ್ಭದಲ್ಲಿ ಎಸ್‌ಸಿ, ಎಸ್‌ಟಿ ಗುತ್ತಿಗೆದಾರರ ಸಂಘದ ಕಲಬುರಗಿ ಜಿಲ್ಲಾಧ್ಯಕ್ಷ ಜೈಕುಮಾರ್ ದೇಗಾಂವಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.