ಬಡ ದಲಿತ ರೈತರನ್ನು ಒಕ್ಕಲೆಬ್ಬಿಸುತ್ತಿರುವ ಅರಣ್ಯ ಇಲಾಖೆ ಕ್ರಮವನ್ನು ಖಂಡಿಸಿ ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾ ಅರಣ್ಯ ಇಲಾಖೆ ಕಚೇರಿ ಎದುರು ಶುಕ್ರವಾರ ಅನಿರ್ದಿಷ್ಠಾವಧಿ ಧರಣಿ ಆರಂಭಿಸಿದ್ದಾರೆ.
ʼಸರ್ಕಾರದ ನಿಯಮಾನುಸಾರ ಕಳೆದ 40-50 ವರ್ಷಗಳಿಂದ ಭೂಮಿ ಉಳುಮೆ ಮಾಡಿಕೊಂಡು ಉಪ ಜೀವನ ನಡೆಸುತ್ತಿರುವ ಜಿಲ್ಲೆಯ ದಲಿತ ರೈತರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ವಿನಾಕಾರಣ ಕಿರುಕುಳ ನೀಡಿ ರೈತರ ಹೆಸರಿನಲ್ಲಿ ಇರುವ ಪಹಣಿ ಏಕಾಏಕಿ ರದ್ದುಗೊಳಿಸಿ ಅರಣ್ಯ ಇಲಾಖೆ ಎಂದು ನಮೂದಿಸಿದ್ದಾರೆ. ಇದರಿಂದ ಬಡ ರೈತರು ಅನ್ನದಾತರು ಅಕ್ಷರಶಃ ಕಂಗಾಲಾಗಿದ್ದಾರೆʼ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ʼ1978-79ರಿಂದ ದಲಿತ ಸಮುದಾಯದ ರೈತರು ಜಮೀನು ಉಳುಮೆ ಮಾಡುತ್ತಿದ್ದಾರೆ. ಸ್ವತಃ ಸರ್ಕಾರವೇ ಅವರಿಗೆ ಭೂಮಿ ಹಂಚಿಕೆ ಮಾಡಿದೆ. ಹೀಗಿರುವಾಗ ಅರಣ್ಯ ಇಲಾಖೆಯ ಅಧಿಕಾರಿಗಳು ಏಕಾಏಕಿ ಒಕ್ಕಲೆಬ್ಬಿಸುತ್ತಿರುವುದು ಎಷ್ಟು ಸರಿ. ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಸಿ ಅಧಿಕೃತವಾಗಿ ಹೋಟೆಲ್, ರೇಸ್ಟೊರೆಂಟ್, ಶಾಲಾ-ಕಾಲೇಜು, ಶಾಪಿಂಗ್ ಮಾಲ್ ನಡೆಸುವ ಬಲಾಢ್ಯರ ವಿರುದ್ಧ ಯಾವುದೇ ಕ್ರಮ ಜರುಗಿಸಲು ಮುಂದಾಗುತ್ತಿಲ್ಲʼ ಎಂದು ದೂರಿದರು.
ʼಅಕ್ರಮವಾಗಿ ಸಿ ಮತ್ತು ಡಿ ವರ್ಗದ ಜಮೀನಿನಲ್ಲಿ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವ ಪ್ರಭಾವಿಗಳನ್ನು ರಕ್ಷಿಸಿ ಹಲವು ದಶಕಗಳಿಂದ ಸಾಗುವಳಿ ಮಾಡುತ್ತಿರುವ ಬಡ ರೈತರನ್ನು ಒಕ್ಕಲೆಬ್ಬಿಸಿದ ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಯನ್ನು ಅಮಾನತುಗೊಳಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕುʼ ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ : ತನಿಖೆ ಆರಂಭಿಸಿದ ಸಿಐಡಿ ಅಧಿಕಾರಿಗಳು
ಪ್ರತಿಭಟನೆಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಜಿಲ್ಲಾಧ್ಯಕ್ಷ ಹಣಮಂತ ಮಟ್ಟೆ, ಕೆಆರ್‌ಎಸ್ ರಾಜ್ಯ ಸಮಿತಿ ಮುಖಂಡ ತುಕಾರಾಮ ಗೌರೆ, ಭೀಮ್ ಟೈಗರ್ ಸೇನಾ ಜಿಲ್ಲಾಧ್ಯಕ್ಷ ನರಸಿಂಗ್ ಸಾಮ್ರಾಟ್, ಭಾರತೀಯ ಜೈಭೀಮ ದಳ ವಿಭಾಗೀಯ ಅಧ್ಯಕ್ಷ ಮಾರುತಿ ಕಂಟಿ, ಕರ್ನಾಟಕ ಕ್ಷತ್ರೀಯ ಒಕ್ಕೂಟ ಉಪಾಧ್ಯಕ್ಷ ರತೀನ ಕಮಲ ಸೇರಿದಂತೆ ಪ್ರಮುಖರಾದ ಮಹೇಶ ಗೊರನಾಳಕರ್, ಅವಿನಾಶ ದೀನೆ, ಗೌತಮ ಭೋಸ್ಲೆ, ಕಲ್ಯಾಣರಾವ ಗುನ್ನಳ್ಳಿಕರ್, ವಿನೋದಕುಮಾರ್, ರಮೇಶ ಮಂದಕನಳ್ಳಿ, ಅಂಬೇಡ್ಕರ್ ಸಾಗರ್, ಶಿವಕುಮಾರ್ ಜೀರ್ಗೆ, ಈಶ್ವರ ಗುತ್ತೆದಾರ, ಧನರಾಜ ದೊಡ್ಡಮನಿ ಹಾಗೂ ವಿವಿಧ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.