ವಿವಿಧ ಇಲಾಖೆಗಳ ತಾಂತ್ರಿಕ ಸಿಬ್ಬಂದಿ ಮಾದರಿಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಿಗೂ ವೇತನ ಶ್ರೇಣಿ ನಿಗದಿಪಡಿಸಿ ಆದೇಶಿಸಬೇಕು ಎಂದು ಆಗ್ರಹಿಸಿ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಬೀದರ್ ತಾಲೂಕು ಘಟಕದಿಂದ ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ನಗರದ ತಹಶೀಲ್ದಾರ್ ಕಚೇರಿ ಎದುರುಗಡೆ ಗುರುವಾರ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದರು.
ʼಮೊಬೈಲ್, ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸುವ ಕಾರಣ ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಬೇಕು. ಮೂಲಭೂತ ಸೌಲಭ್ಯ ಕಲ್ಪಿಸಬೇಕು. ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಸೌಲಭ್ಯಗಳನ್ನು ಕಲ್ಪಿಸಬೇಕುʼ ಎಂದು ಆಗ್ರಹಿಸಿದರು.
ʼಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತ ಕಚೇರಿ, ಉತ್ತಮ ಗುಣಮಟ್ಟದ ಟೇಬಲ್ ಮತ್ತು ಕುರ್ಚಿ, ಅಲ್ಮರಾ, ಗುಣಮಟ್ಟದ ಮೊಬೈಲ್ ಫೋನ್, ಸಿಯುಜಿ ಸಿಮ್ ಮತ್ತು ಡೇಟಾ, ಗೂಗಲ್ ಕ್ರೋಮ್ ಬುಕ್, ಲ್ಯಾಪ್‌ಟಾಪ್, ಪ್ರಿಂಟರ್ ಮತ್ತು ಸ್ಕ್ಯಾನರ್ ಕಲ್ಪಿಸಬೇಕು. ಕೆಲಸದ ಅವಧಿಯ ಮುನ್ನ ಹಾಗೂ ಕೆಲಸದ ಮುಕ್ತಾಯದ ನಂತರ ನಡೆಸಲಾಗುವ ಎಲ್ಲಾ ಬಗೆಯ ವರ್ಚುವಲ್ ಸಭೆಗಳನ್ನು ಕಡ್ಡಾಯವಾಗಿ ನಿಷೇಧಿಸಬೇಕುʼ ಎಂದು ಒತ್ತಾಯಿಸಿದರು.

ʼಮನೆ ಹಾನಿ ಪ್ರಕರಣಗಳ ಜವಾಬ್ದಾರಿಯಿಂದ ಗ್ರಾಮ ಆಡಳಿತ ಅಧಿಕಾರಿಗಳನ್ನು ಕೈ ಬಿಡಬೇಕು. ಪುಯಾಣ ಭತ್ಯೆ ದರವನ್ನು 500 ರೂ.ಗಳಿಂದ 3 ಸಾವಿರಕ್ಕೆ ಹೆಚ್ಚಿಸಬೇಕು. ಕರ್ತವ್ಯ ನಿರ್ವಹಿಸುವಾಗ ಜೀವಹಾನಿ ಆಗುವ ಗ್ರಾಮ ಆಡಳಿತ ಅಧಿಕಾರಿಗಳ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಮಂಜೂರು ಮಾಡಬೇಕು. ಅಂತರ್ ಜಿಲ್ಲಾ ವರ್ಗಾವಣೆಗೆ ಅವಕಾಶ ನೀಡಬೇಕು. ಪ್ರೊಟೋಕಾಲ್ ಕೆಲಸದಿಂದ ಗ್ರಾಮ ಆಡಳಿತ ಅಧಿಕಾರಿಗಳ ಕೈ ಬಿಡುವಂತೆ ಸೂಕ್ತ ಆದೇಶ ಜಾರಿಗೊಳಿಸಬೇಕುʼ ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಅನ್ಯ ಇಲಾಖೆಯ ಕೆಲಸ ನಿರ್ವಹಿಸದಂತೆ ಸೂಕ್ತ ಆದೇಶ ನೀಡಬೇಕು. ರಾಜ್ಯದ ಗ್ರಾಮ ಸಹಾಯಕರಿಗೆ ಸೇವಾ ಭದ್ರತೆ ಒದಗಿಸುವುದು ಸೇರಿದಂತೆ ಮೊದಲಾದ ಬೇಡಿಕೆಗಳ ಹಕ್ಕೊತ್ತಾಯ ಪತ್ರವನ್ನು ಪ್ರತಿಭಟನಾ ಸ್ಥಳಕ್ಕೆಆಗಹಿಸಿದ ಬೀದರ್ ತಹಸೀಲ್ದಾರ್ ದಿಲ್ಸಾದ್ ಮೇಹತ್ ಅವರಿಗೆ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಸದಸ್ಯರ ನೇಮಕ
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಬಬ್ರುವಾಹನ ಬೆಳಮಗಿ, ಬೀದರ್ ತಾಲೂಕಾಧ್ಯಕ್ಷ ವೀರೇಶ ಬಟಕುರ್ಕಿ, ಕಾರ್ಯದರ್ಶಿ ಲಕ್ಷ್ಮೀ ಸೇರಿದಂತೆ ಗ್ರಾಮ ಆಡಳಿತ ಅಧಿಕಾರಿಗಳಾದ ಪ್ರದೀಪ ಅಂಗಡಿ, ತಿಪ್ಪೇಶ, ಬಸವರಾಜ ಹಾಗೂ ಇತರರಿದ್ದರು.