ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸ್ವಾತಂತ್ರ ದಿನಾಚರಣೆ ಸಂಬಂಧ ವಿವಿಧ ಸಂಘಟನೆಗಳ ಮುಖಂಡರು, ಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಜಿಲ್ಲಾಡಳಿತದ ವತಿಯಿಂದ ಸರ್ವರ ಸಹಕಾರದೊಂದಿಗೆ ಆಗಸ್ಟ್. 15 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು.
ಸ್ವಾತಂತ್ರ್ಯ ದಿನವನ್ನು ಅಚ್ಚುಕಟ್ಟಾಗಿ ಆಚರಿಸಲು ಈಗಾಗಲೇ ಅಧಿಕಾರಿಗಳ ಸಭೆ ನಡೆಸಲಾಗಿದೆ. ರಾಷ್ಟ್ರೀಯ ಹಬ್ಬವಾದ ಸ್ವಾತಂತ್ರ್ಯ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಸಲಹೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತದ ಜೊತೆ ಎಲ್ಲರೂ ಕೈಜೋಡಿಸಬೇಕು. ಕಾರ್ಯಕ್ರಮ ಆಯೋಜನೆ ಸಂಬಂಧ ಸಲಹೆ ಅಭಿಪ್ರಾಯಗಳನ್ನು ನೀಡಬೇಕೆಂದು ಮನವಿ ಮಾಡಿದರು.
ಇದೇ ವೇಳೆ ಮಾತನಾಡಿದ ಸಂಘಟನೆಗಳ ಮುಖಂಡರು ಸ್ವಾತಂತ್ರ್ಯ ದಿನಾಚರಣೆಯನ್ನು ಯಾವುದೇ ಲೋಪವಿಲ್ಲದೇ ಕೈಗೊಳ್ಳಬೇಕು. ಸರ್ಕಾರಿ ಶಾಲಾ ಮಕ್ಕಳಿಗೆ ಪಥ ಸಂಚಲನ, ಸ್ವಾತಂತ್ರ್ಯ ಹೋರಾಟ ಬಿಂಬಿಸುವ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕು. ಪಥಸಂಚಲನ ತಾಲೀಮು, ಸ್ವಾತಂತ್ರ್ಯೋತ್ಸವ ದಿನದಂದು ಕಾರ್ಯಕ್ರಮ ನಡೆಯುವ ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಶುದ್ದ ಕುಡಿಯುವ ನೀರು, ವೈದ್ಯರನ್ನು ಒಳಗೊಂಡ ತಂಡ, ಆಂಬುಲೆನ್ಸ್ ನಿಯೋಜನೆ ಮಾಡಬೇಕು ಎಂದರು.
ಬ್ಯಾಂಕುಗಳು, ಎಲ್ಲ ಗ್ರಾಮ ಪಂಚಾಯಿತಿಗಳು, ಶಾಲಾ ಕಾಲೇಜುಗಳು, ಕಚೇರಿಗಳಲ್ಲಿ ಸ್ವಾತಂತ್ರ್ಯ ದಿನ ಆಚರಿಸಬೇಕು. ಮಹಾತ್ಮ ಗಾಂಧಿಜಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರವಿಟ್ಟು ಗೌರವಿಸಬೇಕು. ಧ್ವಜ ಸಂಹಿತೆ ಪ್ರಕಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಬೇಕು. ಪ್ಲಾಸ್ಟಿಕ್ ಧ್ವಜಗಳು ಮಾರಾಟವಾಗಬಾರದು. ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆ, ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜಿಲ್ಲೆಯ ಸಾಧಕರನ್ನು ಸ್ವಾತಂತ್ರೋತ್ಸವದಂದು ಗೌರವಿಸಬೇಕು ಎಂಬುದೂ ಸೇರಿದಂತೆ ಹಲವು ಸಲಹೆಗಳನ್ನು ಮುಖಂಡರು ನೀಡಿದರು.
ಎಲ್ಲರ ಅಭಿಪ್ರಾಯ, ಸಲಹೆಗಳನ್ನು ಆಲಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಅವರು ಮಾತನಾಡಿ ಶಿಷ್ಟಾಚಾರ ಅನುಸಾರ ಎಲ್ಲ ಸಿದ್ದತೆಗಳನ್ನು ಮಾಡಲಾಗುತ್ತದೆ. ಈಗಾಗಲೇ, ಸ್ವಾತಂತ್ರ್ಯ ದಿನಾಚರಣೆ ಸಂಬಂಧ ಸ್ವಾಗತ ಸಮಿತಿ, ವೇದಿಕೆ ಸಮಿತಿ, ಪೆರೇಡ್ ಸಮಿತಿ, ಆಹ್ವಾನ ಪತ್ರಿಕೆ ಮುದ್ರಣ ಸಮಿತಿ, ಧ್ವಜಾ ಸಿದ್ದತಾ ಸಮಿತಿ, ಸಾಂಸ್ಕೃತಿಕ ಸಮಿತಿ ಸೇರಿದಂತೆ ಇನ್ನಿತರ ಸಮಿತಿಗಳನ್ನು ರಚಿಸಿ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ. ಸಮಿತಿಯ ಅಧ್ಯಕ್ಷರು, ಸದಸ್ಯರು ಸೂಕ್ತ ಕ್ರಮವಹಿಸಲಿದ್ದಾರೆ ಎಂದರು.
ಮುಖಂಡರು ನೀಡಿರುವ ಸಲಹೆ ಅಭಿಪ್ರಾಯಗಳ ಅನುಸಾರ ಅಧಿಕಾರಿಗಳಿಗೆ ಸಿದ್ದತೆ ಕೈಗೊಳ್ಳಲು ಸೂಚನೆ ನೀಡಲಾಗುತ್ತದೆ. ಸ್ವಾತಂತ್ರ್ಯ ದಿನದಂದು ಎಲ್ಲ ಅಧಿಕಾರಿಗಳು, ಸಿಬ್ಬಂದಿ ಕಡ್ಡಾಯವಾಗಿ ಹಾಜರಾಗುವಂತೆ ನಿರ್ದೇಶನ ನೀಡಲಾಗಿದೆ. ಹಾಜರಾತಿಯನ್ನು ತೆಗೆದುಕೊಳ್ಳಲಾಗುತ್ತದೆ. ಯಾವುದೇ ನ್ಯೂನ್ಯತೆಗಳಿಲ್ಲದೆ ಸ್ವಾತಂತ್ರ್ಯ ದಿನ ಆಚರಣೆಗೆ ಕಾರ್ಯೋನ್ಮುಖರಾಗಲು ಕ್ರಮ ತೆಗೆದುಕೊಳ್ಳಲಾಗುವುದು. ರಾಷ್ಟ್ರೀಯ ಹಬ್ಬದ ಆಚರಣೆಗೆ ಸರ್ವರು ಸಹಕಾರ ನೀಡಬೇಕು ಎಂದು ಕೋರಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಆಗಸ್ಟ್. 10 ರಂದು ಬ್ಯಾರಿ ಅಕಾಡೆಮಿ ಗೌರವ ಪ್ರಶಸ್ತಿ ಪ್ರಧಾನ; ಕುಟುಂಬ ಸಮ್ಮಿಲನ ಕಾರ್ಯಕ್ರಮ : ಉಮರ್ ಯು ಹೆಚ್
ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್, ಡಾ. ಬಿ. ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರಾಜು, ಪ್ರಾದೇಶಿಕ ಸಾರಿಗೆ ಅಧಿಕಾರಿ ಗಾಯತ್ರಿ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಕಿರಣ್, ವಿವಿಧ ಸಂಘಟನೆಗಳ ಮುಖಂಡರಾದ ವೆಂಕಟರಮಣ ಪಾಪು, ಚಾ.ರಂ. ಶ್ರೀನಿವಾಸಗೌಡ, ಮಹದೇವಶೆಟ್ಟಿ, ನಿಜಧ್ವನಿ ಗೋವಿಂದರಾಜು, ಚಾ. ಹ. ಶಿವರಾಜು, ಚಾ. ಗು. ನಾಗರಾಜು, ಪಣ್ಯದಹುಂಡಿ ರಾಜು, ಜಿ. ಬಂಗಾರು, ಸಿ. ಎಂ. ನರಸಿಂಹ ಮೂರ್ತಿ, ಬ್ಯಾಡಮುಡ್ಲು ಬಸವಣ್ಣ, ಶಿವು, ಆಲೂರುಮಲ್ಲು, ಸಿ. ಎಂ. ಶಿವಣ್ಣ, ಎಲ್. ಸುರೇಶ್, ಪರ್ವತ್‍ರಾಜ್, ಆಲೂರು ರವಿಕುಮಾರ್, ಮಹೇಶ್‍ಗೌಡ, ಇನ್ನಿತರ ಮುಖಂಡರು, ಪ್ರತಿನಿಧಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಇದ್ದರು.