ಗುಬ್ಬಿ ತಾಲ್ಲೂಕಿನ ಕಸಬ ಹೋಬಳಿ ಎಂ.ಎಚ್.ಪಟ್ಟಣ ಗ್ರಾಮ ಪಂಚಾಯಿತಿಯಲ್ಲಿ 79 ನೇ ಸ್ವಾಂತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಧ್ವಜಾರೋಹಣ ನೆರವೇರಿಸಿದ ಗ್ರಾಪಂ ಅಧ್ಯಕ್ಷ ಎಸ್.ಜೆ.ಯೋಗೀಶ್ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರದಲ್ಲಿ ಹಂತ ಹಂತವಾಗಿ ಎಲ್ಲಾ ಕ್ಷೇತ್ರದಲ್ಲೂ ಬೆಳೆದು ಇಂದು ವಿಶ್ವಕ್ಕೆ ನಮ್ಮ ಶಕ್ತಿ ಏನೆಂಬುದು ತಿಳಿಸಿದೆ. ಮುಂದಿನ ದಿನಗಳಲ್ಲಿ ಯುವಶಕ್ತಿ ಮತ್ತಷ್ಟು ಶಕ್ತಿಯುತವಾಗಿ ಬೆಳೆದು ನಮ್ಮ ದೇಶವನ್ನು ಮೊದಲ ಸ್ಥಾನಕ್ಕೆ ತರಲು ಮುನ್ನುಗ್ಗುತ್ತಿದೆ. ಈ ಸಮಯದಲ್ಲಿ ದೇಶಾಭಿಮಾನ ಬೆಳೆಸಬೇಕಿದೆ. ನಮ್ಮ ಪೂರ್ವಜರು ಮಾಡಿದ ತ್ಯಾಗ ಬಲಿದಾನ ಬಗ್ಗೆ ತಿಳಿಸಬೇಕಿದೆ. ಈ ಕೆಲಸ ಗ್ರಾಮೀಣ ಭಾಗದಲ್ಲಿ ಮೊದಲು ಆರಂಭವಾಗಬೇಕಿದೆ. ಶಾಲೆಯಲ್ಲಿ ನಡೆಯುವ ಈ ಕಾರ್ಯಕ್ರಮ ಸಾರ್ವಜನಿಕವಾಗಿ ಪ್ರತಿ ವರ್ಷ ನಾಡಹಬ್ಬ, ರಾಷ್ಟ್ರೀಯ ಹಬ್ಬ ಆಚರಣೆ ಮಾಡಲು ಸ್ಥಳೀಯ ಪಂಚಾಯಿತಿ ಮುಂದಾಗಬೇಕು ಎಂದು ಕರೆ ನೀಡಿದರು.
ಪಿಡಿಓ ಕೆ.ಎಂ.ಶೇಖರ್ ಮಾತನಾಡಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಡೆಯುವ ಆಚರಣೆ ಸಾರ್ವಜನಿಕವಾಗಿ ನಡೆಸಿ ಜಾಗೃತಿ ಮೂಡಿಸುವ ಕೆಲಸ ಚುನಾಯಿತ ಪ್ರತಿನಿಧಿಗಳ ಜೊತೆ ನಡೆಸುತ್ತೇವೆ. ಈ ಜೊತೆಗೆ ಸ್ವಚ್ಛತೆ, ಪರಿಸರ ಸಂರಕ್ಷಣೆ ಬಗ್ಗೆ ಅರಿವು ಸಹ ಮೂಡಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಬಗರ್ ಹುಕುಂ ಸಮಿತಿ ಸದಸ್ಯ ನರಸಿಂಹಯ್ಯ, ಸೊಸೈಟಿ ಕಾರ್ಯದರ್ಶಿ ಉಪೇಂದ್ರ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು, ಸದಸ್ಯರು, ಶಾಲಾ ಸಿಬ್ಬಂದಿ ಹಾಗೂ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.