ಬೀದರ್ ಜಿಲ್ಲೆಯಲ್ಲಿ ಅತಿದೊಡ್ಡ ಗ್ರಾಮ ಪಂಚಾಯಿತಿಗಳಲ್ಲಿ ಒಂದಾದ ಮನ್ನಾಏಖೇಳ್ಳಿ ಅದೇಕೋ ಮೇಲ್ದರ್ಜೆಗೇರುವ ಭಾಗ್ಯ ದೊರಕುತ್ತಿಲ್ಲ. ಇದರಿಂದ ಸಂಪೂರ್ಣ ಅಭಿವೃದ್ಧಿಗೆ ತೊಡಕು ಉಂಟಾಗುತ್ತಿದೆ ಎನ್ನುವ ಕೂಗು ಬಲವಾಗಿ ಕೇಳಿ ಬರುತ್ತಿದೆ.
ಚಿಟಗುಪ್ಪ ತಾಲೂಕಿನ ಮನ್ನಾಏಖೇಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 9 ವಾರ್ಡ್‌ಗಳಿದ್ದು, 31 ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಹೆಚ್ಚಿನ ಜನಸಂಖ್ಯೆ, ವ್ಯಾಪಾರ, ವಹಿವಾಟು ಹಾಗೂ ದೊಡ್ಡ ಹೋಬಳಿ ಕೇಂದ್ರವೂ ಆಗಿರುವ ಮನ್ನಾಏಖೇಳ್ಳಿ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವ ದಶಕದಿಂದ ನನೆಗುದಿದೆ ಬಿದ್ದಿದೆ.
2011ರ ಜನಗಣತಿ ಪ್ರಕಾರವೇ 12,000 ಜನಸಂಖ್ಯೆ ಇತ್ತು. ಇದೀಗ ಸರಿಸುಮಾರು ಅದರ ದುಪ್ಪಟ್ಟು ಜನಸಂಖ್ಯೆ ಇದೆ. ಹೈದರಾಬಾದ್-ಮುಂಬಯಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಮನ್ನಾಏಖೇಳ್ಳಿ ಈಚೆಗೆ ವೇಗವಾಗಿ ಬೆಳೆಯುತ್ತಿದೆ. ಆದರೆ, ಗ್ರಾಮ ಪಂಚಾಯತಿಗಳಿಗೆ ನೀಡುವ ಸರ್ಕಾರದ ಅಲ್ಪ ಅನುದಾನ ಈ ದೊಡ್ಡ ಗ್ರಾಮ ಪಂಚಾಯಿತಿ ಸಮಗ್ರ ಅಭಿವೃದ್ಧಿಗೆ ಸಾಧ್ಯವಾಗುತ್ತಿಲ್ಲ ಎಂಬುದು ಗ್ರಾಮ ಪಂಚಾಯಿತಿ ಸದಸ್ಯರು ಹೇಳುತ್ತಾರೆ.
ಸಮುದಾಯ ಆರೋಗ್ಯ ಕೇಂದ್ರ, ನಾಡ ಕಚೇರಿ, ಪೊಲೀಸ್ ಠಾಣೆ, ಬಸ್ ನಿಲ್ದಾಣ, ಅಂಚೆ ಕಚೇರಿ, ಬ್ಯಾಂಕ್, ಪಶುಪಾಲನಾ ಆಸ್ಪತ್ರೆ, ಶಾಲಾ-ಕಾಲೇಜು, ಜೆಸ್ಕಾಂ ಕಚೇರಿ ಇವೆ. ಜನಸಾಮಾನ್ಯರಿಗೆ ಪ್ರತಿನಿತ್ಯ ಬೇಕಾಗುವ ಬಹುತೇಕ ಎಲ್ಲ ಸರ್ಕಾರಿ ಕಚೇರಿಗಳು ಮತ್ತು ಜನರ ಬದುಕಿಗೆ ಬೇಕಾಗುವ ಎಲ್ಲ ಸೌಲಭ್ಯಗಳು ಮನ್ನಾಏಖೇಳ್ಳಿಯಲ್ಲಿ ಸಿಗುತ್ತವೆ. ಅಲ್ಲದೆ ವಿವಿಧ ಕೆಲಸ ಕಾರ್ಯಗಳಿಗೆ ತೆಲಂಗಾಣ ಗಡಿ ಗ್ರಾಮದ ಜನರ ಒಡನಾಟವೂ ಇಲ್ಲಿ ನಿರಂತರವಾಗಿದೆ.
ʼಪಟ್ಟಣ ಪಂಚಾಯಿತಿಯಾಗಿ ಮನ್ನಾಏಖೇಳ್ಳಿ ಬದಲಾದರೆ ಸುಮಾರು ₹5 ಕೋಟಿಯಷ್ಟು ನೇರ ಅನುದಾನ ಸಿಗಲಿದೆ. ಕರ ವಸೂಲಾತಿ ಸೇರಿದಂತೆ ಆದಾಯ ದ್ವಿಗುಣ ಆಗಲಿದೆ. ಇದರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಹಣದ ಕೊರತೆ ಕಾಡುವುದಿಲ್ಲ. ಜೊತೆಗೆ ಜನರ ಬೇಡಿಕೆಯಂತೆ ಸರ್ಕಾರಿ ಪದವಿ ಪೂರ್ವ ಕಾಲೇಜು, ಐಟಿಐ ಕಾಲೇಜು ಸೇರಿದಂತೆ ಇತರೆ ಯೋಜನೆಗಳು ಮಂಜೂರಾಗುತ್ತವೆ. ಹೀಗಾಗಿ ಪಟ್ಟಣ ಪಂಚಾಯಿತಿ ಸ್ಥಾನಮಾನ ಅಗತ್ಯವಿದೆʼ ಎಂದು ಮನ್ನಾಏಖೇಳ್ಳಿ ಗ್ರಾ.ಪಂ. ಅಧ್ಯಕ್ಷ ರಾಜಕುಮಾರ ಅಗಸಿ ಅಭಿಪ್ರಾಯಪಡುತ್ತಾರೆ.

ಮನ್ನಾಏಖೇಳ್ಳಿ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಬೇಕೆಂದು 2014, 2016 ಹಾಗೂ 2019ರಲ್ಲಿ ಗ್ರಾಮ ಪಂಚಾಯಿತಿ ಸಭೆಯಲ್ಲಿ ಸದಸ್ಯರು ಒಮ್ಮತದ ನಿರ್ಣಯ ಮಂಡಿಸಿದ ಪ್ರತಿಯನ್ನು ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಲ್ಲಿಸಿ ಒತ್ತಾಯಿಸಿದ್ದಾರೆ. 2011ರ ಜನಗಣತಿ ಆಧರಿಸಿ ಪಟ್ಟಣ ಪಂಚಾಯಿತಿಯನ್ನಾಗಿ ರಚಿಸುವ ಕುರಿತು 2013ರಲ್ಲಿ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಜಿಲ್ಲಾಧಿಕಾರಿಗಳಿಗೆ ಪತ್ರ ರವಾನಿಸಲಾಗಿತ್ತು. 2020ರಲ್ಲಿ ಬೀದರ್ ಜಿಲ್ಲಾ ಪಂಚಾಯಿತಿ ಸಿಇಒ ಅವರು ಜಿಲ್ಲಾಧಿಕಾರಿಗಳಿಗೆ ಈ ಕುರಿತು ಪತ್ರ ಬರೆದು ಪ್ರಸ್ತಾವನೆ ಸಲ್ಲಿಸಲು ತಿಳಿಸಿದ್ದರು. ಆದರೆ, ಇಲ್ಲಿಯವರೆಗೆ ಯಾವುದೇ ಪ್ರಯೋಜನೆಯಾಗಿಲ್ಲ ಎಂದು ಪ್ರಜ್ಞಾವಂತ ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಮನ್ನಾಏಖೇಳ್ಳಿ ದೊಡ್ಡ ಹೋಬಳಿ ಕೇಂದ್ರವಾಗಿದೆ, ಈ ಹಿಂದೆ ಮನ್ನಾಏಖೇಳ್ಳಿ ತಾಲೂಕು ಆಗಬೇಕೆಂಬ ಬೇಡಿಕೆಯೂ ಇತ್ತು. ಅದು ಫಲಿಸದ ಕಾರಣ ಚಿಟಗುಪ್ಪ ಹೊಸ ತಾಲೂಕಾಗಿದೆ. ಕ್ಷಿಪ್ರವಾಗಿ ಬೆಳೆಯುತ್ತಿರುವ ಮನ್ನಾಏಖೇಳ್ಳಿ ಪಟ್ಟಣ ಪಂಚಾಯಿತಿ ಘೋಷಿಸಿದರೆ ಸಮಗ್ರ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂದು ಗ್ರಾಮ ಪಂಚಾಯತ್ ಸದಸ್ಯ ಎಂ.ಡಿ. ಖುದ್ದುಸ್ ಆಗ್ರಹಿಸಿದರು.
ಚಿಟಗುಪ್ಪಾ ತಾಲೂಕು ವ್ಯಾಪ್ತಿಯಲ್ಲಿರುವ ಮನ್ನಾಏಖೇಳ್ಳಿ ಬೀದರ್ ದಕ್ಷಿಣ ಕ್ಷೇತ್ರಕ್ಕೆ ಒಳಪಡುತ್ತದೆ. ಕ್ಷೇತ್ರದಲ್ಲಿ ಇಲ್ಲಿಯವರೆಗೆ ಪ್ರತಿನಿಧಿಸಿದ ಶಾಸಕರು ಇಚ್ಚಾಶಕ್ತಿ ತೋರದಿರುವ ಕಾರಣಕ್ಕೆ ದಶಕದಿಂದ ಪಟ್ಟಣ ಪಂಚಾಯಿತಿ ಕನಸು ಇನ್ನೂ ಈಡೇರಲಿಲ್ಲ. ಈಗ ತವರು ಜಿಲ್ಲೆಯವರೇ ಆಗಿರುವ ಪೌರಾಡಳಿತ ಸಚಿವ ರಹೀಂ ಖಾನ್ ಈಗಲಾದರೂ ರಾಜಕೀಯ ಇಚ್ಚಾಶಕ್ತಿ ಪ್ರದರ್ಶಿಸಿ ಜನರ ದಶಕದ ಕನಸು ನನಸು ಮಾಡಬೇಕೆಂಬುದು ಸಾರ್ವಜನಿಕರ ಆಗ್ರಹ.
ಈ ಸುದ್ದಿ ಓದಿದ್ದೀರಾ? ಹಿರಿಯ ಸಾಹಿತಿ ದೇವನೂರ ಮಹಾದೇವರಿಗೆ ವೈಕಂ ಪ್ರಶಸ್ತಿ
ಎಲ್ಲ ಅರ್ಹತೆ ಇದ್ದರೂ ಮನ್ನಾಏಖೇಳ್ಳಿ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಭರವಸೆ ನೀಡಿದ್ದಾರೆ. ಹೀಗಾಗಿ ಮೇಲ್ದರ್ಜೆಗೇರುವ ನೀರಿಕ್ಷೆಯನ್ನು ಹುಟ್ಟುಹಾಕಿದೆ. ಕಾದು ನೋಡಬೇಕಷ್ಟೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.