ಸತತ ಮಳೆಯಿಂದಾಗಿ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ನೀರಿನ ಮಟ್ಟ ದಿನೆದಿನೇ ಏರುತ್ತಿದೆ. ಹಾಗಾಗಿ, ಸುರಕ್ಷಿತ ಸ್ಥಳಗಳಿಗೆ ತೆರಳಲು ಜಲಾಶಯ ಪಾತ್ರದ ನಿವಾಸಿಗಳಿಗೆ ಸೂಚನೆ ನೀಡಲಾಗಿದೆ.
ಜುಲೈ 15 ರಂದು ಬೆಳಗ್ಗೆ 8 ಗಂಟೆಯ ವೇಳೆಗೆ ಜಲಾಶಯದ ನೀರಿನ ಮಟ್ಟವು 1801.10 ಅಡಿಗಳನ್ನು ತಲುಪಿದ್ದು, ಇದು ಜಲಾಶಯದ ಗರಿಷ್ಠ ಮಟ್ಟವಾದ 1819.00 ಅಡಿಗಳಲ್ಲಿ ಸುಮಾರು 65.12% ಆಗಿದೆ. ಈ ದಿನದ ಒಳಹರಿವು ಸುಮಾರು 32,000 ಕ್ಯೂಸೆಕ್ಸ್ ಗಿಂತ ಹೆಚ್ಚು ದಾಖಲಾಗಿದೆ. ಮುಂದಿನ ದಿನಗಳಲ್ಲಿ ಇದೇ ರೀತಿಯ ಮಳೆ ಮುಂದುವರೆದರೆ, ಜಲಾಶಯವು ಶೀಘ್ರದಲ್ಲೇ ಗರಿಷ್ಠ ಮಟ್ಟ ತಲುಪುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಯಾವುದೇ ಸಮಯದಲ್ಲೂ ಹೆಚ್ಚುವರಿ ನೀರನ್ನು ಅಣೆಕಟ್ಟೆಯಿಂದ ಹೊರಬಿಡುವ ಸಾಧ್ಯತೆ ಇರುವುದರಿಂದ, ಅಣೆಕಟ್ಟೆಯ ಕೆಳ ಭಾಗದ ನದಿ ಪಾತ್ರದಲ್ಲಿರುವ ಗ್ರಾಮಸ್ಥರು ತಾವೂ ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿಕೊಳ್ಳಬೇಕೆಂದು ಕಾರ್ಯನಿರ್ವಾಹಕ ಅಭಿಯಂತರರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಉತ್ತರ ಕನ್ನಡ | ರೈತನ ಮೇಲೆ ಕರಡಿ ದಾಳಿ
ಇದೇ ವೇಳೆ ಪ್ರವಾಸಿಗರು ನದಿಯ ನೀರಿಗೆ ಇಳಿಯುವುದು ತಪ್ಪಿಸಿ, ತಮ್ಮ ಜೀವಭದ್ರತೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಸೂಚಿಸಲಾಗಿದೆ. ಜಲಾಶಯದ ಪರಿಸ್ಥಿತಿಯ ಮೇಲಿನ ನಿಗಾವಹಿಸಿ, ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ಸಂಬಂಧಿತ ಇಲಾಖೆಯ ಸಂಪರ್ಕದಲ್ಲಿರಲು ವಿನಂತಿಸಲಾಗಿದೆ.