ಇತ್ತೀಚೆಗಷ್ಟೇ 400 ಟ್ರೈನಿ ಉದ್ಯೋಗಿಗಳನ್ನು ವಜಾಗೊಳಿಸಿದ್ದ ಉದ್ಯಮಿ ನಾರಾಯಣ ಮೂರ್ತಿ ಅವರ ಇನ್ಫೋಸಿಸ್ ಸಂಸ್ಥೆ, ಇದೀಗ ಮತ್ತೆ 240 ಟ್ರೈನಿ ಉದ್ಯೋಗಿಗಳನ್ನು ವಜಾಗೊಳಿಸಿದೆ.
ಮೈಸೂರಿನಲ್ಲಿ ಇನ್ಫೋಸಿಸ್ ಕ್ಯಾಂಪಸ್‌ಗೆ ಟ್ರೈನಿ ಉದ್ಯೋಗಿಗಳಾಗಿ ಆಯ್ಕೆಯಾಗಿದ್ದ 240 ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಉದ್ಯೋಗಿಗಳು ಆಂತರಿಕ ಮೌಲ್ಯಮಾಪನಗಳಲ್ಲಿ ಉತ್ತೀರ್ಣರಾಗಿಲ್ಲ ಕಾರಣ ವಜಾಗೊಳಿಸಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಉದ್ಯೋಗ ಕಳೆದುಕೊಂಡಿರುವ 240 ಟ್ರೈನಿ ಉದ್ಯೋಗಿಗಳನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸಂಸ್ಥೆ ನೇಮಕ ಮಾಡಿಕೊಂಡಿತ್ತು. ಆದರೆ, ಆರೇ ತಿಂಗಳಲ್ಲಿ ಅವರನ್ನು ಸಂಸ್ಥೆಯಿಂದ ಹೊರಹಾಕಲಾಗಿದೆ.
ಇನ್ನೂ ಹಲವು ಟ್ರೈನಿ ಉದ್ಯೋಗಿಗಳ ಆಂತರಿಕ ಮೌಲ್ಯಮಾಪನವನ್ನು ಸಂಸ್ಥೆಯು ನಡೆಸುತ್ತಿದ್ದು, ಆ ಫಲಿತಾಂಶಗಳು ಬಂದ ಬಳಿಕ, ಇನ್ನೂ ಹಲವರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಆದಾಗ್ಯೂ, ಹಾಲಿ ವಜಾಗೊಂಡಿರುವವರು 240 ಮಂದಿ ಅಲ್ಲ. 370 ಮಂದಿ ಎಂದು ಉದ್ಯೋಗ ಕಳೆದುಕೊಂಡಿರುವ ಟ್ರೈನಿಯೊಬ್ಬರು ಹೇಳಿದ್ದಾರೆ.
ಇನ್ಫೋಸಿಸ್ ರೀತಿಯ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡಲು ಉತ್ಸುಕರಾಗಿದ್ದೆವು. ನಾನಾ ರೀತಿಯ ಕನಸು ಕಂಡಿದ್ದೆವು. ಆದರೆ, ಕಂಪನಿಯು ತನ್ನ ಉತ್ಸಾಹ, ಕನಸುಗಳಿಗೆ ತಣ್ಣೀರು ಎರಚಿದೆ ಎಂದು ವಜಾಗೊಂಡವರು ಬೇಸರ ವ್ಯಕ್ತಪಡಿಸಿದ್ದಾರೆ.
ಇದೇ ವರ್ಷದ ಫೆಬ್ರವರಿಯಲ್ಲಿ, ಮೈಸೂರಿನಲ್ಲಿರುವ ಇನ್ಫೋಸಿನ್ ಕ್ಯಾಪಂಸ್‌ನಲ್ಲಿ ಹಲವು ತಿಂಗಳುಗಳ ಕಾಲ ಮೂಲಭೂತ ತರಬೇತಿ ಪಡೆದ 400ಕ್ಕೂ ಹೆಚ್ಚು ಹೊಸ ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸಲಾಗಿತ್ತು. ಇನ್ಫೋಸಿಸ್‌ನ ಧೋರಣೆಯ ವಿರುದ್ಧ ಐಟಿ ವಲಯದ ಸಂಘಟನೆಯಾದ ‘ನಸೆಂಟ್ ಇನ್ಫರ್ಮೇಷನ್ ಟೆಕ್ನಾಲಜಿ ಉದ್ಯೋಗಿಗಳ ಸೆನೆಟ್’ (NITES) ಕಾರ್ಮಿಕ ಸಚಿವಾಲಯಕ್ಕೆ ದೂರು ನೀಡಿತ್ತು. ಮಾತ್ರವಲ್ಲದೆ, ವಜಾಗೊಳಿಸಲಾಗಿರುವ ಉದ್ಯೋಗಿಗಳ ಸಂಖ್ಯೆ 300 ಅಲ್ಲ, 700 ಎಂದು ವಾದಿಸಿತ್ತು. ಇನ್ಫೋಸಿಸ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿತ್ತು.