ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡಲೇ ಕ್ಷಮೆಯಾಚಿಸಬೇಕೆಂದು ಜಾಗತಿಕ ಲಿಂಗಾಯತ ಮಹಾಸಭಾ ಜೇವರ್ಗಿ ತಾಲ್ಲೂಕು ಘಟಕದ ಅಧ್ಯಕ್ಷ ನೀಲಕಂಠ ಅವಂಟಿ ಆಗ್ರಹಿಸಿದ್ದಾರೆ.
ಕಲಬುರಗಿ ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಇತ್ತೀಚೆಗೆ ಬಿಜೆಪಿಯಿಂದ ಬೀದರ್‌ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಬಸವಣ್ಣನವರು ಹೊಳೆಗೆ ಹಾರಿ ಪ್ರಾಣ ಬಿಟ್ಟರು ಎಂಬ ಆಧಾರ ರಹಿತ ಸುಳ್ಳನ್ನು ತಮ್ಮ ಭಾಷಣದಲ್ಲಿ ಹೇಳಿಕೆ ನೀಡಿರುವುದು ಖಂಡನಾರ್ಹವಾಗಿದೆ’ ಎಂದರು.
ಬಸವಣ್ಣನವರ ಬಗ್ಗೆ ಶಾಸಕ ಯತ್ನಾಳ್ ಬಹಳ ಹಗುರವಾಗಿ ಮಾತನಾಡಿ ಅಕ್ಷಮ್ಯ ಅಪರಾಧ ಎಸಗಿದ್ದಾರೆ. ಕೂಡಲೇ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ, ಅವರ ವಿರುದ್ಧ ಕಾನೂನು ಶಿಸ್ತು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಲಿಂಗಾಯತ ಧರ್ಮ ಸಂಸ್ಥಾಪಕ ವಿಶ್ವಗುರು ಬಸವಣ್ಣನವರನ್ನು ಅಪಮಾನಿಸಿದ ಯತ್ನಾಳ್ ಅವರಿಗೆ ಇನ್ಮುಂದೆ ಪಕ್ಷ ಹಾಗೂ ಸರ್ಕಾರದ ವತಿಯಿಂದ ಲಿಂಗಾಯತ ಮೀಸಲಾತಿ ಕೋಟಾದಲ್ಲಿ ಯಾವುದೇ ಸೌಲಭ್ಯ ನೀಡಬಾರದು ಎಂದು ವಿಧಾನಸಭೆ ಸಭಾಪತಿಗಳಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಹಾಸ್ಟೆಲ್‌ನಲ್ಲಿ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ
ಪತ್ರಿಕಾಗೋಷ್ಠಿಯಲ್ಲಿ ಮಹಾಸಭಾದ ಪ್ರಮುಖರಾದ ಶರಣಬಸಪ್ಪ ಕಲ್ಲಾ, ನಾಗನಗೌಡ ಮಾಲಿಪಾಟೀಲ್, ಮಹಾಂತ ಸಾಹು ಹರವಾಳ, ಹಣಮಂತರಾಯ ಕಲಶೆಟ್ಟಿ ಇತರರಿದ್ದರು.