ಭಾಲ್ಕಿ ತಾಲ್ಲೂಕಿನ ದಾಡಗಿ ಕ್ರಾಸ್ ಬಳಿ ವಿಶ್ವಗುರು ಬಸವಣ್ಣನವರ ಪ್ರತಿಮೆಗೆ ವಿರೂಪಗೊಳಿಸಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಔರಾದ್ ತಾಲ್ಲೂಕು ಘಟಕ ಆಗ್ರಹಿಸಿದೆ.
ಈ ಕುರಿತು ಬುಧವಾರ ಜಿಲ್ಲಾಧಿಕಾರಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ತಹಸೀಲ್ದಾರ್ ಮಲ್ಲಶೆಟ್ಟಿ ಚಿದ್ರೆ ಅವರಿಗೆ ಸಲ್ಲಿಸಿದರು.
ʼಕರ್ನಾಟಕ ಸಾಂಸ್ಕ್ರತಿಕ ನಾಯಕ ವಿಶ್ವಗುರು ಬಸವಣ್ಣನವರ ಪ್ರತಿಮೆಗೆ ಅವಮಾನ ಮಾಡಿರುವುದು ಖಂಡನೀಯ. ಇತ್ತೀಚೆಗೆ ಜಿಲ್ಲೆಯಲ್ಲಿ ಡಾ.ಅಂಬೇಡ್ಕರ್, ಬಸವಣ್ಣನವರ ಪ್ರತಿಮೆ, ಭಾವಚಿತ್ರಕ್ಕೆ ಅವಮಾನಿಸುವ ಘಟನೆಗಳು ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ. ಇಂತಹ ಘಟನೆಗಳು ಮರುಕಳಿಸದಂತೆ ಸಂಬಂಧಪಟ್ಟ ಇಲಾಖೆ ನಿಗಾ ವಹಿಸಬೇಕುʼ ಎಂದು ಆಗ್ರಹಿಸಿದರು.
ಬಸವಣ್ಣ ಪ್ರತಿಮೆಗೆ ಅಪಮಾನಿಸಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ, ದೇಶದ್ರೋಹ ಪ್ರಕರಣ ದಾಖಲಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಬಸವಣ್ಣನವರ ಪ್ರತಿಮೆಗೆ ಅಪಮಾನ ವಿಚಾರ : ಬೀದರ್ ಎಸ್ಪಿ ಹೇಳಿದ್ದೇನು?
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ತಾಲ್ಲೂಕಾಧ್ಯಕ್ಷ ಸುಭಾಷ್ ಲಾಧಾ, ಮುಖಂಡ ಸುಧಾಕರ್ ಕೊಳ್ಳೂರ್, ಸಹ ಸಂಚಾಲಕರಾದ ಗಣಪತಿ ವಾಸುದೇವ, ಸಂಜುಕುಮಾರ ನಾಗೂರೆ, ದತ್ತಾತ್ರಿ ನಾಗೂರೆ(ಬಿ), ರಾಜಕುಮಾರ್ ಸಿಂಧೆ, ಕೇಶವ ಗುಡಪಳ್ಳಿ ಮತ್ತಿತರರಿದ್ದರು.